ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಎನಿಸು ಕಾಲ
ಈ ಶಿಲಾ ರೂಪ
ಬುದ್ಧ ಬಸವಾಲ್ಲಮರ
ವರ್ಷಧಾರೆಗೂ
ಕರಗಲಿಲ್ಲ ಸೊರಗಲಿಲ್ಲ!
ಪಾಷಾಣ ರೂಪ
ಪ್ರಾರಬ್ಧ ವೆಂದೇ ಬಗೆದಳಾ
ಅಹಲ್ಯೆ ಮಾಡದ ತಪ್ಪಿಗೂ
ಶಿಕ್ಷೆ ತನ್ನವನಿಂದಲೆ
ಬಿಗಿದ ಬಾಯಿ
ದಿಗ್ಭ್ರಾಂತ ಮೊಗ
ವ್ಯಾಕುಲತೆ ಆಳದಲ್ಲಿ
ಮಿಸುಕುವಂತಿಲ್ಲ, ಕೊಸರುವಂತಿಲ್ಲ
“ಸತಿ ಧರ್ಮ”
ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನೆಂಬ
ಅನೃತ ಪಾಪ ಪುಣ್ಯಗಳ ಭೀತಿ
ಸ್ಮೃತಿ ಭಿತ್ತಿ ಮೇಲೆ
ಕೊನೆಗೊಳ್ಳದ
ಸಂಕೋಲೆ!
ತುತ್ತಿನ ಚೀಲ ತುಂಬಿಸಲು
ನಡೆವರಿವರಿಗೆ
ಗತಜ್ಞಾನ ಕಟ್ಟಿಕೊಂಡು
ಮಾಡುವುದೇನು!
ಪೀಠಗಳ ನೋಟವೂ
ರಾಶಿ ಕೂಟ
ತಾರಾಬಲ ಚಂದ್ರಾಬಲ
ಋಣ ಸಂಬಂಧದೆಡೆಗೆ
ಶಿಲೋದ್ಭವಿ ಗುರುವಿಂಗೆ
ಪಾಷಾಣದನುಯಾಯಿಗಳು!
ಸಾಕು ರೇಷನ್ನು,
ಬರ್ಷನ್ನು, ಕರೆಂಟು ಬಿಲ್ಲು
ಕಾಲಳತೆ ದೂರಕ್ಕೂ ಬಸ್ ಕಾಯ್ವ ಭಾಗ್ಯ
ಕಾಂಚಾಣದಾಸೆ ಅತ್ತೆಗೂ ಸೊಸೆಗೂ
ಆರ್ಥಿಕ ಸ್ವಾಯತ್ತವಿಲ್ಲದವರಿಗೆ
ಅರ್ಥವನರ್ಥವೇ!