ಕಾವ್ಯ ಸಂಗಾತಿ
ಅನಿತಾ ಮಾಲಗತ್ತಿ
ಕಟ್ಟೆ ಪುರಾಣ
ಎಷ್ಟು ಚೆಂದವಿತ್ತು ಆ ಕಾಲ
ಇಡೀ ದಿನ ಶ್ರಮ ಮರೆತು
ಕಳೆಯುತ್ತಿದ್ದೆವು ಕಟ್ಟಿಯ ಮೇಲೆ
ಮಿತಿಯಿರದೇ ವಯಸ್ಸಿಗೆ : ಗಡಿಯಾರಕೂ
ಹರಟವುದೊಂದೇ ಗೊತ್ತು ಕಟ್ಟೆ ಪುರಾಣಕೆ!
ಅತ್ತೆ ಸೊಸೆಯ ಆಡಿಕೊಂಡರೆ
ಸೊಸೆಯ ಬಾಯಲ್ಲಿ ಅತ್ತೆಯ ಗುಣಗಾನ
ಅತ್ತೆ – ಸೊಸೆಯರ ಜಟಾಪಟಿಯ ಚಿತ್ರ
ಜಯಕ್ಕನ ಬೊಂಬಾಯಿ ಬಾಯಲ್ಲಿ!
ಮದುವೆಯಾಗದೇ ಉಳಿದ ಮಗಳ ಸುದ್ಧಿ
ಮದುವೆ ಆಗಿ ಮಕ್ಕಳಿಲ್ಲದವರ ವ್ಯಥೆ
ಮದುವೆ ಬೇಡವೆಂದುಳಿದವರ ಅಳಲು
ಮದುವೆಗೆ ಸೀರೆ ಕುಪ್ಪಸದ ಚಿಂತೆಗಳು!
ಸವತೆ ಬೀಜದ ಹಿಟ್ಟಿನಂತೆ ಕರಗುವ
ಸಾವಂತ್ರಮ್ಮನ ಚಂಚಿಯೊಳಗಿನ ಕಥೆಗಳು
ಚವಳೇಯೊಳಗಿನ ನರ್ಸ ತೆಗೆದಂತೆ
ಮಾದಮ್ಮನ ನೀತಿ ಮಾತುಗಳು!
ಬಂಜೆ ಬಂಗಾರಮ್ಮನ ಹೊಗಳಿಕೆ
ಸಂಜೆ ಕುಡಿದು ಬರುವವರ ತೆಗಳಿಕೆ
ಗಂಜಿ ಕುಡಿದು ಬದುಕಿದವರ ಕಥೆ
ಎಂಜಲು ತಿನ್ನುವ ಭಂಡರ ಬಾಳ್ವೆಗಾಥೆ
ಬಿಡಿಸಿಟ್ಟ ಸೊಪ್ಪಿನಂತೆ ನಿಚ್ಚಳ
ಹೆಣ್ಮಕ್ಕಳ ಸಮಸ್ಯೆಗೆ ಪರಿಹಾರ
ಸಂತೆ ಮಾಲುಗಳ ದರಗಳ ಚರ್ಚೆ
ಗುಟ್ಟುಗಳ ಗಟ್ಟಿಮೇಳ ಗಂಗಿಬಾಯಿಂದ
ಆಯಾ ವಾರಗಳಲಿ ಸತ್ತವರ ಸುತ್ತ
ಬಿಚ್ಚುವ ಪಾಪ – ಪುಣ್ಯಗಳ ಸುರುಳಿಗಳು
ಸಾಯದೆ ಉಳಿದವರ ಸುತ್ತಲೂ
ಹಿಡಿ ಶಾಪದ ಸರಮಾಲೆಗಳು!!
ಸೆಖೆಎಂಬುದು ನೆಪ ಮಾತ್ರಕೆ
ಮಿಕ್ಕಿಯೇ ಬಿಡುತ್ತಿತ್ತು ನಿತ್ಯದ ಪುರಾಣ
ಬದಲಾದರೇನು ಮಳೆ ಚಳಿ ಬಿಸಿಲು ಕಾಲಗಳು
ಬರವಿರದೇ ಬೀಸಿ ಬರುವ ಬಿಸಿ ಸುದ್ದಿಗಳು!
ಕಳೆದುಕೊಂಡೆವೇ ಕಟ್ಟಿಯ ಮನೆಗಳ!
ಬಾಳ ಹೊರಟು ಸ್ವಾರ್ಥದ ಬದುಕ
ಮರೆಯಾಗಿ ಹೋದವೇ ಕಟ್ಟೆಗಳು?
ಹುದುಗಿ ಹೋದವೇ ಗಾರೆಗಳ ಮಧ್ಯೆ
ಕಟ್ಟೆ ಪುರಾಣಗಳು!!
——————————–
ಅನಿತಾ ಮಾಲಗತ್ತಿ
ವಾವ್ ಅನಿತಾ…. ಎಷ್ಟು ಚೆಂದಾಗಿ ಬರೆದಿದ್ದೀರಿ… ನಿಜಾ ಕಟ್ಟೆಗಳು ಸಮಾಧಿಯಾಗಿವೆ ಈಗ…. ಹಳೆ ಬದುಕು ನೆನಪಿಸುವ ಕವಿತೆ….
Super,feeling words& memories madam
Very happy for u anita chikki
Super.