ಕಾವ್ಯ ಸಂಗಾತಿ
ನದಿಗಳಿಗೂ ನೆನಪಿದೆ
ಶಾಂತಾ ಜಯಾನಂದ್
ದಟ್ಟ ಕಾನನದ ನಡುವೆ
ಪುಟ್ಟ ಬುಗ್ಗೆಯಾಗಿ
ಹಾದಿಯುದ್ದಕ್ಕೂ ಸಾಗುವ
ನದಿಗಳಿಗೂ ನೆನಪಿದೆ
ನಾಗರೀಕತೆಗಳ ಯಾನ
ಹಸಿರ ಬನಿ ಉಕ್ಕಿ
ಊರೂರು ಬೆಳೆದು
ಕಾಡೆಲ್ಲಾ ನಾಡಾಗಿ
ನಾಡೇ ಜನರ ಬೀಡಾದ ಕತೆ
ನದಿಗಳಿಗೂ ನೆನಪಿದೆ
ಪುಟ್ಟ ಹಳ್ಳ ಸಣ್ಣ ಝರಿ
ಪುಟ್ಟ ತೊರೆಗಳೊಂದಾಗಿ ಭೋರ್ಗರೆವ ನದಿ ಕಡಲ ಸೇರುವಾಗ
ಹರಿದು ಬಂದ ಹಾದಿಯನು
ಮರೆಯುವುದಿಲ್ಲ
ನದಿಗಳಿಗೂ ನೆನಪಿದೆ
ನಾಗರೀಕತೆಯ ವಿಕಾಸ
ಬೆಟ್ಟ ಗುಡ್ಡಗಳ ಏರು ತಗ್ಗು
ಜಿಗಿಯುವ ಜಲಪಾತ
ತಣ್ಣಗೆ ಹರಿವ ನಿನಾದ
ಬಿರುಸಾದ ಓಟ
ಕೊಚ್ಚಿಕೊಂಡು ಹೋಗುವ ಪ್ರವಾಹ
ಸಿಗಲಾರದ ಆಳ
ದಣಿವಿಗೆ ನಿರಾಳ
ನದಿಗಳಿಗೆ ಎಲ್ಲವೆಲ್ಲವೂ ನೆನಪಿದೆ
ಭರವಸೆಗೆ ಮೊಗೆ ಮೊಗೆವ ನೀತಿ
ಕೋಪಕ್ಕೆ ಒಂದು ರೀತಿ
ಒಲುಮೆಗೆ ಮೈ ತುಂಬಾ ದವಸ ಧಾನ್ಯ
ಹರಿ ಹರಿದೂ
ಕಾಡು ನಾಡನ್ನ ದಾಟಿ
ಕಡೆಗೆ ಶರಧಿಯ
ಸೇರಿ ಸನ್ಯಾಸಿಯಾದಂತೆ
ಪ್ರೀತಿಗೆ ಬೊಗಸೆ ನೀರು
ನೀರ ಮೈ ಧರಿಸಿದ ನೀರೇ
ನಾನು ನಿನ್ನಂತೆ ನೀರಾಗಬೇಕು.
ಶಾಂತಾ ಜಯಾನಂದ್