ವೈಲೇಶ್ ಪಿ.ಕೊಡಗು ಕವಿತೆ-ಸಾಂಗತ್ಯ_ಪ್ರಕಾರ ತಳಗುರು ಒಬ್ಬರು ಬೇಕು

ಕಾವ್ಯ ಸಂಗಾತಿ

ವೈಲೇಶ್ ಪಿ.ಕೊಡಗು

ಸಾಂಗತ್ಯ_ಪ್ರಕಾರ

ತಳಗುರು ಒಬ್ಬರು ಬೇಕು

ಕತ್ತಲೆ ಗರ್ಭದಿ ಮೆತ್ತಿದ ಕೊಳಕಲಿ
ಬೆತ್ತಲೆ ಭತ್ತೆಯು ನಾವು|
ಅತ್ತಲುಯಿತ್ತಲು ಸುತ್ತುತಿಹಾತ್ಮಕೆ
ಸುತ್ತಿದೆಯೆತ್ತಲು ನೋವು||

ಇಂದು ನರಾತ್ಮಕೆ ಸುಂದರ ಜಡವಿದು
ಸಂದಿಹ ಭಾಗ್ಯವಿದಂತೇ|
ಹಿಂದಿನ ಗೆಯ್ಮೆಯ ಮುಂದಿನ ಯೋಗವು
ನಿಂದಿರೆ ನಗುತಿಹಿರಂತೇ||

ಸುಂದರ ದೇಹಕೆ ಚೆಂದದ ಕಮ್ಮವು
ಬಂಧುರವಾಗಿದೆಯೆಲ್ಲಾ|
ನಿಂದಿಸಲೇತಕೆ ನೊಂದರೆ ಕೃತ್ಯಕೆ
ಬಂಧುವದಾಗುವುದಲ್ಲಾ ||

ಹೊಲೆಯನು ಕಳೆಯನು ಕಳೆಯಲು ತಲೆಯಲಿ
ಹೊಳೆಯಲು ಮಾಗಿದೆ ಕಾಲ|
ತಲೆಬುಡವಿಲ್ಲದ ಬಲೆಯೊಳಗಿಳಿದಿಹ
ತಳಮಳವಳಿಯುವ ಮೂಲ||

ಇಳೆಯಲಿ ಕಳೆಯಲಿ ಬೆಳೆಯದೇ ಕೊಳೆಗಳು
ಸುಳಿಯಿಂದಿಳಿದರೆ ಸಾಕು|
ಕುಳಿಯೊಳಗೆಳೆಯದೇ ತಳದಿಂದೆಳೆಯವ
ತಳಗುರುವೊಬ್ಬರು ಬೇಕು||


One thought on “ವೈಲೇಶ್ ಪಿ.ಕೊಡಗು ಕವಿತೆ-ಸಾಂಗತ್ಯ_ಪ್ರಕಾರ ತಳಗುರು ಒಬ್ಬರು ಬೇಕು

Leave a Reply

Back To Top