ಕಾವ್ಯ ಸಂಗಾತಿ
ಪರಿಮಳ ಐವರ್ನಾಡು
ಅಪ್ಪಾ….
ಕಳೆಯಿತು ಹದಿನೆಂಟು ವರುಷಗಳು
ಹದಿನೆಂಟು ನಿಮಿಷದ ತೆರದೊಳು
ನಿಮ್ಮಗಲಿಕೆಯಲಿ ಅದೆಷ್ಟು ನೋವುಗಳು
ಕರುಳ ಹಿಂಡುವ ಭಾವಗಳು
ಅತ್ತು ಅತ್ತು ಬತ್ತಿ ಹೋದ ಕಣ್ಣೀರು
ನಿಮಗೆ ನಾನಾರ್ಪಿಸಿದ ಪನ್ನೀರು
ಗೋಗರೆದರೂ ಬರಲಾಗದ ಊರು
ನೀವು ತಲುಪಿದ ವಿಚಿತ್ರ ಸೂರು
ಅಪ್ಪಾ ಎಂದು ಕರೆಯಬಯಸಿದೆ
ಯಾರ ಕರೆಯಲಿ ತೋಚದಾಗಿದೆ
ಮನಸ್ಸು ಬರಡು ಭೂಮಿಯಾಗಿದೆ
ಅಪ್ಪನಿಗಾಗಿ ಹೃದಯ ಚೀರುತಿದೆ
ಪುಟ್ಟ ಹೆಜ್ಜೆಯ ಕಲಿಸಿದ ರೀತಿ ಚಂದ
ನೀತಿ ಬೋಧನೆಯ ಮಾತೇ ಅಂದ
ನಿಮ್ಮಲಿ ಪಡೆದ ಜ್ಞಾನದ ಆನಂದ
ಜೀವನದುದ್ದಕೂ ಪರಮಾನಂದ
ಮತ್ತೆ ಮತ್ತೆ ಕಾಡುತಿವೆ ನೆನಪುಗಳು
ಪ್ರೇರಣೆ ನಮಗೆ ನಿಮ್ಮ ಆದರ್ಶಗಳು
ನೀವು ತೋರಿಸಿಹ ಸನ್ಮಾರ್ಗಗಳು
ನಮ್ಮ ಜೀವನದ ದಾರಿದೀಪಗಳು
ಇಟ್ಟಿರುವೆ ಬೇಡಿಕೆಯೊಂದ ಅವನಲಿ
ಪರಮಾತ್ಮನ ಪವಿತ್ರ ಸನ್ನಿದಾನದಲಿ
ಮತ್ತೆ ಜನಿಸಬೇಕು ನೀವು ಈ ಧರೆಯಲಿ
ಶಿಶುವಾಗಿ ನನ್ನೊಡಲ ಗರ್ಭಗುಡಿಯಲಿ