ಭಾವಸಂಗಮ _ ಮನಸುಗಳ ಸಂಭ್ರಮ

ಭಾವಸಂಗಮ _ ಮನಸುಗಳ ಸಂಭ್ರಮ

ಕುಂದಾ ನಗರಿಯ ಮಂದಾರ ಮೆಲುಕು

ಮೇ 21ರಂದು ಭಾವಸಂಗಮದ ಎಂಟನೇ ವಾರ್ಷಿಕೋತ್ಸವವನ್ನು ಬೆಳಗಾವಿಯಲ್ಲಿ ಮಾಡೋಣವೆಂದು ರಾಪಾ ಸರ್ ಅವರು ಬಳಗದಲ್ಲಿ ಪ್ರಕಟಿಸಿದಾಗಲೇ ನಿಶ್ಚಯಿಸಿಕೊಂಡೆ. ಈ ಬಾರಿ ಖಂಡಿತ ಹೋಗಲೇಬೇಕೆಂದು . ಬೆಳಗಾವಿಯಲ್ಲಿ ನಡೆಯುವುದರಿಂದ ಕುಂದಾನಗರಿ ಬಳಗವನ್ನು ಸಹ ಮಾಡಿ ಸಮಾರಂಭದ ರೂಪುರೇಷೆ ಇನ್ನಿತರ ವಿವರಗಳನ್ನು ಚರ್ಚಿಸಲು ಒಂದೆರಡು ಬಾರಿ ಅಲ್ಲಿಯ ಸ್ಥಳೀಯ ಭಾವ ಬಂಧುಗಳ ಜೊತೆ ಸಭೆ ನಡೆಸಿ ಎಲ್ಲವನ್ನು ಅಚ್ಚುಕಟ್ಟಾಗಿ ಯೋಜಿಸಿದರು . ನಾನು ಬರೀ ಆ ಬಳಗದಲ್ಲಿ ನೆಪ ಮಾತ್ರ. ಬೇರೇನು ಕೆಲಸಕ್ಕೆ ಕೈಹಾಕಲು ಆಗಲಿಲ್ಲ . ಎಲ್ಲಿಯ ಬೆಳಗಾವಿ ಎಲ್ಲಿಯ ಮೈಸೂರು? ಆದರೂ ಅಲ್ಲಿನ ಆಪ್ತ ಸ್ನೇಹಿತೆಯರಾದ ಸುನೀತಾ ಹಾಗೂ ಜ್ಯೋತಿ ಖಂಡಿತ ಬರಲೇ ಬೇಕು ಎಂದು ಆಗ್ರಹಿಸಿ ಆಹ್ವಾನಿಸುತ್ತಿದ್ದಾಗ ಮನದಲ್ಲಿ ಅದೇನು ಪುಳಕದ ಭಾವ ಅಂತೀರಿ! ಶಿವಮೊಗ್ಗ ಸಮಾರಂಭಕ್ಕೆ ಮಾಡಿದಂತೆ ಈ ಬಾರಿ ಬಾರದೆ ಹೋಗಬಾರದೆಂದು ರಾಪಾ ಅವರು ಮೇಷ್ಟ್ರು ರೀತಿಯಲ್ಲಿ ತಾಕೀತು ಬೇರೆ ಮಾಡಿಬಿಟ್ಟಿದ್ದರು. ಕೆಲವರು ಈಗಾಗಲೇ ಮುಖತಃ ಭೇಟಿಯಾಗಿ ಪರಿಚಿತರಾದವರಾದರೆ ಇನ್ನು ಬಹಳ ಜನ ಬಳಗದಲ್ಲಿ ಹೆಸರಿನಲ್ಲಿ ಮತ್ತು ಬರಹಗಳ ಮೂಲಕ ಪರಿಚಿತವಾಗಿದ್ದವರು . ಮುಖತಃ ಭೇಟಿ ಇದುವರೆಗೂ ಆಗಿರಲಿಲ್ಲ. ಹಾಗಾಗಿ ಎಲ್ಲರನ್ನೂ ನೋಡುವ ಆಕಾಂಕ್ಷೆ ಮನ ತುಂಬಿತ್ತು. ಹೀಗಾಗಿಯೇ ತಿಂಗಳ ಮೊದಲೇ ರೈಲಿನಲ್ಲಿ ಮುಂಗಡ ಟಿಕೆಟ್ ಖರೀದಿಸಿ, ನಮ್ಮ ನಿಗಮದ ಅತಿಥಿಗೃಹವನ್ನು ಕಾದಿರಿಸಿ, ಅಂದು ಉಡಲೆಂದು ಚೆಂದದ ರೇಷ್ಮೆ ಸೀರೆ ಆರಿಸಿಟ್ಟುಕೊಂಡು ಆ ದಿನಕ್ಕಾಗಿ ಕಾಯುತ್ತಿದ್ದೆ.

೧೯.೦೫.೨೦೨೩ ರ ರಾತ್ರಿ ೮ ಗಂಟೆಯ ರೈಲಿನಲ್ಲಿ ಹೊರಟು ೨೦.೦೫.೨೦೨೩ ರ ಬೆಳಿಗ್ಗೆ ೮ ಗಂಟೆಗೆ ಬೆಳಗಾವಿ ತಲುಪಿದಾಗ ತಣ್ಣನೆಯ ವಾತಾವರಣ. ಆಗಿನ್ನೂ ರವಿ ತನ್ನ ಕರ್ತವ್ಯಕ್ಕೆ ಸಿದ್ದವಾಗುತ್ತಿದ್ದ. ‍ನಮ್ಮಂತೆಯೇ ಅಂದೇ ಬಂದಿದ್ದ ಗೆಳತಿಯರಾದ ಲಲಿತಾ ಬೆಳವಾಡಿ ಮತ್ತು ಸುಜಲಾ ಘೋರ್ಪಡೆಯವರೊಡನೆ ಕಿತ್ತೂರು,ಗಂಗಾಂಬಿಕಾ ದೇವಸ್ಥಾನ, ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನ, ಕಮಲ ಬಸದಿ ಹಾಗೂ ಕಪಿಲೇಶ್ವರ ದೇವಸ್ಥಾನಗಳನ್ನು ಸಂದರ್ಶಿಸುವ ಸೌಭಾಗ್ಯ ನಮ್ಮದಾಯಿತು. ಕಾರು ಮತ್ತು ಒಳ್ಳೆಯ ಡ್ರೈವರ್ ವ್ಯವಸ್ಥೆ ಮಾಡಿಕೊಟ್ಟ ಗೆಳತಿ ಜ್ಯೋತಿ ಬಾದಾಮಿ ಅವರಿಗೆ ಧನ್ಯವಾದಗಳು ಅಂದರೆ ಬಹಳ ಕಡಿಮೆ ಆಗುತ್ತೆ.

ಹಿಂದಿನ ದಿನವೇ ಬಂದು ವೇದಿಕೆ ಸಿದ್ದಪಡಿಸಿದ್ದ ಬೆಳಗಾಂ ಹಾಗೂ ಸುತ್ತಲ ಊರುಗಳ ಗೆಳತಿಯರ ಸೃಜನಾತ್ಮಕತೆ ಕೈಚಳಕ ಅಂದದ ವೇದಿಕೆಯ ಚಂದದಲ್ಲಿ
ಮೆರುಗಾಗಿ ಮೆರೆದಿತ್ತು. ಸುಂದರ ವೇದಿಕೆ ಕಣ್ಮನ ತುಂಬುವಷ್ಟು ಭವ್ಯವಾಗಿತ್ತು. ಮನೆಯ ಹಬ್ಬದ ರೀತಿಯೇ ಎಲ್ಲರೂ ಒಗ್ಗೂಡಿ ಶ್ರಮಿಸಿದ್ದು ಮನಗಳ ಸಂಗಮದ ಹೆಗ್ಗುರುತಾಗಿತ್ತು.

ಹಿಂದಿನ ರಾತ್ರಿ ಪರ ಊರುಗಳಿಂದ ಬಂದ ನಮಗಾಗಿ ಅಶೋಕ್ ಮತ್ತು ಜ್ಯೋತಿ ಬಾದಾಮಿ ದಂಪತಿಗಳು ಒಂದು ಔತಣಕೂಟ ಏರ್ಪಡಿಸಿದ್ದು ರಾ. ಪಾ ದಂಪತಿಗಳು, ಲಲಿತಾ, ಸರೋಜ ಸುಜಲಾ ಮತ್ತು ಬಾದಾಮಿ ದಂಪತಿಗಳು ಎಲ್ಲರ ಜೊತೆ ಕಳೆದ ಕಾಲ ಆತ್ಮೀಯವಾಗಿತ್ತು ಅಮೂಲ್ಯವೆನಿಸಿತು.

ನಮ್ಮ ಅತಿಥಿಗೃಹಕ್ಕೆ ಕಾಲ್ನಡಿಗೆಯ ದೂರದಲ್ಲೇ ಇದ್ದ ಸಮಾರಂಭದ ಸ್ಥಳಕ್ಕೆ ತಲುಪಿದಾಗ ಬರೋಬ್ಬರಿ ೮_೪೫. ಕೇಸರಿಬಾತು ಇಡ್ಲಿ ಚಟ್ನಿ ಸಾಂಬಾರುಗಳ ಪುಷ್ಕಳ ಉಪಹಾರ. ಮೊಟ್ಟ ಮೊದಲೇ ಭೇಟಿಯಾದ ರೋಹಿಣಿಯವರಂತೂ ಈಗ ಹೃದಯಕ್ಕೆ ಹತ್ತಿರವಾಗಿ ಬಿಟ್ಟಿದ್ದಾರೆ. ಸುನೀತಾ ಅವರಂತೂ ಸದಾ ಚೈತನ್ಯದ ಮೂರ್ತಿ ಮೈತ್ರಿಯ ಒರತೆ. ಸೋದರಿ ಹಮೀದಾರ ಸರಳತೆಗೆ ಹಾಗೂ ನನಗೆ ತೋರಿದ ಪ್ರೀತಿಗೆ ನಾನಂತೂ ಫಿದಾ ಆಗಿಬಿಟ್ಟಿರುವೆ. ಮತ್ತೆ ಅಲ್ಲಿಯೇ ಮೊದಲ ಬಾರಿ ಭೇಟಿಯಾದ ದೀಪಿಕಾ ಚಾಟೆ ನನ್ನ ಕವನಗಳನ್ನು ಮೆಚ್ಚಿಕೊಂಡೆ ಎಂದಾಗ ನನ್ನ ಕಾಲುಗಳು ಭೂಮಿಯ ಮೇಲೇ ಇರಲಿಲ್ಲ.
ಮತ್ತೆ ಅದೆಷ್ಟೋ ಸಹೃದಯಿ ಸಜ್ಜನ ಸುಮನಸುಗಳ ಪರಿಚಯ ಭೇಟಿ ಮನಸಿಗೆ ಸಂತೃಪ್ತಿಯನ್ನಿತ್ತು ಸುಮಧುರ ಬಾಂಧವ್ಯಕ್ಕೆ ಭಾಷ್ಯ ಬರೆಯಿತು. ಸ್ನೇಹಲೋಕದ ಅನಾವರಣವಾಯಿತು.

ಸುಮಧುರ ವಿನಾಯಕ ಸ್ತುತಿಯಿಂದ ಆರಂಭವಾದ ಕಾರ್ಯಕ್ರಮ ದೀಪಿಕಾ ಚಾಟೆ ಅವರ ಸ್ವಾಗತ ಭಾಷಣದಿಂದ ಮುಂದುವರಿಯಿತು. ದೀಪ ಬೆಳಗುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಶ್ರೀಯುತ ಶಾಸ್ತ್ರಿ ದಂಪತಿಗಳು, ರಾ ಪಾ ಸರ್ , ಸರ್ವಾಧ್ಯಕ್ಷತೆ ವಹಿಸಿದ್ದ ಶ್ರೀಮತಿ ಜ್ಯೋತಿ ಬಾದಾಮಿ ಮತ್ತು ಮುಖ್ಯ ಅತಿಥಿಯಾಗಿ ಶ್ರೀಮತಿ ರಜನಿ ಜೀರಗ್ಯಾಳ ಇವರಿಂದ ವೇದಿಕೆ ಕಂಗೊಳಿಸುತ್ತಿತ್ತು.

ಅಂದು ಉಮಾಶಂಕರ ಪ್ರತಿಷ್ಠಾನದ ಪುಸ್ತಕ ಪುರಸ್ಕಾರ ಕಾರ್ಯಕ್ರಮವೂ ಇದ್ದು, ೨೦೨೧ರ ಪ್ರಶಸ್ತಿ ಪ್ರದಾನ ಗೆಳತಿ ಶ್ರೀಮತಿ ಲಲಿತಾ ಬೆಳವಾಡಿಯವರದ್ದಾಗಿದ್ದು ೨೦೨೨ರ ಪುರಸ್ಕಾರ ಪ್ರದಾನದ ಜವಾಬ್ದಾರಿಯನ್ನು ರಾ ಪಾ ಅವರು ಬಹಳ ಅಭಿಮಾನದಿಂದ ನನಗೆ ವಹಿಸಿದ್ದರಿಂದ ಹಿರಿಯ ಸಾಧಕರ, ಪಂಡಿತರ ಅ ಚಂದನದ ತೋಟದಲ್ಲಿ ಹುಲ್ಲು ಗರಿಕೆಯಾದ ನಾನೂ ವೇದಿಕೆ ಹಂಚಿಕೊಂಡಿದ್ದು ತುಂಬಾ ಸಂತಸ ಹಾಗೂ ಕೃತಾರ್ಥ ಭಾವ ಮೂಡಿಸಿತ್ತು. ಈ
ಅಮೂಲ್ಯ ಅವಕಾಶಕ್ಕೆ ಹೃದಯ ತುಂಬಿದ ಧನ್ಯವಾದಗಳು ರಾ ಪಾ ಸರ್.

ಶಾಸ್ತ್ರೀಜಿಯವರ ಉದ್ಘಾಟನಾ ಭಾಷಣ ಅಮೋಘವಾಗಿದ್ದು ” ಭಾವಸಂಗಮ ಕೂಡಲ ಸಂಗಮವಾಗಲಿ” ಎಂಬ ಅವರ ಹಾರೈಕೆಯ ನುಡಿಗಳು ಋಷಿವಾಣಿ ಕವಿ ವಾಣಿಯಾಗಿ ಫಲಿಸಲಿ ಎಂಬ ಮನದಾಳದ
ಪ್ರಾರ್ಥನೆ . ರಾಪಾ ಸರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಭಾವಸಂಗಮ ಬೆಳೆದ ದಾರಿಯ ಹೆಜ್ಜೆ ಗುರುತುಗಳನ್ನು ಸ್ಮರಿಸುತ್ತಾ ಮುಂದಿನ ಯೋಜನೆಗಳನ್ನು ಕನಸುಗಳನ್ನು ತೆರೆದಿಟ್ಟರು. ೨೦೨೧ ಮತ್ತು ೨೦೨೨ರ ಸಾಲಿನ ಪುಸ್ತಕ ಪುರಸ್ಕಾರ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆದ ನಂತರ ಪುರಸ್ಕ್ರತರು ತಮ್ಮ ಅನಿಸಿಕೆ ಹಂಚಿಕೊಂಡರು.
ಮುಂದಿನ ಹಂತದಲ್ಲಿ ಒಟ್ಟು ೧೨ ವಿವಿಧ ಲೇಖಕರ ಕೃತಿಗಳು ಲೋಕಾರ್ಪಣೆ ಗೊಂಡಿದ್ದು ಬಳಗದ ಬಂಧುಗಳ ಸಾಧನೆಗೆ ಹಿಡಿದ ಕನ್ನಡಿಯಾಗಿತ್ತು. ನಿಜಕ್ಕೂ ಇದು ಐತಿಹಾಸಿಕ ಕ್ಷಣವಾಗಿ ಇತಿಹಾಸದ ದಾಖಲೆಗೆ ಸೇರಿತೆಂದರೆ ಅತಿಶಯೋಕ್ತಿಯಲ್ಲ. ಪುಸ್ತಕ ಬಿಡುಗಡೆ ಮಾಡಿದ ಶ್ರೀಮತಿ ಸರೋಜಾ ಮತ್ತು ರಾಜೇಶ್ವರಿ ಹೆಗಡೆ ಅವರು ತಮ್ಮ ಅನುಪಮ ವಾಗ್ಝರಿಯಿಂದ ಪ್ರೇಕ್ಷಕರ ಮನ ಗೆದ್ದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಜ್ಯೋತಿ ಬಾದಾಮಿಯವರು ಪಾಂಡಿತ್ಯಕ್ಕಿಂತ ಭಾವುಕತೆಗೆ ಹೆಚ್ಚಿನ ಒತ್ತು ಕೊಟ್ಟು ಸಭಿಕರನ್ನು ತಮ್ಮ ಆತ್ಮೀಯತೆಯ ವಲಯದಲ್ಲಿ ಬಂಧಿಸಿ ಆಪ್ತತೆಯನ್ನು ಹುಟ್ಟು ಹಾಕಿದರು. ಅವರ ಸನ್ಮಾನ ಕಾರ್ಯಕ್ರಮವೂ ವೇದಿಕೆಯ ಅವಿಸ್ಮರಣೀಯ ಕ್ಷಣವಾಗಿ ಚಿತ್ತ ಭಿತ್ತಿಯಲ್ಲಿ ಸದಾ ಕಾಲ ಹಸಿರಾಗಿರುವ ಸ್ಮರಣಿಕೆಯಾಯಿತು. ಶ್ರೀಮತಿ ರಾಜೇಶ್ವರಿ ಹಿರೇಮಠ ಅವರ ನಿರರ್ಗಳ ನಿರೂಪಣೆ ಸಮಾರಂಭವನ್ನು ಮತ್ತಷ್ಟು ಆಕರ್ಷಣೀಯವೆನಿಸಿತು.

ಮಧ್ಯಾಹ್ನಕ್ಕೆ ಹೋಳಿಗೆ ತುಪ್ಪ ಚಪಾತಿ ಕೂರ್ಮ ಚಟ್ನಿಪುಡಿ ಉಪ್ಪಿನಕಾಯಿ ಮೊಸರು ಹುರಳಿಕಾಳಿನ ಪಲ್ಯ ಅನ್ನ ಸಾಂಬಾರು ಹಪ್ಪಳ ವಾವ್ ತುಂಬಾ ರುಚಿಕಟ್ಟಾದ ಊಟ. ಊಟದ ವ್ಯವಸ್ಥೆ ಮಾಡಿದ್ದ ಶ್ರೀಯುತ ಅಶೋಕ ಮಳಗಲಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು . “ಅನ್ನದಾತಾ ಸುಖೀ ಭವ”

ಮಧ್ಯಾಹ್ನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಯುತ ಅಶೋಕ ಮಘಲಿ ಅವರು ವಹಿಸಿದ್ದು ಮುಖ್ಯ ಅತಿಥಿಯಾಗಿ ಸಿದ್ದರಾಮ ಹೊನಕಲ್ ಅವರು ವೇಧಿಕೆಯನ್ನು ಅಲಂಕರಿಸಿದ್ದರು. ಡಾ. ಭಾರತಿ ಮಠದ ಅವರು ಆಶಯ ನುಡಿಗಳನ್ನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದ ಕವಿಗಳು ಕವನ ವಾಚಿಸಿದ್ದು ವಿಶೇಷವಾಗಿತ್ತು. ಮುಖ್ಯ ಅತಿಥಿಗಳ ಮತ್ತು ಗೋಷ್ಠಿಯ ಅಧ್ಯಕ್ಷರ ನುಡಿಗಳು ಚೇತೋಹಾರಿಯಾಗಿದ್ದವು. ಕವಿಗೋಷ್ಟಿಯನ್ನು ಶ್ರೀಮರಿ ರೋಹಿಣಿ ಯಾದವಾಡ ಮತ್ತು ಸುನೀತಾ ಸೋಲಾಪುರೆ ಸಮರ್ಥವಾಗಿ ನಿರ್ವಹಿಸಿದರು.

ಕುಂದಾನಗರಿ ಪತ್ರಿಕೆಯ ಸಂಪಾದಕರಾದ ಶ್ರೀ ಶಿವಪ್ಪ ನಾಗಪ್ಪ ಕೌತಗಾರ ಮತ್ತು ರೂಪಾ ಕೌತಗಾರ ದಂಪತಿಗಳು, ಶ್ರೀಮತಿ ಜಯಶೀಲಾ ಬ್ಯಾಕೋಡು ಇನ್ನೂ ಮುಂತಾದ ದಿಗ್ಗಜಗಳ ಸನ್ಮಾನದೊಂದಿಗೆ ವೇದಿಕೆಯೂ ಧನ್ಯವಾಯಿತು..

ಸುಂದರ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿದ್ದು ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಚುಟುಕುಗಳ ಸರದಾರ ಜಿನದತ್ತ ದೇಸಾಯಿಯವರ ಆಗಮನದಿಂದ.

ಸುಂದರ ಭರತನಾಟ್ಯ ಪ್ರದರ್ಶನ, ಇಂಪಾದ ವೃಂದಗಾನ, ದಾನಮ್ಮ ಅವರ ಜಾನಪದ ನೃತ್ಯ , ಜಯಶ್ರೀ ಮಂಗಳೂರು ಅವರ ಏಕಪಾತ್ರಾಭಿನಯ ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಸೊಗಡಿನ ಘಮವನ್ನು ಹಂಚಿದವು. ಅತಿಥಿಗಳ ಸನ್ಮಾನ ಮತ್ತು ಸುಮಾ ಬೇವಿನಕೊಪ್ಪಮಠ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ
ಸುಸಂಪನ್ನವಾಯಿತು.

ವೇದಿಕೆಯ ಮೇಲಿನ ಪುಸ್ತಕ ಉಡುಗೊರೆ, ವೇದಿಕೆಯ ಕೆಳಗೆ ಸ್ನೇಹಿತರ ಪುಸ್ತಕ ಕಾಣಿಕೆ ಇದರ ಬಗ್ಗೆ ಬೇರೆಯದೇ ಪೋಸ್ಟ್ ಹಾಕಬೇಕು. ಇಂತಹ ಸೊಗಸಾದ ಕಾರ್ಯಕ್ರಮದ ರೂವಾರಿ ಸೂತ್ರಧಾರಿ ರಾಜೇಂದ್ರ ಪಾಟೀಲರವರ ಕಲ್ಪನೆಯಿಲ್ಲಿ ಸಾಕಾರವಾಯಿತು. ಅದಕ್ಕಾಗಿ ಶ್ರಮಿಸಿದವರು ನಮ್ಮ ಬೆಳಗಾವಿಯ ಭಾವ ಬಂಧುಗಳು. ಶಾಸ್ತ್ರಿ ಸರ್, ಅಶೋಕ ಮಳಗಲಿ ಸರ್ ಅವರೊಂದಿಗೆ ಜ್ಯೋತಿ ಬಾದಾಮಿ ಅವರ ಮಾರ್ಗದರ್ಶನದ ವನಿತೆಯರ ಗುಂಪು. ಪ್ರತಿಯೊಬ್ಬರಿಗೂ ನಾನು ಹೃದಯಾಂತರಾಳದ ವಂದನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಿರೀಕ್ಷೆಯ ಕಾತುರತೆಗೆ ವಾಸ್ತವಿಕತೆಯ ಅನಾವರಣವಾಗಿ ಬದುಕಿನ ಸುಂದರ ಕ್ಷಣಗಳ ಸಾಕ್ಷೀಭೂತವಾದ ದಿನ. ಸಹೃದಯತೆ, ಸಜ್ಜನತೆಗಳ ಆತ್ಮೀಯ ಆಪ್ತತೆ ತುಂಬಿ ಮೊಗೆಯುವಷ್ಟು ಸವಿನೆನಪುಗಳ ಕಜ್ಜಾಯದ ಬುತ್ತಿಯನ್ನಿತ್ತು
ಸ್ಮರಣೆಯ ಅಂಗಳದ ರಂಗೋಲಿಯಾಗಿತ್ತು.
ಹೃದಯದ ಪುಟಗಳಲ್ಲಿ ಅಚ್ಚಳಿಯದಂತೆ
ದಾಖಲಾಗಿತ್ತು.ಅಜರಾಮರವಾಗಿತ್ತು.

ಪೋಟೊ ಆಲ್ಬಂ


ಸುಜಾತಾ ರವೀಶ್

Leave a Reply

Back To Top