ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಒಣಗಿ ಮುರುಟಿದೆ ಬನದ ಹಸಿರು ನೀ ಬಾರದೆ
ಬಿರಿದು ಬಾಯ್ತೆರೆದಿದೆ ನೆಲದ ಕೆಸರು ನೀ ಬಾರದೆ
ಇಂಗುತಿದೆ ಬಿಡದೆ ಜಿನುಗಿದ ನೀರೆಲ್ಲ ಒರತೆಯಲಿ ಮೆಲ್ಲಗೆ
ಬಿಡುತಿದೆ ಬಾಯಾರಿದ ಹಕ್ಕಿ ಕುತ್ತುಸಿರು ನೀ ಬಾರದೆ
ಸುಡುತಿದೆ ಕೆಂಡವಾಗಿ ಬೀಸೋ ಗಾಳಿ ಮೈಗೆ ಸೋಕಿ
ಕುದಿಯುತಿದೆ ತಣ್ಣಗೆ ಹಸಿದ ಬಸಿರು ನೀ ಬಾರದೆ
ಕಾಡುತಿಹೆ ಏಕೆ ಜೀವಕುಲವ ಕಾರ್ಮೋಡವೇ ಸುರಿಯದೆ
ಉಕ್ಕುತ್ತಿದೆ ಕಂಗೆಟ್ಟು ಭುವಿಯೆದೆಯ ಎಸರು ನೀ ಬಾರದೆ
ಜೀವಚ್ಛವದಿ ಒರಗಿವೆ ಬೀಜಗಳೆಲ್ಲ ಸೋತು ಬೇಗಂ
ಜಪಿಸುತಿಹ ರೈತ ಬಿಕ್ಕಿ ನಿನದೇ ಹೆಸರು ನೀ ಬಾರದೆ
ಹಮೀದಾ ಬೇಗಂ ದೇಸಾಯಿ