ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಇದ್ದು ಬಿಡು ಇಲ್ಲದಂತೆ
ಸುಲಭವಾಗಿ ನುಡಿದು
ನಡೆದು ಬಿಟ್ಟೆ…..
ನಾನಿರದಿದ್ದರೂ….
ಇದ್ದು ಬಿಡು ಇಲ್ಲದಂತೆ…..
ಹೇಗಿರಲಿ ಹೇಳು ನೀನೇ…
ಮಾಮರದ ತಳಿರ ಮರೆಯ
ಕುಕಿಲ ಸ್ವರದಂತೆ….
ಹರಿವ ತೊರೆಯ ಜುಳು ಜುಳು
ನಿರ್ಮಲ ಗಾನದಂತೆ….
ಜೊತೆಯಾದ ಹಿತವಾದ
ಜೀವ ಭಾವದ ಪಯಣ…
ಮೃದು ಮಧುರ ನಿನಾದ….
ಇದ್ದು ಮುದ್ದು ಸದ್ದು ಮಾಡುತ್ತ
ಸಾಗಿದೆ ಎಲ್ಲೆಡೆಯೂ….
ಅರಿತು ಬೆರೆತ ಸುಳಿ ಗಾಳಿಯ
ತೇಲಿ ಬರುವ ಹೂವ
ತಿಳಿ ಪರಿಮಳದಂತೆ
ಎಲ್ಲೆಡೆಯೂ ಸ್ನೇಹ ರಿಂಗಣ…
ಹೇಗಿರಲಿ ಇದ್ದು ಇಲ್ಲದಂತೆ…
ನೀನೇ ಹೇಳು..?
ಹಾಲಲಿ ಬೆರೆತ ಸಕ್ಕರೆಯ
ಸಿಹಿ ಸವಿಯಂತೆ…
ಹೃದಯದಲಿ ಮಿಡಿವ
ಜೀವ ಭಾವದಂತೆ….
ಮೌನವದು,… ಅಡಗಿದ ನುಡಿವ
ನೂರು ಸಾವಿರ ಮಾತುಗಳಂತೆ…
ಕಡಲ ಒಡಲಲ್ಲಿಅಡಗಿದ
ಅದಮ್ಯ ಪ್ರೀತಿಯಂತೆ….
ಎಲ್ಲೆಡೆಯೂ ಭಾವ ತರಂಗದ ಗುಂಜನ…..
ಹೇಗಿರಲಿ ಇದ್ದು ಇಲ್ಲದಂತೆ
ನೀನೇ ಹೇಳು..?
ಕವಿತೆಯಲ್ಲಿ ಮೊಗ ಮುಚ್ಚಿ
ಅವಿತು ಕುಳಿತ
ಎಮ್ಮೊಲವ ಭಾವದಂತೆ….
ನೀಲಾಕಾಶದ ಮೋಡದ
ಮರೆಯಲೀ ನಗುತಿಹ
ಚಂದ್ರ ತಾರೆಯರಂತೆ….
ಬಳಿಯಲ್ಲೇ ಸುಳಿದಾಡಿ
ಕಚಗುಳಿ ಇಡುವ
ಸವಿ ನೆನಪುಗಳ
ಮುತ್ತಿಗೆಯ ಸವಿ ಅಪ್ಪುಗೆಯ
ಅರಳಿದ ಕಿಲಕಿಲ ನಾದ
ಎಲ್ಲೆಡೆಯೂ…
ಅನುಗಾಲ ಅನುಕ್ಷಣ…
ಹೇಗಿರಲಿ ಇದ್ದು ಇಲ್ಲದಂತೆ
ನೀನೇ ಹೇಳು..?
ಹೂವಿನೊಳು ಅಡಗಿರುವ
ಪರಿಮಳದಂತೆ…
ಮಾವಿನೊಳು ಅಡಗಿರುವ
ಒಗರು…ಹುಳಿ.. ಸಿಹಿಯಂತೆ…
ದುಂಡು ಮಲ್ಲಿಗೆಮನದ ಮೊಗದ
ತುಟಿಯಂಚಿನ ಕಿರು ನಗುವಂತೆ…
ಗುಳಿ ಕೆನ್ನೆಯ ನಗುವ ಹರವಂತೆ…
ಕೆಂಡ ಸಂಪಿಗೆ ಹುಸಿ ಕೋಪದ
ತಂಪಿನ ಕಂಪಿನಂತೆ….ಎಲ್ಲೆಡೆಯೂ
ಜೀವ ಭಾವ ಜೊತೆಯಾಗಿರುವ
ಕುರುಹು… ಸ್ನೇಹದ ಹರವು…
ಹೇಗಿರಲಿ ಇದ್ದು ಇಲ್ಲದಂತೆ
ನೀನೇ ಹೇಳು…?
ಕಷ್ಟವಾದರೂ ಸೈ….
ಇಷ್ಟವಿಲ್ಲದಿದ್ದರೂ….
ಇದ್ದು ಬಿಡು ಇಲ್ಲದಂತೆ….ಎಂದು
ನೀನೇ ಹೇಳಿದ ಮೇಲೆ
ಎಲ್ಲದಕ್ಕೂ ಸೈ…..
ಇದ್ದು ಬಿಡುವೆ ಇಲ್ಲದಂತೆ
ನಿನ್ನ ಜೊತೆಯಲ್ಲೇ…
ಮನದಲ್ಲೇ.. ಎದೆ ಗೂಡಲ್ಲೇ..
ಮೌನವಾಗಿ… ಎದೆ ಮಿಡಿತವಾಗಿ….
ನೀ ಬರೆವ ಪ್ರತಿ ಕವನದ
ಹೃದಯ ಬಡಿತವಾಗಿ..
ಪ್ರತಿ ಅಕ್ಷರ…ಪದದ…
ಸಾಲಿನ ಒಳ ಹೊರಗೂ
ಭಾವ ಜೀವವಾಗಿ…
ಅರ್ಥವಾಗಿ ಹಾಸು ಹೊಕ್ಕಾಗಿ ….
ಇದ್ದು ಬಿಡುವೆ ಇರುವಂತೆ
ಜೊತೆಯಾಗಿ..ಉಸಿರಾಗಿ…
ಹಸಿರಾಗಿ…ಕೊನೆವರೆಗೆ….
ಇಂದಿರಾ ಮೋಟೆಬೆನ್ನೂರ.