ಕಾವ್ಯ ಸಂಗಾತಿ
ಸುಧಾ ಪಾಟೀಲ
ಇದ್ದು ಬಿಡು ಇಲ್ಲದಂತೆ
ಅಪೇಕ್ಷೆಯ ಮೀರಿ ಮಮತೆಯ
ಹಂಚಿ ಮನದ ಮೂಲೆಯಲಿ
ದೀಪ ಬೆಳಗಿಸಿ ಇದ್ದು ಬಿಡು
ಇಲ್ಲದಂತೆ
ಅವರಿವರ ಮಾತಿನ
ಗೊಂದಲಕ್ಕೆ ಸಿಲುಕದೆ
ಎಲ್ಲರೊಳಗೊಂದಾಗಿ ಇದ್ದು
ಬಿಡು ಇಲ್ಲದಂತೆ
ವಿಷಯವನು ಅರಹುವ ಮುಂಚೆ
ಮನನ ಮಾಡಿ ಉದ್ದೇಶವನು
ಅಳಿಸುವಂತೆ ಇದ್ದು ಬಿಡು ಇಲ್ಲದಂತೆ
ಒಣ ಜಂಜಾಟದ ಪಾತ್ರಧಾರಿ
ನೀನಾಗದಂತೆ ದೂರ ಸರಿದು
ಮೂಕ ಪ್ರೇಕ್ಷಕಳಾಗಿ ನಿಂತು
ಇದ್ದು ಬಿಡು ಇಲ್ಲದಂತೆ
ಹೊತ್ತಿ ಉರಿಯುವ ಈ ಧಗೆಯಲ್ಲಿ ನೋವಿನ ಝಳವ
ಬಡಿಸದೆ ಅನಾಮಿಕಳಂತೆ ಸಾಗಿ
ಇದ್ದು ಬಿಡು ಇಲ್ಲದಂತೆ
ಪ್ರೀತಿಯ ಭರವಸೆಯ ಬೆಳಕಿನಲ್ಲಿ
ಮಂದ ದೀಪ ಮಿನುಗಿ
ನೀನೇ ಕೈಕೊಟ್ಟು ನಡೆದಾಗ
ಇದ್ದು ಬಿಡು ಇಲ್ಲದಂತೆ
ಸುಧಾ ಪಾಟೀಲ