“ನಿಲಕಿದ ತಾರೆ” ಚಿತ್ರಲೇಖರವರ ಕಾದಂಬರಿಕುರಿತು ವನಜಾ ಸುರೇಶ್ ಬರಹ

ಪುಸ್ತಕ ಸಂಗಾತಿ

“ನಿಲಕಿದ ತಾರೆ”

ಚಿತ್ರಲೇಖರವರ ಕಾದಂಬರಿ

ಕುರಿತು ವನಜಾ ಸುರೇಶ್ ಬರಹ

ನಿಲುಕಿದ ತಾರೆ
ಪ್ರಕಾಶ ಸಾಹಿತ್ಯ
27 ಅರಳೇಪೇಟೆ ಬೆಂಗಳೂರು
ಪ್ರಥಮ ಮುದ್ರಣ 2003
ಬೆಲೆ _80 ರೂ


 ಈ ತಾರೆ  ‘ಅನಘ್ರಣಿತ ಕುಸುಮ’ ಸುಂದರ ದೇಹದ ಈ ಒಡತಿಯ ವಯಸ್ಸು 28 ಆದರೂ 20ರ ಅಂದಾಜು ಮಾಡಬಹುದಾದ ಎಳೆಯ ಮುಖ ಹಾಗೂ ಆಕರ್ಷಕ ಮೈಮಾಟ. ಈಕೆ ದರ್ಶನ್ ಎಂಬುವನ ಪ್ರೇಯಸಿ ಇಂದ್ರಜಿತ್ ಎಂಬುವನ ವಿಧವೆ ಎನಿಸಿದ ಪತ್ನಿಯೇ ಈ ಕಥಾನಾಯಕಿ…..
 ಶಾಂತಿ ನೆಮ್ಮದಿಯನ್ನು ಹುಡುಕುತ್ತಾ ಮನುಷ್ಯ ಈ ‘ನಿಯತಿ’ ಹೆಣದಿರುವ ಚಕ್ರದೊಳಗೆ ತಿರುಗುತ್ತಲೇ ಇರುತ್ತಾನೆ. ಇನ್ನೇನು ಬದುಕು ನೆಮ್ಮದಿಯಾಯಿತು  ಎಂದು ಸ್ವಲ್ಪ ನಿಟ್ಟಿಸಿರು ಬಿಟ್ಟು ಸುಖ ಅನುಭವಿಸಬೇಕು ಎನ್ನುವಷ್ಟರಲ್ಲಿ  ಬದುಕಿಗೆ  ವಿದಾತ ತೆರೆ  ಎಳೆದು ಬಿಡುತ್ತಾನೆ ಇದು ವಿಧಿಯ ಲಿಖಿತ. ಇದರಿಂದ ಯಾರು ತಪ್ಪಿಸಿಕೊಳ್ಳಲಾರರು ಈ ಜೀವನ ಯಾತ್ರೆಯೊಳಗೆ ಒಬ್ಬೊಬ್ಬರ ಹಣೆ  ಬರಹವು ಒಂದೊಂದು ತರಹ ಕಷ್ಟ ಸುಖ ಸುಳಿ ಕವಲುದಾರಿ  ಕಂಡರಿಯಲಾರದ ಅವಘಡಗಳು
ಇಂತಹ ಚಕ್ರದ ನಡುವೆ ನಡೆಯುತ್ತಾ ಸಾಗುವ ಬದುಕು “ಸಾಕ್ಷಿ” ಎಂಬ ತಾರೆಯದು.
“ನೀಲುಕಿದ ತಾರೆ” -ಕಾದಂಬರಿಯು, ಚಿತ್ರಲೇಖ ಅವರು ಚಿತ್ರಿಸಿದ ಸಾಕ್ಷಿ ಎಂಬ ಕಥಾನಾಯಕಿಯದು
ಈ ಕಾದಂಬರಿಯನ್ನು ಮೂರು ಹಂತವಾಗಿ ವಿಭಾಗಿಸಿಕೊಂಡು ನೋಡುವುದಾದರೆ  ಮೂರು ನಾಲ್ಕು ತರದ ಬದುಕಿನ ದಾರಿಗಳು ಹೊಳೆಯುತ್ತವೆ. ಮಕ್ಕಳಿಗೆ ಬೆಳೆಯುವ ಹಂತದಲ್ಲಿ ಬಳಗ ಬಹಳ ಮುಖ್ಯ ಬಳಗದೊಂದಿಗೆ ಬೆರೆಯುವ ಮಗು ಬಹುಬೇಗ ಹೊಂದಾಣಿಕೆ ಪ್ರತಿಕ್ರಿಯೆ ಸೋಲು ಸಾಂತ್ವನ ಹಂಚಿಕೆ ಮೊದಲಾದ ಗುಣಗಳನ್ನು ಅನಾಯಾಸವಾಗಿ,ರೂಢಿಸಿಕೊಳುತ್ತದೆ .
ಸಿರಿವಂತಿಕೆಯಲ್ಲಿ ಬೆಳೆದು  ಬೇಕಿದ್ದೆಲ್ಲ ಸಿಕ್ಕಾಗ ಅಹಂ ,ನಾನು ನನ್ನದು ,ನಾನೇ ಸರಿ ಉಳಿದವರೆಲ್ಲ ಕೀಳು ಅನ್ನುವ ಹೀನ ಮನಸ್ಥಿತಿ ದರ್ಪ ನನಗೇ  ಎಲ್ಲವೂ ಸೇರಬೇಕೆಂಬ ಮನೋಭಾವ ಮೂಡಿ ಸಮಾಜಮುಖಿಯಾದ ನಡವಳಿಕೆ ಕಾಣಲಾಗದು, ಅಂತಹ ವಾತಾವರಣದಲ್ಲಿ ಬೆಳೆದವರು ಏಕಾಂಗಿಯಾಗುತ್ತಾರೆ  ಯಾರಿಗೂ ಸಂತೋಷ ಕೊಡಲಾರರು  ಕಡೆಗೆ ತಾವೂ  ನೆಮ್ಮದಿಯಾಗಿರಲಾರದಂತೆ ಆಗುವುದನ್ನು ನಿಜ ಜೀವನದಲ್ಲಿ ಕಂಡಿದ್ದೇವೆ ಇಲ್ಲಿಯೂ ನಿತಿನ್ ಹಾಗೂ ಸಾಕ್ಷಿಪಾತ್ರದಲ್ಲಿ ಲೇಖಕಿ ಅತ್ಯಂತ ಸಹಜವಾಗಿ ಈ ಮನೋಧರ್ಮವನ್ನು ಚಿತ್ರಿಸುತ್ತಾರೆ
ಎಲ್ಲಾ ತರದ ವಾತಾವರಣ ಎಲ್ಲ ತಿಳಿವಳಿಕೆಗಳು ಎಲ್ಲರಿಗೂ ಅವರವರ ಸನ್ನಿವೇಶದಲ್ಲಿಯೇ ದೊರೆಯಲಾರದು, ಅಂದರೆ,  ಎಲ್ಲಾ ಅನುಭವಗಳನ್ನು ನಾವು ಮಾಡುವ ತಪ್ಪಿನಿಂದಲೇ ತಿದ್ದಿಕೊಂಡು ಜ್ಞಾನಪಡೆಯಲಾಗದು, ನೋಡುತ್ತಾ ಪರಿಸರದೊಂದಿಗೆ ಬೆರೆಯುತ್ತಾ ಇತರರ ತಪ್ಪುಗಳನ್ನು ಅವಲೋಕಿಸುತ್ತಲೂ ಬದುಕನ್ನು ಬದಲಾಯಿಸಿಕೊಳ್ಳುವ ದಾರಿಗಳು ಹೊಳೆಯುತ್ತವೆ. ಹಾಗೂ ಹಿಂದೆ ಎಂದು ಯಾರದು ಬದುಕಿನಲ್ಲಿ ನಡೆದ ಘಟನಾವಳಿಗಳು ಅದರಿಂದ ಉಂಟಾದ ಪರಿಣಾಮಗಳನ್ನು  ಓದುವುದರಿಂದಲೂ   ಸಾಕಷ್ಟು ಮಾರ್ಗದರ್ಶನ ನಮಗೆ ಸಿಗುತ್ತದೆ .ಮಕ್ಕಳನ್ನು ಬೆಳೆಸು ವ ವಿಧಾನಕ್ಕೆ , ಇನ್ನು ಮುಂದಿನ ದಿನಗಳಲ್ಲಿ ಕೋರ್ಸ್ಗಳಿಗೆ ಸೇರಬೇಕೇನೋ ಅನಿಸುವ ರೀತಿಯಲ್ಲಿ ಜನ ಮುಂದಿನ ಪೀಳಿಗೆಯವರಿಗೆ ಮಕ್ಕಳಿಗೆ ಸುಖ ಕೊಡಲು ಹಾತರೆಯುವುದು ಕಡೆಗೆ ವೃದ್ಧಾಶ್ರಮ ಸೇರುವುದು ನೋಡುವಾಗ ಆತಂಕ ಭಯ ಮೂಡದಿರದು
ಅಂತಹ ಗೊಂದಲಕ್ಕೆ ಪರಿಹಾರವಾಗಿ ನಿತಿನ್ ಸಾಕ್ಷಿಯರು ಬೆಳೆದ ರೀತಿಯನ್ನು ಇಲ್ಲಿ ಓದುಗರು ಗಂಭೀರವಾಗಿ ಅವಲೋಕನ ಮಾಡಬೇಕೆಂಬುದು ನನ್ನ ಕಳಕಳಿಯ ಮನವಿ
ಯಾರಿಲ್ಲದೆಯೂ ಬದುಕನ್ನು ಸುಂದರವಾಗಿ ಖುಷಿಯಾಗಿ ಮನೆಯವರೊಂದಿಗೆ ಕೆಲಸದವರೊಂದಿಗೆ ಸಮುದಾಯದ ಸುತ್ತಲಿನ ಆಚೀಚೆಯವರೊಂದಿಗೆ ಬೆರೆಯುತ್ತಾ ಪ್ರೀತಿಯ ಮಾತಿನಿಂದ ತಮ್ಮವರನ್ನಾಗಿಸಿಕೊಂಡು ಪ್ರೀತಿಯನ್ನು ಕೊಟ್ಟು ಪಡೆದು ಆನಂದಗೊಳಿ ಸುತ್ತಾಳೆ ಎಂಬುದಕ್ಕೆ ಸಾಕ್ಷಿಪಾತ್ರ ಮಾದರಿಯಾಗಿದೆ
ಆದ್ದರಿಂದಲೇ ಹಿರಿಯರು ಹೇಳುವುದು
ಮಾತಿನಿಂ ನಗೆ ನುಡಿಯು,
 ಮಾತಿನ ಹಗೆ ನುಡಿಯು
 ಮಾತಿನೊಳ್ ಸರ್ವ ಸಂಪದವು ಲೋಕದೊಳ್ ಮಾತೇ ಮಾಣಿಕ್ಯವೂ ಎಂದು.
 ಅಂತಹ ಮಾತಿಗೆ ಪ್ರೀತಿಯ ಮಾದರಿಗೆ ಸಾಕ್ಷಿ ಉದಾಹರಣೆ ಯಾಗಿದ್ದಾಳೆ ಮಕ್ಕಳನ್ನು ಬೆಳೆಸಬೇಕಾದ ವಿಧಾನಕ್ಕೆ ಮಾದರಿಯಾಗಿದ್ದಾಳೆ
 ಎರಡನೆಯದಾಗಿ
 ಬದುಕು ಬಿರುಗಾಳಿಯಾಗಿ ಜೀವಗಳು ಎಲೆಯಾದರೆ ಮುಗೀತು ಬೀಸಿದಲ್ಲೆಲ್ಲ ಹಾರಾಡುವುದೇ, ಒಂದು ಹಂತಕ್ಕೆ ನೆಲೆ ಸಿಕ್ಕಿತು , ಮತ್ತೆ ಬಿರುಗಾಳಿ ಒಟ್ಟಾರೆ ಬಿತ್ತಿದ್ದಲ್ಲಿ ಬೆಳೆ ಎಂಬ ಗುಣದಂತೆ ಗರಿಕೆಯಾಗಿ ಚಿಗುರೊಡೆದ  ಸಾಕ್ಷಿಯು ಬದುಕಿನ ವಿಚಿತ್ರ ಸನ್ನಿವೇಶಗಳ ಸಚಿತ್ರ ಹೆಣಿಗೆ ಈ  ನಿಲುಕಿದ ತಾರೆ
 ಕಡೆಗೆ ನಿಲುಕಿದ್ದಾದರೂ ಯಾವ ಸನ್ನಿವೇಶದಲ್ಲಿ ಎಂದು ಕೊಂಡಾಗ ನೋವಾಗುತ್ತದೆಯಾದರೂ ಸದ್ಯ ಸುಖಾಂತ್ಯ ಕಂಡಿತಲ್ಲಾ ಎಂಬುದೇ ಸಮಾಧಾನಕರ.
 ಕಥೆಯ ನಾಯಕಿ ಸಾಕ್ಷಿಗೆ
 ತಂದೆಯ ನೆನಪು ಮುಸುಕು ಮಸ್ಕು
ನಿವೃತ್ತಿ ಅಂಚಿನಲ್ಲಿರುವ  ಮೇಜರ್ ಜನರಲ್ ಅರ್ಜುನ್ ವಿದುರ ಪಾರ್ಟಿಯಲ್ಲಿ ಕಂಡ ಭೂಮಿಕಾಳಲ್ಲಿ ಪ್ರೇಮಾಂಕುರಿಸಿದಾಗ ಆತನ ಮಗ  
 ಈಗಾಗಲೇ ವಿವಾಹಿತನಾಗಿ ಮಗನೊಂದಿಗೆ ಮುಂಬೈಯಲ್ಲಿ ನೌಕೆಯಲ್ಲಿ ಕೆಲಸ ಮಾಡುತ್ತಿರುವ 26ರ ವಯೋಮಾನದ ಪೃಥ್ವಿ .ಅವನ ವಿರೋಧದ ನಡುವೆಯೂ  ಭೂಮಿಕಾಳನ್ನ ವಿವಾಹವಾಗುತ್ತಾನೆ ಭೂಮಿಕ ಅರ್ಜುನ್ ರ ಮಗಳೇ ಸಾಕ್ಷಿ. ಸಾಕ್ಷಿ ಒಂದು ವರ್ಷದವಳಿರುವಾಗಲೇ ದುಷ್ಕರ್ಮಿಗಳ ಬಾಂಬ್ ದಾಳಿಯೊಂದರಲ್ಲಿ ಅರ್ಜುನ್ ಭೂಮಿಯ  ಋಣ ಕಳೆದುಕೊಂಡು ಬಿಡ್ತಾನೆ. ಒಂಟಿಯಾದ ಭೂಮಿಕಾ ಮಗಳನ್ನು ಕರೆದುಕೊಂಡು ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಧ್ಯಾಪಕಿಯಾಗಿ ದುಡಿಯುತ್ತಾ ಮಗಳಿಗೆ ನೆಮ್ಮದಿಯ ಬದುಕನ್ನು ಕೊಡುತ್ತಿರುವಾಗಲೇ ವಕ್ಕರಿಸಿದ  ಬ್ರೈನ್ ಟ್ಯೂಮರ್ ಅವಳನ್ನೂ ಬಲಿ ಪಡಿಯುತ್ತದೆ. ಈ ದುರಂತದಿಂದ ಸಾಕ್ಷಿ ಅಕ್ಕರೆಯ ಆಲಿಂಗನದಿಂದ ಕನಿಕರದ ಮಡಿಲಿಗೆ ವರ್ಗಾಯಿಸಲಲ್ಪಡುತ್ತಾಳೆ.
ಮಲಸಹೋದರಿಯೊಂದಿಗೆ ಇತ್ತ,  ದ್ವೇಷವೂ ಇಲ್ಲದ ಸ್ನೇಹವೂ ಇಲ್ಲದ ಸಂಬಂಧ  ಪೃಥ್ವಿಯದಾಗಿತ್ತು. ಇಲ್ಲಿ ಅಣ್ಣ ಅತ್ತಿಗೆಯರಿಗೆ ಬೇಡವೆನಿಸಿದ್ದರು ಜವಾಬ್ದಾರಿ ಹಾಗೂ ಅನಿವಾರ್ಯತೆ ಎಂಬ ಮಾನವೀಯ ಕಳಕಳಿಯಿಂದಾಗಿ  ಪೃಥ್ವಿ,ಹಾಗೂ  ದೀಪ್ತಿ ದಂಪತಿಗಳು  ಸಾಕ್ಷಿಗೆ ಆಸರೆಯಾಗಲು ತೀರ್ಮಾನಸುತ್ತಾರೆ  ಆದರೆ
ಇವರ ಏಕೈಕ ಪುತ್ರ ನಿತಿನ್ ತುಂಬಾ ಸ್ವಾರ್ಥ ಸ್ವಭಾವದವನು ಹದಿನಾರ ಹರೆಯದ ಎಜುಕೇಶನ್ಗಾಗಿ ಡಾರ್ಜಲಿಂಗನ ಬೋರ್ಡಿಂಗ್ ನಲ್ಲಿರುವ ನಿತಿನ್ ಒಪ್ಪುವನೆ ಎಂಬ ಅಳುಕು ಅವರಿಬ್ಬರನ್ನು ಒಳಗೊಳಗೆ ಕಾಡಿಸುತ್ತದೆಯಾದರೂ, ಮನೆಯವರೊಂದಿಗೆ ಪ್ರೀತಿಗಿಂತ ಹಕ್ಕು ಪಾಲನೆಗೆ ಹೆಚ್ಚಾಗಿತ್ತು ಅವನಿಗೆ . ರಜಾ ದಿನಗಳಲ್ಲಿ ಬಂದಾಗಲೇ ಮನೆಗೆಲಸದವರೊಂದಿಗಿನ ವಿಶ್ವಾಸವನ್ನೇ  ಹೀಗಳಿಯುವ ಈತ ಸಾಕ್ಷಿಯನ್ನು ಹೇಗೆ ಸ್ವೀಕರಿಸುವನೋ  ಎಂಬ ಆತಂಕ ಅವರದು.
ಸಾಕ್ಷಿ ನಿತಿನ್ನರನ್ನು ಅಡ್ಜಸ್ಟ್ ಮಾಡಿಕೊಂಡು ಸಂಭಾಳಿಸುವ ಜವಾಬ್ದಾರಿಯನ್ನು ದೀಪ್ತಿಗೆ ಹೆಗಲಿಗೆ ವರ್ಗಾಯಿಸುತ್ತಾನೆ.
ಇಲ್ಲಿ ಸಾಮಾನ್ಯವಾಗಿ ಪುರುಷರು ಸಂಕಷ್ಟದ ಜವಾಬ್ದಾರಿಗಳಿಂದ ಪಾರಾಗಿ ಸ್ತ್ರೀಯರ ಹೆಗಲಿಗೆ ಭಾರ ಹಾಕುವುದು ಒಳಿತಾದರೆ ನನ್ನಿಂದ, ಕೆಡುಕಾದರೆ ನಿನ್ನಿಂದ ಎಂಬ ಬಹುಪಾಲು  ಗಂಡಸರ ಧೋರಣೆಯನ್ನ ಲೇಖಕಿ ಮಾರ್ಮಿಕವಾಗಿ ಹೇಳಿದ್ದಾರೆ.ಇಲ್ಲಿಂದ ಸಾಕ್ಷಿಗೆ ಬದುಕಿನ ವಿವಿಧ ಮಗ್ಗಲುಗಳ ಹೊಸ ಹೊಸ ವಾತಾವರಣಗಳ ಅತ್ತಿಗೆಯೊಂದಿಗೆ ಅನುರಾಗದಿಂದ ಖುಷಿಗೊಂಡು ನಡೆದುಕೊಳ್ಳುವ ತೂಕದ ನಡವಳಿಕೆ ಕೆಲಸದವರಿಂದಲೇ ತಂದೆ ತಾಯಿ ಪ್ರೀತಿಗಿಂತ ಮಿಗಿಲಾದ ಮಮಕಾರವನ್ನ ಪಡೆಯುವ ಸುಂದರ ವ್ಯಕ್ತಿತ್ವವನ್ನು  ಆಕೆಗೆ ಪರಿಸ್ಥಿತಿಯೇ ಕಲಿಸುತ್ತಾ ಹೋಯಿತೇನೋ ,ಎನ್ನುವ ಮಾದರಿಯಲ್ಲಿ ಸಂಭಾಷಣೆಯನ್ನು ಕಟ್ಟುತ್ತಾ ಹೋಗಿರುವ ರೀತಿಯನ್ನು  ನಿಜವಾಗಿಯೂ ಓದಿಯೇ ಆನಂದಿಸಬೇಕು. ಅಷ್ಟು ಸುಂದರ ಸಮಂಜಸ ಸಂಭಾಷಣೆಯನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿರುವ ಶೈಲಿ ಮನಗೆಲ್ಲುತ್ತದೆ ಓದುಗರನ್ನು ಆಕರ್ಷಿಸುತ್ತದೆ.
ಸಾಕ್ಷಿ ಅಣ್ಣ ಅತ್ತಿಗೆಯರೊಂದಿಗೆ ಬೆಂಗಳೂರಿನಿಂದ ಬಾಂಬೆಗೆ ಪ್ರಯಾಣ
ಪೃಥ್ವಿ ನೇವಿಯಲ್ಲಿ ಕೆಲಸದಲ್ಲಿರುವಾತ
ಸಾಕ್ಷಿ… ಇನ್ಮುಂದೆ ಇದೇ ನಿನ್  ಮನೆ ಸಂಕೋಚವಿಲ್ಲದೆ ಫ್ರೀಯಾಗಿರು  ನಿನಗೇನಾದರೂ ಬೇಕಾದಲ್ಲಿ ದೀಪ್ತಿನ ಕೇಳು ಅಥವಾ ಸೋನು ಬಾಯಿ ಅವರನ್ನು  ಕೇಳು ತಿಳಿತಾ?
ಹೂ  ,ಅಣ್ಣ …
ಇಲ್ಲಿ ಎಲ್ಲಾನು ನೋಡಿಕೊಳ್ಳುವುದು ನಿನ್ನ ಅತ್ತಿಗೆಯೇ ,ನಾನು ಭೂಮಿಗಿಂತ ಹೆಚ್ಚು ಸಮಯ ನೀರಿನ  ಮೇಲೆನೇ ಕಳೆಯುವವನು
ನಿತಿನ್ ಇಲ್ಲದಿರುವಾಗ ನಿನಗೆ ಏನೂ ತೊಂದರೆ ಆಗೋದಿಲ್ಲ ಆದರೆ ಅವನು ಬಂದಾಗ ಸ್ವಲ್ಪ ನೀನೆ ಅಡ್ಜಸ್ಟ್ ಮಾಡ್ಕೋ. ಅವನು ಯಾರೊಂದಿಗೂ ಹೊಂದಿಕೊಳ್ಳುವವನಲ್ಲ
ಎಂದು ಮಲತಂಗಿಗೆ ತನ್ನ  ಪರಿವಾರದವನ್ನು ಪರಿಚಯಿಸಿದ್ದ.
ಹೀಗೆ ಅಣ್ಣ ಅತ್ತಿಗೆ ಅವಳನ್ನು ಎದೆಗಪ್ಪಿ ಮುದ್ದಾಡದಿದ್ದರೂ ಪರಕೀಯಳಂತೆ ದೂರ ಮಾಡಿರಲಿಲ್ಲ ಕರ್ತವ್ಯ ಪ್ರಜ್ಞೆಯಿಂದ ಅವಳನ್ನ ನೋಡ್ಕೊಳ್ತಿದ್ರು ಅವಳ ಅವಶ್ಯಕತೆಗಳನ್ನೆಲ್ಲವನ್ನು ಪೂರೈಸುತ್ತಿದ್ರೂ ಕೂಡ ಒಂದು ಚೌಕಟ್ಟಿನೊಳಗೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಿದ್ದರು ಸಾಕ್ಷಿ ಚೆನ್ನಾಗಿ ಓದುತ್ತಾ  ಶಿಕ್ಷಕರ ಪ್ರೀತಿಗೆ ಪಾತ್ರಳಾದಳು ಆದರೆ ಪ್ರತಿ ರಜೆಯಲ್ಲಿ ನಿತಿನ್ ಬಂದಾಗ ಅವಳು ಪರಕೀಯಳಾಗುತ್ತಿದ್ಲು ಅವಳ ಮನಸ್ಸಿನಲ್ಲಿ ನೋವುಗಳು ಇಣುಕಿ  ತಾನು ಈ ಮನೆಯ ಮಗು ಅಲ್ಲ ಎಂಬ ಪರಕೀಯ ಭಾವನೆ ಅವಳನ್ನು ಆಶ್ರಯಿಸ್ತಿತ್ತು ಪ್ರೀತಿ ಸ್ನೇಹದ ಬೇರು ತನ್ನನ್ನು ಒಂದಾಗಿಸುವುದಿಲ್ಲ ಎಂದು ನೊಂದುಕೊಳುತ್ತಿದ್ದಳು ,
ಅರ್ಥವಾಗದ ಹಿಂಸೆ ಅವಳನ್ನು ಕಾಡುತ್ತಿತ್ತು ನಿತಿನ್ ಮನೆಗೆ ಬಂದಾಗ ಅವನ ಕೋಣೆಯನ್ನು ಬಿಟ್ಟು ನಡು ಮನೆಯಲ್ಲಿ ಮಲಗಿದ್ದಾಗ ತಾನು ಬಿಕಾರಿ ಎಂದು ಎನಿಸುತ್ತಿತ್ತು ಸೋಲಿನ ಅನುಭವವೇ ಅಪಮಾನದ ನೋವೇ, ಮತ್ಸರದ ಕಿಡಿಯೇ ತನ್ನೊಳಗೆ ಆಗುತ್ತಿರುವ ಹಿಂಸೆ ಏನೆಂದು ನಿಖರವಾಗಿ ತಿಳಿಯದಿದ್ದರೂ ನಿದ್ರೆ ಬರುತ್ತಿರಲಿಲ್ಲ ದುಃಖದಿಂದ ತಾಯಿಯ ನೆನಪು ಮಾಡಿ ಕಣ್ಣೀರಾಗುತ್ತಿದ್ದಳು ಅಮ್ಮ ಎಂದು ತುಟಿ ಗಚ್ಚಿ ನಲುಗಿ ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು
ನನ್ನ ರೂಮ್ ಹಾಳಾಗಿದೆ ಬಂದ ಕೂಡಲೇ ನಿತಿನ್ ತಕರಾರು ತೆಗಿತಿದ್ದ ಕಂಡವರಿಗೆ ಇಲ್ಲಿ ಅವಕಾಶ ಕೊಡುತ್ತೀರಾ ಎಂದು  ಕೂಗಾಡುತ್ತಿದ್ದ ಅವಳನ್ನ ಇಲ್ಲಿಗೇಕೆ ಕರೆತಂದಿರಿ, ಅನಾಥಾಶ್ರಮಕ್ಕೆ ಸೇರಿಸ್ಬೇಕಿತ್ತು ಬೋರ್ಡಿಂಗ್ ಸ್ಕೂಲಿಗೆ ಬಿಡಬೇಕಿತ್ತು ಇಲ್ಲಿಗೇಕೆ ಕರೆತಂದಿರಿ ನಿಮ್ಮ ಜೊತೆ ಇರಬೇಕಾದವನು ನಾನು ಎಂದೆಲ್ಲಾ ಹಕ್ಕು ಪ್ರತಿಪಾದಿಸುತ್ತಿದ್ದ
ನಾನು ನಿಮ್ಮ ಬಳಿ ಇರಬಾರದೇನು   ನನ್ನ ಜಾಗಕ್ಕೆ ಅವಳ್ಯಾಕ್  ಬರ್ಬೇಕು ಎನುವಾಗಲೆಲ್ಲಾ ಪರಕೀಯಳೆಂಬ ನೋವು ಬಾದಿಸುತ್ತದೆ.
(ವಯೋಮಾನ ಮೀರಿ ನಿವೃತ್ತಿ ಅಂಚಿನಲ್ಲಿ ವಿವಾಹವಾಗಿ ಮಕ್ಕಳನ್ನು ಪಡೆಯುವಂತಹ ದಂಪತಿಗಳು ಯೋಚಿಸಲೇಬೇಕಾದ ಸಂಗತಿಯನ್ನು ಮನಮುಟ್ಟುವಂತೆ ಇಲ್ಲಿ ಲೇಖಕರು ಪ್ರಸ್ತಾಪಿಸಿದ್ದಾರೆ)
    .ವೈನೀ ನನ್ನ ಎಲ್ಲಾದ್ರೂ ಸಮ್ಮರ್ ಕ್ಯಾಂಪ್ಗೆ ಕಳಿಸಿ ಮೆಲ್ಲನೆ ಉಸಿರಿದಳು
ನೀನೆಲ್ಲಿಗೂ ಹೋಗ್ಬೇಕಾಗಿಲ್ಲ ಸಾಕ್ಷಿ ನಾವು ರಜೆಗೆ ಅಮೆರಿಕದಲ್ಲಿರುವ ನನ್ನ ಅಣ್ಣನ ಮನೆಗೆ ಹೋಗಿ ಬರ್ತೀನಿ ಅವನನ್ನು ಕರ್ಕೊಂಡು , ನೀನು ಹಾಯಾಗಿರು
ನಾನೊಬ್ಬಳೇ ಎಲ್ಲಿರಲಿ?
ಗಾಬರಿಯಾಗ್ಬೇಡ …ಸೋನು ಬಾಯಿ ನಿನ್ನೊಂದಿಗಿರ್ತಾಳೆ
ಈ ರೀತಿಯ ಸಂಭಾಷಣೆ ಗಳೆಲ್ಲ ಮಕ್ಕಳ ಹೊಂದಾಣಿಕೆಯ ವೈಪರಿತ್ಯಗಳನ್ನು ಸಿರಿವಂತಿಕೆ ಅಹಂ ಅನ್ನು ಹೇಗೆ ಪ್ರದರ್ಶಿಸುತ್ತಾರೆ ತಂದೆ ತಾಯಿ ಇಂತಹ ಸ್ಥಿತಿಯನ್ನು ನಿರ್ವಹಿಸುವಲ್ಲಿ ಎಲ್ಲಿ ಎಡುವುತ್ತಾರೆ ಎಂಬ ಅಂಶಗಳನ್ನು  ಎಲ್ಲಾ ಓದುಗರ ಬಾಳಿಗೆ ಬೆಳಕಾಗುವಂತೆ ಲೇಖಕಿ  ಹೆಣೆದಿದ್ದಾರೆ .
ಸೋನು ಬಾಯಿ ತನಗೆ ತಿಳಿದ ರೀತಿಯಲ್ಲಿ ಅವಳನ್ನ ಸಾಂತ್ವನ ಗೊಳಿಸಿದಳು. ತನ್ನೂರ ಕಥೆಗಳನ್ನ ಹೇಳಿ ನಗಿಸಿದಳು. ಅವಳಿಗೆ ಇಷ್ಟವಾದಂತ ತಿನಿಸುಗಳನ್ನ ಮಾಡಿ ಕೊಟ್ಟು ಅವಳನ್ನ ಪ್ರಸನ್ನಳಾಗಿಸಿದಳು. ಇದರಿಂದ ಸಾಕ್ಷಿ ಚೇತರಿಸಿಕೊಳ್ಳುತ್ತಾಳೆ ಸೋನು ನೀನು ಹೆಸರು ತಕ್ಕ ಹಾಗೆ ‘ಸೋನಾ ‘ಎಂದು ಸಾಕ್ಷಿ ಸೋನುಬಾಯಿಯನ್ನು ಅಭಿನಂದಿಸುತ್ತಾಳೆ .
ಸೊಂಪಾಗಿ ಚಿಗುರಿ ಅರಳುತ್ತಿರುವ ಈ ಕೂಸಿಗೆ ಸೋನು ಬಾಯಿ ಅಡುಗೆ ಕಲಿಸುತ್ತಾಳೆ
ಹದವಾದ ಬದುಕನ್ನು ಹೊಂದಿಸಿಕೊಳ್ಳಲು ನೆರವಾಗುತ್ತಾಳೆ ಅಮೆರಿಕ ಪ್ರವಾಸವನ್ನು ಮುಗಿಸಿ ಬರುವಷ್ಟರಲ್ಲಿ ಪೃಥ್ವಿಗೆ ಮದ್ರಾಸಿಗೆ ವರ್ಗಾವಣೆ ಆಗಿರುತ್ತೆ
   ಪುನಃ ಹೊಸ ಶಾಲೆ, ಹೊಸ ವಾತಾವರಣ ಭಾಷೆಯ ತೊಡಕಿಂದ ಸಾಕ್ಷಿ ಮಂಕಾದರೂ  ನಿಧಾನವಾಗಿ ಹಂದಿಕೊಳ್ಳಲು ಪ್ರಯತ್ನಿಸುತ್ತಾಳೆ ಸ್ವಲ್ಪ ಸ್ವಲ್ಪ ತಮಿಳನ್ನು ಕಲಿತು ಸೋನು ಬಾಯಿಗೂ  ನೆರವಾಗುತ್ತಾಳೆ
   ಇಲ್ಲಿ ಲೇಖಕಿ ತಮಿಳು ಭಾಷಾ ಪ್ರೇಮವನ್ನು ನಾಯಕಿಯ ಬಾಯಲ್ಲಿ ಹೇಳಿಸುತ್ತಾ ನಾವೂ ಮಾತೃಭಾಷೆಯಲ್ಲಿ ಅಭಿಮಾನ ಹೊಂದಬೇಕೆಂಬುದನ್ನು ಪರೋಕ್ಷವಾಗಿ ತಿಳಿಸುತ್ತಾರೆ
   ತಮಿಳಿನಲ್ಲಿ ಅಕ್ಷರಗಳು ಕಡಿಮೆ ಅದಕ್ಕೆ ಕಾಂತಿ ಗಾಂಧಿ ಒಂದಾಗುತ್ತದೆ ಅಷ್ಟೇ ಅಲ್ಲ ಅವರು ಪದ್ಮ ಅನ್ನುವ ಹೆಸರನ್ನ ಬದ್ಮಾ ಅಂತ ಉಚ್ಚರಿಸುತ್ತಾರೆ ಅಲ್ಲದೆ ತಮಿಳ್ನಲ್ಲಿ ಮಹಾಪ್ರಾಣ ಸಹ ಇಲ್ಲ ಖನ್ನಾ ಗೆ ಕನ್ನಾ ಅಂತಾನೆ ಬರಿಬೇಕು ಅಂತ ಹೇಳ್ತಾ ಆಕೆಗೆ ಭಾಷೆ ಕಲಿಸೋಕೆ  ನೆರವಾಗುತ್ತಾಳೆ.
   ಸೋನು ಬಾಯಿಗೆ ತಮಿಳು ಬರದೇ ಇರೋದ್ರಿಂದ ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಕೊಳ್ಳುವಾಗ ಬಹಳ ತ್ರಾಸಾಕ್ತದೆ ಇದನ್ನು ಪರಿಹರಿಸುವುದಕ್ಕೆ ‘ಆರುಮುಗಂ ‘ಎಂಬ ಗಂಡಾಳುವನ್ನು ಸೋನು ಬಾಯಿಗೆ ಸಹಾಯಕರಾಗಿ ನೇಮಕ ಮಾಡಿಕೊಳ್ಳುತ್ತಾರೆ
   ಇದರಿಂದ ಸೋನು ಬಾಯಿಯ ಕಷ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಮದ್ರಾಸಿನ ಹವಾಮಾನ ಒಗ್ಗದೆ ಆಗಾಗ್ಗೆ ಕಾಯಿಲೆ ಮಲಗ ತೊಡಗುತ್ತಾಳೆ. ಇದ್ರಿಂದ ಅವಳನ್ನು ವಾಪಸ್ ಊರಿಗೆ ಕಳಿಸುವ ತಯಾರಿನಡೆಯುತ್ತದೆ .
   ಇಲ್ಲಿ ಪುನಹ ಸಾಕ್ಷಿಗೆ ಅನಾಥ ಭಾವ ಕಾಡತೊಡಗುತ್ತದೆ ತಾಯಿಗಿಂತ ಹೆಚ್ಚಾಗಿ ಆಪ್ತತೆಯನ್ನ ಹೊಂದಿದ್ದ ಸೋನು ಬಾಯಿ ಇವಳಿಂದ ಬೀಳ್ಕೊಂಡು ವಾಪಸ್ದವರಿಗೆ ಹೋಗ್ತಾಳೆ
   ಈ ಸನ್ನಿವೇಶವನ್ನ ತವರು ಮನೆಯನ್ನು ತೊರೆದು ಹೋಗುವ ಹೆಣ್ಣು ಮಕ್ಕಳ ಕರುಳ ಬಾಂಧವ್ಯದಂತೆಯೇ ಲೇಖಕಿ ಚಿತ್ರಿಸಿರುವುದು
   ಅಮ್ಮ ಮಗಳ ಆಪ್ತತೆ ಅನುಬಂಧಕ್ಕ  ಕರುಳು ಮಿಡಿಯುತ್ತದೆ ಇದನ್ನ ಓದಿಯೇ ಗ್ರಹಿಸಬೇಕು.
   ಇಲ್ಲಿ ಮೊಗ್ಗುಂದು ಹೂವಾಗಿ ಅರಳುವ ಸನ್ನಿವೇಶ ಸಾಕ್ಷಿಯದಾಗುತ್ತದೆ  ಸಾಂಪ್ರದಾಯಿಕ ಆಚರಣೆಗಳಲ್ಲಿ ನಂಬಿಕೆ ಇಲ್ಲದ ದೀಪ್ತಿ ಸಾಕ್ಷಿಗೆ ಕೊಡಬೇಕಾದ ಪ್ರೋಟೀನ್ಸ್ ವಿಟಮಿನ್ಸ್ ಐರನ್ ಇರೋ ಪೌಷ್ಟಿಕ ಆಹಾರ ಒಣ ದ್ರಾಕ್ಷಿ ಗೋಡಂಬಿ ಖರ್ಜೂರ ಅಂಜೂರ ಪಿಸ್ತಾ ಎಲ್ಲಾ ರೀತಿಯ  ಹಣ್ಣು ಹಂಪಲುಗಳು ಕಡಲೆಕಾಯಿ ಬೀಜ ಚಿಕ್ಕಿಸ್ ಇತ್ಯಾದಿ ಎಲ್ಲವನ್ನು ಕೊಟ್ಟು ಸುಂದರವಾಗಿ ಆರೈಕೆ ಮಾಡ್ತಾಳೆ. ಇದ್ರಿಂದ ಕಾಶ್ಮೀರಿ ಸೇಬಿನಂತಾಗುತ್ತಾಳೆ ನೋಡಿದವರು ಮತ್ತೊಮ್ಮೆ ತಿರುಗಿನೋಡಬೇಕೆವಿಸುವಷ್ಟು ಸುಂದರ  ಶಿಲಾ ಬಾಲಿಕೆಯಂತೆ ತಿದ್ದಿದ ದಂತದ ಗೊಂಬೆಯಂತೆ ಕಂಗೊಳಿಸುವುದನ್ನು ಕಂಡು ದೀಪ್ತಿಯೂ ನೋಡಿ ಆನಂದ ಹಾಗೂ ಅಚ್ಚರಿ ಗೊಂಡು ವಿಷಾದಿಸುತ್ತಾಳೆ .
   ಮತ್ತೊಂದು ಹೊಸೂರು ಹೊಸ ಭಾಷೆ ಹೊಸ ಶಾಲೆ, ಹೊಸ ಪರಿಸರ ಪೃಥ್ವಿಗೆ ಕೇರಳಕ್ಕೆ ವರ್ಗಾವಣೆಯಾಗುತ್ತದೆ . ಕೇರಳದ ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದ ನೀಡುತು ಅರಬ್ಬಿ ಸಮುದ್ರ ತೀರ ಆಕರ್ಷಿಸಿತ್ತು ಸಾಕ್ಷಿ ಅಣ್ಣ ಅತ್ತಿಗೆಯರೊಂದಿಗೆ ಸಮುದ್ರ ತೀರದಲ್ಲಿ ಸಂತೋಷದಿಂದ ಓಡಾಡಿದ್ಲು ಬೆಸ್ತರು ಮೀನು ಹಿಡಿಯುವುದನ್ನು ಕಂಡು ಅಚ್ಚರಿಪಟ್ಲು.
   ಎರ್ನಾಕುಲಂ ಟೌನಿನಲ್ಲಿ ಶಾಲೆಗೆ ಸೇರಿದಳು ತುಸು ದೂರವಾದರೂ ಟ್ರಕ್ ನಲ್ಲಿ ಹೋಗೋ ಏರ್ಪಾಟ್ ಆಯ್ತು,ಅಮ್ಮು ಕುಟ್ಟಿ ಮನೆ ಕೆಲಸಕ್ಕೆ ಬರ್ತಾ ಇದ್ಲು ಅವಳೊಂದಿಗೆ ಮಾತನಾಡುವಾಗಲೆಲ್ಲ ಇವಳಿಗೆ  ಸೋನು ಬಾಯಿ ನೆನಪಾಗ್ತಿದ್ಲು ಅಮ್ಮು ಕುಟ್ಟಿಗೆ ಮಲಯಾಳಂ ಬಿಟ್ಟು ಬೇರೆ ಏನು ಬರುತ್ತಿರಲಿಲ್ಲ ಆಕೆಯ ಭಾಷೆಯನ್ನು ತಮಾಷೆಯಾಗಿ ಅಣಕಿಸುತ್ತಾ ಖುಷಿಯಿಂದ ಅವಳೊಂದಿಗೆ ಸೇರಿ ಮನೆಗೆಲಸ ಮಾಡುವಷ್ಟು ಪ್ರವೀಣೆಯಾಗಿದ್ದಳು.
   ಸಾಚಿ ಮೋಳೆ ಎಂದು ಅಮ್ಮು ಕುಟ್ಟಿ ಕರದಾಗ ಸಾಕ್ಷಿಗೆ ನಗು ಬರುತ್ತಿತ್ತು. ಇಬ್ಬರೂ ಹೆಚ್ಚಾಗಿ ಅಭಿನಯದೊಂದಿಗೆ ಸಂಭಾಷಿಸುತ್ತಿದ್ದರು ಅಮ್ಮ ಕುಟ್ಟಿ ಮತ್ತು ಸಾಕ್ಷಿಯ ಸಂಭಾಷಣೆಯನ್ನು ಲೇಖಕರು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿರುವ ಸನ್ನಿವೇಶ ಮನಸೆಳೆಯುವಂತಿದೆ ಸಾಮಾನ್ಯವಾಗಿ ಲೇಖಕಿಯ ಅಂತರ್ಯದ ಹಾಸ್ಯಮಯ ಮಾತುಕತೆ  ಇಲ್ಲಿ ಅನಾಯಾಸವಾಗಿ ಹೊರಹೊಮ್ಮಿ ನಗು ಮೂಡಿಸುತ್ತವೆ
   ಹೀಗೆ ಮುಂದುವರೆದ ಸಾಕ್ಷಿಯ ಬದುಕಿಗೆ ಪಕ್ಕದ ಮನೆ ಭಾಸ್ಕರ್ರಾಯರ ದಂಪತಿಗಳು ಇವಳ ಬದುಕಿನಲ್ಲಿ ಹೊಸ ಅಧ್ಯಾಯ ಪ್ರಾರಂಬಿಸಲು ನೆರವಾಗುತ್ತಾರೆ
   ಭಾಸ್ಕರ್ ರಾಯರು ಬಹಳ ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರಿಂದ ನಿರಾಯಾಸವಾಗಿ ಕನ್ನಡ ಮಾತನಾಡಬಲ್ಲವರಾಗಿದ್ದರು ಆದ್ದರಿಂದ ಸಾಕ್ಷಿಗೆ ಆಪ್ತರೂ ಆದ್ರೂ
   ಸರಳ ಸಜ್ಜನಿಕೆ, ಆತ್ಮೀಯ ನಡೆ ನುಡಿ ಸಂಸ್ಕಾರ ಸಂಸ್ಕೃತಿಯಿಂದ ಹೊಂದಾಣಿಕೆ ಇವುಗಳಿಂದಾಗಿ ಬಹಳ ಬೇಗ ಇವಳು  ಅವರ ಮನೆಯ ಮಗಳಂತಾಗಿದ್ದಳು.
   ನಿಜವಾದ ಕಾದಂಬರಿಯ ಪಯಣ ಸಾಕ್ಷಿಯ ಬದುಕಿನ ತಿರುವಿನ ಸುಳಿಗಳು ಇಲ್ಲಿಂದ ಆರಂಭವಾಗುತ್ತದೆ
   ಭಾಸ್ಕರ್ ರಾಯರು ಪೃಥ್ವಿ ಕುಟುಂಬವನ್ನು ಒಂದು ಸಣ್ಣ ಪಾರ್ಟಿಗಾಗಿಹವಾನಿಸ್ತಾರೆ ಪಾರ್ಟಿಯಲ್ಲಿ ಭಾಸ್ಕರ್ರಾಯರ ಸ್ನೇಹಿತರು ಬಂಧುಗಳು ಹಿತೈಷಿಗಳು ಸೇರಿರುತ್ತಾರೆ ಅದರಲ್ಲಿ ದರ್ಶನ್ ಕೂಡ .
   ಈತ ಆರ್ಮಿಯ ಪೈಲೆಟ್ ಆಗಿದ್ದಾನೆ ಸಾಕ್ಷಿಯ ರೂಪ ರಾಶಿಗೆ ಮಾರುಹೋಗಿ ಭಾಸ್ಕರ್ ರಾಯರಲ್ಲಿ ವಿವಾಹದ ಪ್ರಸ್ತಾಪವನ್ನು  ಹೇಳಬೇಕೆನ್ನುವಷ್ಟರಲ್ಲಿ ಪೃಥ್ವಿಗೆ ಪುನಹ ಕಲ್ಕತ್ತಾಗಿ ವರ್ಗಾವಣೆ ಆಗುತ್ತದೆ ಸಾಕ್ಷಿ ಕೇರಳದಿಂದ ಮತ್ತೆ ಕಲ್ಕತ್ತಾ ಕ್ಕೆ ಪ್ರಯಾಣ.
   ಭಾಸ್ಕರಾಯರ ನೆರವಿನಿಂದ ಬಹಳ ದಿನಗಳ ನಂತರ ದರ್ಶನ್ ಸಾಕ್ಷಿಯ ವಿಳಾಸ ಪತ್ತೆ ಹಚ್ಚುತ್ತಾನೆ ಇಲ್ಲಿ ಅವರ ಅನುರಾಗದ ಆಲಾಪನೆಗಳು ಪ್ರಾರಂಭವಾಗುತ್ತವೆ
   ಇಲ್ಲಿ ಲೇಖಕಿ ಶೃಂಗಾರಮಯ ಸಂಭಾಷಣೆಗಳನ್ನು ಅತ್ಯಂತ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ
   ದರ್ಶನ್ ಪೃಥ್ವಿ ದೀಪ್ತಿ ದಂಪತಿಗಳನ್ನು ಭೇಟಿ ಮಾಡಿ ತಮ್ಮ ಸಹೋದರಿಯನ್ನು ವಿವಾಹ ಮಾಡಿ ಕೊಡುವಂತೆ ಕೇಳಿಕೊಳ್ಳುತ್ತಾನೆ.
   ನಂತ್ರ ಪೃಥ್ವಿ ದೀಪ್ತಿಯರ ಸಂಭಾಷಣೆ ದೀಪ್ತಿ ಸಾಕ್ಷಿಯ ಸಂಭಾಷಣೆ
   ವಿವಾಹಕ್ಕೆ ಒಪ್ಪಿಗೆ ಎಂಗೇಜ್ಮೆಂಟ್ಗಾಗಿ ಬೆಂಗಳೂರಿನ ಪ್ರಯಾಣ.
   ಪೃಥ್ವಿಯ ಒಪ್ಪಿಗೆ ಪಡೆದು ಹೊರ ವಿಹಾರಕ್ಕೆ ಸಾಕ್ಷಿಯೊಂದಿಗೆ ಸುತ್ತಾಟ .
   ದಿಡೀರನೆ ಮತ್ತೊಂದು ಆಘಾತ ಏರ್ ರ್ಕ್ರಷ್  ನಿಂದಾಗಿ ಪೈಲೆಟ್ ದರ್ಶನ್ ದುರ್ಮರಣ ಎಂಬ ಸುದ್ದಿ.
     ಈ ಆಘಾತದಿಂದ ಹೊರ ಬಂದು ಚೇತರಿಸಿಕೊಳ್ಳಬೇಕೆನ್ನುವಷ್ಟರಲ್ಲಿ , ಬದುಕಿಗೆ ಹೆಗಲಾದ ,ಕರ್ತವ್ಯವೋ ಪ್ರೀತಿಯೋ ಏನಾದರೂ ಆಗಲಿ ನನಗೆ ಆಶ್ರಯ ಕೊಟ್ಟು ಹೆಗಲಾಗಿಜಾಗರೂಕತೆಯಿಂದ ಕಾಪಾಡಿದ ಅಣ್ಣ ಹೃದಯಘಾತ . ಪೃಥ್ವಿಯ ಅಗಲಿಕೆ ,
ಏಕಾಂಗಿಯಾದ ಅತ್ತಿಗೆ ದೀಪ್ತಿ ಮಗನೊಟ್ಟಿಗೆ ಅಮೆರಿಕ ವಾಸ್ತವ್ಯ .
ಈಗ ನಿಜವಾಗಿಯೂ ಅನಾಥಳಾದ ಸಾಕ್ಷಿ ಹಾಸ್ಟೆಲ್ ಒಂದರಲ್ಲಿ ವಾಸಿಸುತ್ತಾ  ಪರಿಚಿತರ ನೆರವಿನಿಂದ ಯಾವುದೋ ಕಂಪನಿಯೊಂದರಲ್ಲಿ ಸಣ್ಣ ಕೆಲಸಕ್ಕೆ ಸೇರ್ಪಡೆ ,
ಆ ಕಂಪನಿಯ ಮಾಲೀಕ ತನ್ನ ಕಂಪನಿಯ ಹೊಸದಾದಿ ಬಂದ ನೌಕರರನ್ನು ಗಮನಿಸಿದಷ್ಟು ಕಾರ್ಯಭಾರ
ಎಷ್ಟೋ  ದಿನಗಳ ನಂತರ ಸಾಕ್ಷಿಯನ್ನು ಕಂಡು ಆಕೆಯ ಕೆಲಸ ಗಾಂಭೀರ್ಯ ಸೌಂದರ್ಯ ಬದ್ಧತೆಗಳಿಂದಾಗಿ
ಮಾಲೀಕರ ಮೆಚ್ಚುಗೆಗೆ ಪಾತ್ರಳಾಗುವುದು . ಇಂದ್ರಜಿತ್ ನಿಂದ  ಆಕೆಗೆ ವಿವಾಹದ ಕೋರಿಕೆ, ತೀರ್ಮಾನದ ಗೊಂದಲ ಹೇಗೋ ಏನೋ ಎಂಬ ಆತಂಕ ಭಯ ದರ್ಶನ್ ನೆನಪು ಇಂತಹ
 ಅಯೋಮಯ ಬಿರುಗಾಳಿಗಳಿಂದ ಕಂಗೆಟ್ಟ ಸಾಕ್ಷಿ ತೀರ್ಮಾನಿಸಲಾಗದೆ ಗೆಳತಿಯರ ಮೇಲೆ ವರ್ಗಾಯಿಸುತ್ತಾಳೆ ಗೆಳತಿಯರ ಸಲಹೆಯಂತೆ ಇಂದ್ರಜಿತ್ ನ ವಿವಾಹವಾಗ್ತಾಳೆ ವಿವಾಹವಾಗಿ ವಾರದಲ್ಲಿ ಹನಿಮೂನ್ ಗಾಗಿ ತೆರಳುತ್ತಿದ್ದ ಸಮಯದಲ್ಲಿ ಹಳೆ ಸೇಡಿನಿಂದ ದುಷ್ಕರ್ಮಿಗಳ ಅಟ್ಯಾಕ್ ನಿಂದ ಗಾಯಗೊಳ್ತಾನೆ .
 ಆಸ್ಪತ್ರೆಯಲ್ಲಿ ಸೇರಿ ಮತ್ತೆ ಚೇತರಿಸಿಕೊಳ್ಳುತ್ತಾನೆ. ಈ ಎಲ್ಲ ಜಂಜಡಗಳಿಂದ ಬೇಸತ್ತು ಕಂಪನಿಯ ಎಲ್ಲ ವ್ಯವಹಾರಗಳನ್ನು ಇತರರಿಗೆ ವಹಿಸಿಕೊಟ್ಟು ಹಳ್ಳಿಯಲ್ಲಿ ನೆಲೆಸಲು ತೀರ್ಮಾನಿಸಿ, ಹಳ್ಳಿಯಲ್ಲೊಂದು ಭವ್ಯ ಭಂಗಲೇ ನ ಕಟ್ಟಿಸಿ ವಾಸ್ತವ್ಯ ಬದಲಾಯಿಸುತ್ತಾನೆ
      ಹೀಗೆ ಸಾಗುವ ಸಾಕ್ಷಿಯ ಬದುಕಿನಲ್ಲಿ ಮತ್ತಷ್ಟು ಸುಳಿಗಳು ಬಂದು ಏಕಾಂಗಿಯಾಗ್ತಾಳೆ
      ಕಾದಂಬರಿಯ ಆರಂಭವೇ ಏಕಾಂಗಿಯಾಗಿ ತೋಟದ ಮನೆಯಲ್ಲಿ ಕರೋಲಾಳ ಬೇಹುಗಾರಿಕೆಯಲ್ಲಿ
 ಹಾಗೂ ಕಾವಲಿನಲ್ಲಿ ಇಂದ್ರಜಿತ್ ನ ವಿಧವೆ ಪತ್ನಿಯಾಗಿ ಜೀವನ ನಡೆಸುವಾಗ ನೆಲಮಾಳಿಗೆಯಲ್ಲಿ ವಿಚಿತ್ರವಾಗಿ ಸಂಚರಿಸುತ್ತಿದ್ದ ಯಾವುದೋ ಹೆಜ್ಜೆಗಳಿಂದ ಭಯಭೀಳಾಗುವ ಸನ್ನಿವೇಶದಿಂದ ಕಾಂಬರಿ ಆರಂಭವಾಗುತ್ತದೆ .
 ಕಾದಂಬರಿಯ ತಿರುಗುಗಳು ಸಂಭಾಷಣೆ, ರೋಚಕ ಸನ್ನಿವೇಶಗಳು ಕೈ ಬಿಡದಂತೆ ಓದಿಸಿಕೊಳ್ಳುತ್ತವೆ. ಅದೆಲ್ಲವನ್ನು ಓದಿಯೇ ಆನಂದಿಸಬೇಕು.
       ಕಡೆಗೆ ಹೇಗೆ ಅವಳು ಬಯಸಿದ ತಾರೆ ನಿಲುಕುತ್ತದೆ ಹೇಗೆ ಎಂಬುದನ್ನು ಓದಿಯೇ ತಿಳಿಯಿರಿ.
      ಎಂದು ಹೇಳುತ್ತಾ , ಈ ಹಿಂದೆ ಪ್ರೋತ್ಸಾಹ ಕ್ಕಾಗಿ ಈ ಪುಸ್ತಕವನ್ನು ವೀಣಾನಾಯಕ್  ಮೇಡಮ್ ಕಳಿಸಿದ್ದರು ಅದು ಇಂದು ಚಿತ್ರಲೇಖಾ ಮೇಡಮ್ ರವರ    
 ಹುಟ್ಟು ಹಬ್ಬದಂದು ಈ ಅಭಿಯಾನದಲ್ಲಿ ಭಾಗವಹಿಸಲು ಅನುಕೂಲವಾಯಿತು . ಆದ್ದರಿಂದ ವೀಣಾ ನಾಯಕ್ ಮೇಡಂ ರವರಿಗೆ ನನ್ನ ಹೃತ್ಪೂರ್ವಕವಾದಂತ ವಂದನೆಗಳನ್ನು ತಿಳಿಸುತ್ತೇನೆ
   ಚಿತ್ರಲೇಖ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸುತ್ತಾ, 160ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟರು ತುಸು ಹಮ್ಮು ಬಿಮ್ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು, ಅವರ ನಿಗರ್ವಿತನವನ್ನು ಆ ಸರಸ್ವತಿಯ ಸಹೋದರಿ ನಮಗೂ ದಾರೆ ಎರೆಯಲಿ ಎಂದು ಕೇಳಿಕೊಳುತ್ತಾ  ಅವರ ಕೀರ್ತಿ ಹೆಚ್ಚಲಿ ಮತ್ತಷ್ಟು ಮಗದಷ್ಟು ಪುಸ್ತಕಗಳು ಅವರಿಂದ ಬರೆಯಲ್ಪಟ್ಟು ಸಾಹಿತ್ಯ ಭಂಡಾರವನ್ನು ತುಂಬಲು ಅವರಿಗೆ ದೀರ್ಘಾಯುಷ್ಯ ನೀಡಲೆಂದು ಭಗವಂತನಲ್ಲಿ ಬೇಡುತ್ತೇನೆ .
   ——————————————-

ವನಜಾ ಸುರೇಶ್

Leave a Reply

Back To Top