ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್
ಅವಳಿಲ್ಲದೆಯೂ ನಗುತ ಬದುಕಲೇಬೇಕಿತ್ತು ಬದುಕುವ ಸಲುವಾಗಿ
ನೋವ ಮರೆಯುವ ಕಲೆಯ ಕಲಿಯಲೇಬೇಕಿತ್ತು ಬದುಕುವ ಸಲುವಾಗಿ
ಮನಸು ಹೊದ್ದ ಸಾವಿರ ಕನಸುಗಳ ಚಾದರ ಜಾಳು ಜಾಳಾದರೇನು
ಹೊಸ ಸ್ವಪ್ನಗಳ ಮತ್ತೆ ಹೆಣೆಯಲೇಬೇಕಿತ್ತು ಬದುಕುವ ಸಲುವಾಗಿ
ಪ್ರಣಯೋನ್ಮಾದದಿ ಕೂಡಿದ ಉತ್ಕಟ ಕ್ಷಣಗಳು ಜೀವಂತ ನನ್ನಲ್ಲಿನ್ನೂ
ಬಣ್ಣದ ಚಿಟ್ಟೆಯಾದವಳ ಹೆಸರ ಅಳಿಸಲೇಬೇಕಿತ್ತು ಬದುಕುವ ಸಲುವಾಗಿ
ಮೈಖಾನೆಯ ಬಾಗಿಲು ತೆರೆದಿತ್ತು ಮೈ ಮರೆಯಲು ಪ್ರತಿ ಇರುಳೂ
ಸಾಕಿಯೆದುರು ಮದಿರೆಗೆ ಕೈ ಚಾಚಲೇಬೇಕಿತ್ತು ಬದುಕುವ ಸಲುವಾಗಿ
ತುಂಬಿದ ಬಟ್ಟಲ ಮಧು ಎದೆಗಿಳಿದಂತೆ ಸುಡುವ ಬೆಂಕಿಯಾದರೇನು
ಕಹಿನೆನಪುಗಳ ನಶೆಯಲಿ ಮರೆಯಲೇಬೇಕಿತ್ತು ಬದುಕುವ ಸಲುವಾಗಿ
ಎಷ್ಟು ಕಾಲ ಹೈರಾಣಾಗಿ ಸ್ನಾನುಕಂಪದ ಕಡಲಲಿ ಮುಳುಗೇಳಲಿ
ಪ್ರೀತಿಸುವ ಮತ್ತೊಂದು ಜೀವವ ಅರಸಲೇಬೇಕಿತ್ತು ಬದುಕುವ ಸಲುವಾಗಿ
ನೀನಾಗಿಯೇ ಒಲಿದು ಬಂದೆ ನನ್ನೊಲವೇ ಕೊನೆತನಕ ಜೊತೆ ನಿಲ್ಲಲು
ಹೊಸ ಹುರುಪಿನೊಡೆ ಗಮ್ಯದತ್ತ ಸಾಗಲೇಬೇಕಿತ್ತು ಬದುಕುವ ಸಲುವಾಗಿ
ಎ. ಹೇಮಗಂಗಾ
ಬಹಳ ಚಂದದ ಗಜಲ್ ಬರಹ
ಮನಸೆಳೆವ ಪದಪ್ರಯೋಗ, ಭಾವದೊಲುಮೆಯ ರಸಸಿಂಚನ ತುಂಬಿದ ಗಝಲ್