ಕಾವ್ಯ ಸಂಗಾತಿ
ಪ್ರೊ. ಪಿ. ಎಲ್ ಮಿಸಾಳೆ
ಗೆಳತಿ,ಸದ್ಯಕ್ಕಂತೂ ಈ ಗುಲಾಬಿ ತಗೋ
ಗೆಳತಿ,
ಅಂದು ರಾತ್ರಿ ಸರಸದ ಸಮಯದಲಿ,
ಅತ್ಯುತ್ಸಾಹದಿಂದ ನಾ….
‘ಆ ನಕ್ಷತ್ರಗಳನು ನಿನ್ನ ಮುಡಿಗೇರಿಸುವೆ ‘!
ಅಂದುಬಿಟ್ಟೆ!!
ನೀನು –‘ನಕ್ಷತ್ರಗಳೇನೂ ಬೇಡ’
‘ಆ ಬಾಲಚಂದ್ರನನ್ನೇ ತಂದುಕೊಡಿ ‘
ಅನ್ನಬೇಕೆ??
ನಾನು,
ಬಾಲಚಂದ್ರತರಲು ಗಗನಯಾನಿಯಾದೆ!
ನಮ್ಮಾತು ಆಲಿಸಿದ ಬಾಲಚಂದ್ರ,
ಓಡೋಡಿ ಶಿವನ ಜಡೆಯೇರಿದ!!
ನಿರಾಶೆಗೊಂಡ ನನಗೆ,
ಕಂಡಿತೊಂದು ಸುಂದರ ಗುಲಾಬಿ,
ಗೆಳತಿ,
ಸದ್ಯಕ್ಕಂತೂ ಈ ಗುಲಾಬಿ ತಗೋ!!
ಗೆಳತಿ,
ನೀನು ತುಂಬ ಹಠಮಾರಿ ಮಾರಾಯ್ತಿ,
ನಿನ್ನ ಪ್ರೀತಿಗಾಗಿ,
ನಾನು ಶಿವನನ್ನೇ ಒಲಿಸಬೇಕಾಯ್ತು!!
ಶಿವ ಹೇಳಿದ,
ಈ ಬಾಲಚಂದಿರ,
‘ ನನ್ನ ಜಡೆಯಲ್ಲಿರುವಂತೆ ಕಾಣುತ್ತಾನಷ್ಟೆ’
ನಿಜವಾಗಿಯೂ,
‘ಅವನಿರುವುದು ಗಂಗೆಯ ಮುಡಿಯಲ್ಲಿ’!
ಅತ್ತ ನೋಡು ಮಾರಾಯಾ,
ನನಗೆ – ತನಗೆಂದು,
ಗಂಗೆ ಗೌರಿಯರಲ್ಲೇ ಕದನ!!
ಈ ಕಲಹಕ್ಕೆ ಕಾರಣ ನೀನು!!
ಎಂದವನೇ….
‘ ಉರಿಗಣ್ಣಿ ‘ನತ್ತ ನೋಡಲಾರಂಭಿಸಿದ!
ನಾನು…
‘ ಸತ್ನ್ಯಪ್ಪೋ ‘ಎಂದವನೆ ಓಡಿ ಬಂದೆ!
ಗೆಳತಿ ಹಠಮಾಡಬೇಡ,
ಸದ್ಯಕ್ಕಂತೂ..ಈ ಗುಲಾಬಿ ತಗೋ.
ಗೆಳತಿ,
ಬಾಲಚಂದ್ರ ಸಿಗದ ನೋವಿನಲಿ,
ಹೊರಟೆ ಭೂಲೋಕದ ದ್ವಾರಕೆಯತ್ತ!
ದಾರಿಯಲ್ಲೊಂದು ಆಶ್ಚರ್ಯ!!
‘ಬಹು ಸುಂದರ ಪಾರಿಜಾತದ ಹೂ’
ಸಂಭ್ರಮದಿಂದಲೇ…
ನಿನಗಾಗಿ ಎತ್ತಿಕೊಂಡೆ!
ಎಲ್ಲಿದ್ದರೋ ನಾರದ ಮಹರ್ಷಿ,
ನನ್ನಿಂದ ಹೂವು ಕಿತ್ತುಕೊಂಡವರೇ…
ಕೃಷ್ಣನಿಗೊಯ್ದು ಕೊಟ್ಟರು!
ಆ ಲಂಪಟ ಕೃಷ್ಣ ತಡಮಾಡಲಿಲ್ಲ,
ಸತ್ಯಭಾಮೆಯ ತಲೆಗೆ ಮುಡಿಸಿಬಿಟ್ಟ!!
ಇದ ನೋಡಿದ…..
ಸವತಿ ರುಕ್ಮಿಣಿಯ ಹೊಟ್ಟೆ ಉರಿಯಿತು!
ಕೃಷ್ಣನೊಂದಿಗೆ ಜಂಗೀಕಲಹ!!
ಇನ್ನು ಇಲ್ಲೇ ನಿಂತರೆ,
ಪ್ರಾಣಾಪಾಯ!!!
ಅಂದವನೇ ಓಡೋಡಿ ಬಂದೆ.
ಗೆಳತಿ ಮುನಿಸುಬೇಡ,
ಸದ್ಯಕ್ಕಂತೂ ಈ ಗುಲಾಬಿ ತಗೋ.
ಗೆಳತಿ,
ಈ ಹಠ, ಮುನಿಸು ಬಿಡು ನನ್ನೊಡತಿ,
ಆ ಬಾಲಚಂದ್ರನೂ ಬೇಡ,
ಪಾರಿಜಾತವಂತು ಬೇಡವೇ ಬೇಡ.
ಇದೋ ನನ್ನತ್ತ ನೋಡು,
ಈ ನನ್ನ ಗುಲಾಬಿಯಲ್ಲಿ,
ಪ್ರೀತಿ ವಿಶ್ವಾಸ ಅಂತಃಕರಣ ಅಭಿಮಾನ
ತುಂಬಿರುವೆ!!
ಈ ಹೂವು ನಿನಗೆ ಮಾತ್ರ ಸಲ್ಲಬೇಕು.
ಸದ್ಯಕ್ಕಂತೂ ಈ ಗುಲಾಬಿ ತಗೋ!!
ಆರ್ತನಾಗಿ ಬೇಡಿಕೊಂಡೆ,
ಒಂದರೆಕ್ಷಣ ಕೆಕ್ಕರಿಸಿ ನೋಡಿದವಳೆ…
ಥಟ್ಟನೆ ಕಣ್ಣರಳಿಸಿ,
ಮುಗುಳ್ನಕ್ಕವಳೇ…
” ಹೂವು ಪಡೆದು ಹೂಮುತ್ತನಿತ್ತಳು.”
ಪ್ರೊ ಪಿ ಎಲ್ ಮಿಸಾಳೆ ರಾಮದುರ್ಗ.
Super
ಸೊಗಸಾದ ಕವನ ತುಂಬಾ ಚೆನ್ನಾಗಿದೆ ಸರ್.
ಸರ್….
ನಿಮಗಾಗಿ ಸಿಕ್ಕ ಗುಲಾಬಿ ಹೂ…
ನಿಮಗೆಂದು ಬಾಡದ ಮುದ್ದಿನ ಹೂ…
ಸ(ರ್) ರೋಜಾ ಎಂಬ ಮಾತಾಡುವ ಕೆಂಪುಗುಲಾಬಿ.
ಸದ್ಯಕ್ಕಂತೂ ಈ ಗುಲಾಬಿ ತಗೋಳಿ….
Sir , ತುಂಬಾ ಚೆನ್ನಾಗಿದೆ Nice sir , ಹೂ ಮುತ್ತಿನ ರುಚಿ ಹೇಳಿ sir
Super sir