ಆದಪ್ಪ ಹೆಂಬಾ ಮಸ್ಕಿ ಕವಿತೆ-ಕರುಳು

ಕಾವ್ಯ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ಕರುಳು

ಗುಡುಗು ಮಿಂಚಿನ
ದರ್ಪ ಕೇಳಿಸಿ
ಮೈ ಮನಗಳನೊಮ್ಮೆ
ಮೆಲ್ಲ ನಡುಗಿಸಿ
ಮುದ್ದು ಕರುವನು ಪಕ್ಕಕಿರಿಸಿ
ಗಿಡದ ಬುಡದಿ ನಿಂತಿಹ
ತಾಯಿ ಆಕಳ ಮನಸು
ಮುನಿಸು ||

ಬರುತ ಬರುತ ಮಳೆಯು ಜೋರು
ಭಾರೀ ಮಳೆಗೆ ಕೊರೆವ ಛಳಿಗೆ
ಬಾಲ ಮುದುಡಿಸಿ
ಮೈಯ್ಯ ನಡುಗಿಸಿ
ಅಂಬಾ ಅನುತಿದೆ ಆ ಕರು ||

ಮಗಳ ನಡುಕವ ನೋಡಲಾಗದೇ
ತಾಯ ಎದೆಬಡಿತ ಜೋರಾಯ್ತು
ಕರುವನೊಮ್ಮೆ ಮೂಸಿಸುತ್ತ
ಮೂಕ ಭಾಷೆಯಲಿ ಮಲಗಲೇಳಿತು ||

ತಾಯ ಭಾಷೆಯನರಿತ ಕರು
ಮಲಗಲೆಂದು ನೆಲವ ನೋಡಿತು
ಕೆಳಗೆ ಇರುವ ರಾಡಿ ಕಂಡು
ಹೇಸಿ ಹೋಯಿತು ||

ಆದರೂ…..
ಸಾವಕಾಶದಿ
ಕಾಲುಮಡಿಚುತ
ಮಯ್ಯ ನಡುಗಿಸಿ
ಬಾಲ ಮುದುಡುತ
ಮಲಗಿತು ||

ಕರುವಿಗೆಂದೂ
ಮಳೆಯ ಹನಿ ಸಿಡಿಯದಿರಲೆಂದು
ಅಡ್ಡ ನಿಂತಿತು
ತಾಯಿ ಆಕಳು
ಮನ ನೊಂದುಕೊಂಡು ||

ಮುಚ್ವಿದ ಬಾಗಿಲೆಡೆ ನೋಡಿತು
ಒಡತಿ ಬರುವಳೆಂದು
ಆದರದಕೇನು ಗೊತ್ತು
ತನಗೆ ನಿರಾಸೆ ಕಾದಿದೆಯಂದು ||

ಜಿಟಿ ಜಿಟಿ ಮಳೆಯಲೇ
ಬೆಳಗಾಗಿಹೋಯ್ತು
ತಂಬಿಗೆಯ ಹಿಡಿದು
ಮನೆಯೊಡತಿ ಬಂದಾಯ್ತು
ಕೆಚ್ಚಲಿಗೆ ಕೈ ಹಾಕಿ
ಮೊಲೆ ಹಾಲೂ ಕರೆದಾಯ್ತು
ಒಡತಿ ಬಿಟ್ಟ
ತುಸು ಹಾಲು
ಕರು ಕುಡಿವಾಗ
ತಾಯಿ ಆಕಳ ಮನಸು
ಮುನಿಸಾಯ್ತು ||


ಆದಪ್ಪ ಹೆಂಬಾ ಮಸ್ಕಿ

2 thoughts on “ಆದಪ್ಪ ಹೆಂಬಾ ಮಸ್ಕಿ ಕವಿತೆ-ಕರುಳು

  1. ಸೂಪರ್ ಸರ್ ,ಚೆನ್ನಾಗಿದೆ ನಿಮ್ಮ ಈ ಬರಹ ,ಆಗ ನಾನು 4 ವರ್ಷದ ಮಗು ಇದ್ದೆ 1986 ರಲ್ಲಿ

Leave a Reply

Back To Top