‘ಕಾಯಬೇಡಿ ನಾ ಸಾಯುವತನಕ’

ಕಾವ್ಯ ಸಂಗಾತಿ

ಅನ್ನಪೂರ್ಣ ಪದ್ಮಸಾಲಿ

ಕಾಯಬೇಡಿ ನಾ ಸಾಯುವತನಕ

ನನ್ನ ಬಗ್ಗೆ ನಿಮ್ಮಲ್ಲಿ…
ಒಲವಿನ ಒರತೆ ಇದ್ದರೆ,
ಅಣುವಿನಷ್ಟಾದರೂ ಪ್ರೀತಿ ಇದ್ದಿದ್ದೇ ಆದರೆ…
ಆತ್ಮೀಯತೆ ವ್ಯಕ್ತವಾಗುವ ಹಾಗಿದ್ದರೆ..
ಸ್ನೇಹ ಸೌಜನ್ಯ ಸಾಮರಸ್ಯ ಬೆರೆತಿದ್ದರೆ..
ಕಾಳಜಿ ಕಣ್ಣಲಿ ತೋರುವಂತಿದ್ದರೆ..
ಇಂದೇ ಹಂಚಿಕೊಳ್ಳಿ
ಸುಮ್ಮನೆ ಕಾಯುವುದು ಬೇಡ..
ಕೊಂಕು ಬಿಂಕ ಬಿನ್ನಾಣ ತೋರಲು
ವ್ಯಯಿಸಬೇಡಿ ಸಮಯ ನಾ ಸಾಯುತನಕ

ನಾ ಸತ್ತ ಮೇಲೆ….
ಬೇಡ ನಿಮ್ಮ ಕಣ್ಣೀರು ನನಗೆ
ಹೂ ಹಾರಗಳೂ ಬೇಡ..!!
ಹೊಗಳಿಕೆಗಳಿದ್ದರೆ ಇಂದೇ ಹೊಗಳಿ..
ತೆಗಳಿಕೆಗಳಿದ್ದರೆ ಇಂದೇ ತೆಗಳಿ
ಸಮಯ ಮುಂದಕ್ಕೆ ತಳ್ಳುತ್ತಾ‌
ಕಾಯಬೇಡಿ ನಾ ಸಾಯುತನಕ

ದೂರು ದುಮ್ಮಾನಗಳಿದ್ದರೆ
ನನ್ನ ಕುರಿತು
ತಪ್ಪು ಒಪ್ಪುಗಳಿದ್ದರೆ
ಇಂದೇ ಹೇಳಿ ಬಿಡಿ
ಸಿಟ್ಟು ಸಿಡುಕು ತೋರುವುದಿದ್ದರೆ
ಕಾಯಬೇಡಿ ನಾ ಸಾಯುತನಕ

ನನ್ನ ಬಗ್ಗೆ ವೈರತ್ವವಿದ್ದರೆ
ಅಸಹನೆಗಳಿದ್ದರೆ
ಹೊಂಚು ಹಾಕಬೇಡಿ ಸೇಡಿಗಾಗಿ..
ನಿಮ್ಮಲ್ಲಿರುವುದನ್ನ..,
ಸ್ನೇಹ ಸೌಜನ್ಯದಿಂದ ಹಂಚಿಕೊಳ್ಳಲು
ಕಾಯಬೇಡಿ ನಾ ಸಾಯುತನಕ

ನಾನು ಮಾಡಿದ ಪಾಪದ ಕಾರ್ಯಗಳಿದ್ದರೆ
ಕನ್ನಡಿಯಾಗಿ ನಿಲ್ಲಿ ನನ್ನ ಮುಂದೆ..
ಗೋರಿಯ ಮೇಲೆ ಹೂಗುಚ್ಛ ಇಡಲು
ಪ್ರಾಯಶ್ಚಿತ್ತಕ್ಕೆ ಕೃಪೆ ತೋರಲು
ಕಾದುಕಾದು ಕಾಡಲು..
ಧಿಃಕಾರ ಕೂಗಲು
ಕಾಯಬೇಡಿ ನಾ ಸಾಯುವತನಕ

ಹೆದರುವುದಿಲ್ಲ ನಾ ಸಾವಿಗೆ!
ನಾ ಸತ್ತರೆ ನಾನೇ ಇರುವುದಿಲ್ಲ
ಸಾವಿನಿಂದ ನನಗೆ ಮೋಸವಿಲ್ಲ
ಬೆಳಗು ಇರದೇ ಇರುಳು ಇಲ್ಲ
ಸೂತಕ ಭಾಷೆ ವ್ಯಕ್ತಪಡಿಸಲು
ಕಾಯಬೇಡಿ ನಾ ಸಾಯುತನಕ

ನಾ ನಂಬಿ ಪ್ರೀತಿಸುತ್ತಿರುವ
ಸಾವು…
ಬೇಗ ಬರಲೆಂದೇ ಕಾಯುತ್ತಿರುವೆ..
ಕಾರಣ
ದೇಹವ ದಾನ ಮಾಡಿರುವೆ
ವೈದ್ಯಕೀಯ ಬಳಕೆಗೆ
ಶಿಕ್ಷಣ ಕಲಿಕೆಗೆ..
ನೆಮ್ಮದಿಯ ನಾ ಸಾವು ಪಡೆಯಲು
ಬದುಕಿಗೆ ಭರವಸೆ ಬರಲು…
ಯಾವುದಕ್ಕೂ
ಕಾಯಬೇಡಿ ನಾ ಸಾಯುತನಕ


ಅನ್ನಪೂರ್ಣ ಪದ್ಮಸಾಲಿ


8 thoughts on “‘ಕಾಯಬೇಡಿ ನಾ ಸಾಯುವತನಕ’

Leave a Reply

Back To Top