ಹರೀಶ ಕೋಳಗುಂದ ಕವಿತೆ-ಕವಿತೆ

ಕಾವ್ಯ ಸಂಗಾತಿ

ಹರೀಶ ಕೋಳಗುಂದ

ಕವಿತೆ

ಇದ್ದಾಗ ಎಲ್ಲವೂ ಸರಿ…
ಇಲ್ಲದಿದ್ದಾಗ…!
ಬದುಕಿನ ಲೆಕ್ಕಾಚಾರ
ಅರ್ಥವೇ ಆಗುವುದಿಲ್ಲ.

ಒಮ್ಮೊಮ್ಮೆ ಈ ಒಳಗು ಖಾಲಿ ಖಾಲಿಯೆನಿಸುತ್ತದೆ.
ನಿನ್ನ ಬರುವಿಕೆಗೆ ಕಾದು ಕುಳಿತ ಪ್ರತೀಬಾರಿಯೂ
ಇಲ್ಲಸಲ್ಲದ ಭ್ರಮೆಗಳು
ಸದ್ದಿಲ್ಲದೇ ಆವರಿಸಿಕೊಳ್ಳುತ್ತವೆ.
ಆಗೆಲ್ಲಾ ಬರೀ ಮೌನದ್ದೇ ಕಾರುಬಾರು.
ಈ ನಿಶ್ಯಬ್ದತೆಯೂ ಒಮ್ಮೊಮ್ಮೆ
ಅತಿರೇಕಕ್ಕೆ ತಲುಪಿ ಕ್ರೂರವೆನಿಸುತ್ತದೆ.

ಎದೆಯ ಬರಡು ನೆಲದ ಮೇಲೆ
ಕಟ್ಟಿಕೊಂಡ ವಸಂತದ ಕನಸುಗಳು
ಬಣ್ಣ ಕಳೆದುಕೊಂಡು
ಕಣ್ಣೆದುರೇ ಕರಗಿಹೋಗುತ್ತಿರುವಾಗ
ಪ್ರತೀ ಬೆಳಗೂ ಭಯಾನಕವೆನಿಸುತ್ತದೆ.

ಸವೆಸಿದ ಅರ್ಧದಾರಿಯ ತುಂಬಾ
ನನ್ನ ನಿನ್ನ ಹೆಜ್ಜೆಗುರುತುಗಳು
ನೂರು ಕಥೆಯ ಹೇಳುತ್ತವೆ.
ಇನ್ನರ್ಧ ದಾರಿ… ಹೀಗೆ,
ನಿನ್ನ ನೆನಪುಗಳ ಹಂಗಿಲ್ಲದೇ
ಕಳೆದುಹೋಗುತ್ತದೋ…?
ಇಲ್ಲ,
ಬಿದ್ದಲ್ಲಿಯೇ ಬೇರೂರಿ
ಹೊಸ ಚಿಗುರುಗಳು ಜೀವ ತಾಳುತ್ತವೆಯೋ…?
ಉತ್ತರ ಪ್ರಶ್ನೆಯಾಗಿಯೇ ಉಳಿದಾಗ;
ಮತ್ತೆ ನಿನ್ನ ಆಗಮನದ ಕಾಯುವಿಕೆ,
ಮತ್ತದೇ ಹೊಸ ನಿರೀಕ್ಷೆ,
ನಿನ್ನ ಆಂತರ್ಯದ ಪ್ರವೇಶಕ್ಕೆ ಅನುಮತಿಯ ಕೋರಿಕೆ…


ಹರೀಶ ಕೋಳಗುಂದ

4 thoughts on “ಹರೀಶ ಕೋಳಗುಂದ ಕವಿತೆ-ಕವಿತೆ

Leave a Reply

Back To Top