ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಅಪರಾಧ

ನಾವಿಬ್ಬರು ಎದುರಾದಾಗಲೆಲ್ಲ
ನನ್ನ ನಿನ್ನ ಕಣ್ಣುಗಳು
ಸದ್ದಿಲ್ಲದೆ ಸಂಧಿಸುವುದು
ನಿನಗೂ ಗೊತ್ತು ನನಗೂ..
ಆದರೂ ನಟಿಸುತ್ತೇವೆ
ನೋಡಿಯೂ ನೋಡದವರಂತೆ
ನೋಟಗಳು ಅಪ್ಪಿತಪ್ಪಿ
ಭೇಟಿಯಾದಂತೆ
ಆಕಸ್ಮಿಕ ಅವಘಡಗಳು ಈಗ ತಾನೆ
ಸಂದುಹೋದಂತೆ..3

ಸಿಕ್ಕಾಗಲೆಲ್ಲ ಮಾತಾಡುತ್ತೇವೆ ಏನೇನೋ
ಅದೂ ಇದೂ ಹತ್ತದ್ದು ಬಗೆ ಹರಿಯದ್ದು
ಎಂದೋ ಜಗತ್ತು ಆಡಿ ಬಿಟ್ಟದ್ದು
ಯಾವುದು ಯಾವುದಕ್ಕೆ ಸಂಬಂಧಿಸಿದ್ದು
ಇಲ್ಲಿ ಯಾರಿಗು ತಿಳಿದಿಲ್ಲ
ಹೇಳಬೇಕಾದ್ದು ಹೇಳದೆ
ಕೇಳಬೇಕಾದ್ದು ಕೇಳದೆ
ಹೊರಟುಬಿಡುತ್ತೇವೆ
ಏನೋ ಮಹಾ ಕೆಲಸ ಇದ್ದವರಂತೆ
ಹಾಗೆ ಹೋಗುವಾಗಲೂ
ತಿರು ತಿರುಗಿ ಬೇಕಂತಲೇ
ಇತ್ತಲೇ ನೋಡುತ್ತ
ಸಣ್ಣಗೆ ಹುಡುಕುತ್ತ ಅಡ್ಡಾಡುತ್ತೇವೆ
ಕಣ್ಣೋಟಗಳು ಅಚಾನಕ್
ಸಂಧಿಸಿದರೆ
ತುಟಿಗಳು ಸಣ್ಣಗೆ ಅರಳಿ
ಮತ್ಯಾವುದೋ ಮಾತು
ಗಾಳಿಯ ಅಲೆಯಲ್ಲಿ
ತೇಲಿ ಎದೆ ತಂಪಾದರೆ
ಬೆವರಿ ಥರಗುಟ್ಟುತ್ತೇವೆ
ಯಾವುದೋ
ಅಪರಾಧ ಮಾಡಿ
ಸಿಕ್ಕಿಕೊಂಡವರ ಹಾಗೆ..

ನವಿರಾದ ಭಾವನೆ
Sooper Kavithe!