ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಸ್ವರ ಕಾಪಿಯಾ ಗಜಲ್
ಕಾವಳಗಳ ಗಡಣದಲಿ ಮಿಂದೆದ್ದ ಇಳೆಯ ಕಳೆಯು ಥೇಟ್ ನಿನ್ನಂತೆಯೇ
ಕೌಮುದಿಯ ಹೊದ್ದ ಮಂದೇಹರನ ಚೆಲುವು ಥೇಟ್ ನಿನ್ನಂತೆಯೇ
ಹಳವಂಡಗೊಂಡ ಮನದ ಮರ್ಜಿಯ ಹದ್ದುಬಸ್ತಿಗೆ ತಂದವನು ನೀನು
ಹೃದಯಕೆ ಕುಸುಮ ಶರವ ಹೂಡುವ ಕಂದರ್ಪನು ಥೇಟ್ ನಿನ್ನಂತೆಯೇ
ಭಾವ ಕ್ಷುಧೆಯಲಿ ಧಣಿದ ವಪುವಿಗೆ ಒಲವ ಪೀಯೂಷ ಉಣಿಸು ಬಾ
ಅರ್ಣವವಾಗಿ ಹರಿವ ಅರ್ತಿಯಲಿ ಅಡಗಿದ ಕಿನಿಸು ಥೇಟ್ ನಿನ್ನಂತೆಯೇ
ಕಂದಿದ ಕಸುವಲಿ ಮಿಸುನಿಯಂತೆ ಓಜಸ್ವಿಯಾಗುವೆಯಾ ಗೆಳೆಯಾ
ತಿತಿಕ್ಷೆಯ ತೊಟ್ಟಿಲಿನಲಿ ಪ್ರಭವಿಸಿದ ಚೆಂಬೆಳಕು ಥೇಟ್ ನಿನ್ನಂತೆಯೇ
ನಿರವಿಸುವ ನಿರ್ಲಿಪ್ತತೆಯನು ನಿತ್ಯ ಆಸ್ವಾದಿಸುವಳು ‘ಅರ್ಚನಾ’
ಹಸನು ಲಾಲಿತ್ಯದಲಿ ಉರವಣಿಸುವ ನೆನಹುಗಳು ಥೇಟ್ ನಿನ್ನಂತೆಯೇ