ಕಾವ್ಯ ಸಂಗಾತಿ
ಸುಮಾ ಕಿರಣ್
ನಿರೀಕ್ಷೆ
ನಿನ್ನ ಆಗಮನಕೆ ಕಾದು ಕುಳಿತಿದೆ ಮನ
ಎಂದು ಬರುವೆಯೋ ನಾನರಿಯೆ
ನಿನ್ನ ನಗುವಿಗೆ ಕಾತರಿಸಿ ಕಾದಿದೆ ಕಂಗಳು
ಎಂದು ನಗುವೆಯೋ ನಾನರಿಯೆ
ಬರಿದಾದ ಗಿಡದಿ ಬಿರಿಯಲು ಕಾದಿದೆ ಸುಮ
ಎಂದು ಅರಳುವುದೋ ನಾನರಿಯೆ
ಕಾರ್ಮುಗಿಲ ಕಂಡು ನಲಿಯಲು ನಿಂತಿದೆ ನವಿಲು
ಎಂದು ಕುಣಿವುದೋ ನಾನರಿಯೆ
ವಸಂತನ ಕಂಡು ಕೂಜನಕೆ ಕಾದಿದೆ ಕೋಗಿಲೆ
ಎಂದು ಕೂಗುವುದೋ ನಾನರಿಯೆ
ಶರಧಿಯ ಕಂಡು ಸೇರಲು ಕಾತರಿಸಿದೆ ನದಿ
ಎಂದು ಸೇರುವುದೋ ನಾನರಿಯೆ
ಬಾನ ಕಂಡು ರೆಕ್ಕೆ ಬಿಚ್ಚಲು ಕಾದಿದೆ ಬಾನಾಡಿ
ಎಂದು ಹಾರುವುದೋ ನಾನರಿಯೆ
ಇರುಳ ಕಂಡು ಹೊಳೆಯಲು ಕಾತರಿಸಿಹ ಶಶಿ
ಎಂದು ಬೆಳಗುವನೋ ನಾನರಿಯೆ
ವ್ಹಾವ್… ಉತ್ತಮ ಹಾಗೂ ಸರಳ ಸಾಲುಗಳಲ್ಲಿ “ನಿರೀಕ್ಷೆ” ಮೂಡಿ ಬಂದಿದೆ, ಸುಮಾ.
ನಿಮ್ಮಿಂದ ಮತ್ತಷ್ಟು ಉತ್ತಮ ಕವನಗಳು ಕನ್ನಡ ಸಾಹಿತ್ಯ ಪ್ರೇಮಿಗಳನ್ನು ತಲುಪಲಿ.
ಮನಸ್ಸಿನ ಆಶಯ ಹೊತ್ತ ಕವನ ಚೆನ್ನಾಗಿ ಮೂಡಿ ಬಂದಿದೆ.. ಅಭಿನಂದನೆಗಳು