ಸ್ನೇಹದ ಸಂಕೋಲೆ ಪುಷ್ಪಕವಿತೆ-ಸಾಗೋಣ ದೂರತೀರ

ಕಾವ್ಯ ಸಂಗಾತಿ

ಸ್ನೇಹದ ಸಂಕೋಲೆ ಪುಷ್ಪ

ಸಾಗೋಣ ದೂರತೀರವ

ಎನ್ನದೆಯ ಅಂಗಳದಲಿ ನಿನ್ನೊಲವ ರಂಗವಲ್ಲಿ.
ಕರಗಿ ನೀರಾಗಿ ಸೋತೆ ನಿನ್ನ ಒಲವಲಿ
ಎನ್ನ ಮನದ ಬಾಂದಳದಿ ನಿನ್ನದೇ ಚಿತ್ತಾರ
ಅರಸುತ ಬಂದಿರುವೆ ನಿನ್ನ ಹೃದಯದ ಹತ್ತಿರ

ಹೋಗದಿರು ಮನಸ್ಸಿಂದ ಹೇಳದೇ ಬಹುದೂರ
ತಾಗದಿರಲಿ ಕಷ್ಟಗಳು ಕನಸಿನಲಿ ಕೂಡ
ಸಾಗುತ ಸೇರೋಣ ನಮ್ಮ ಒಲವ ಮಂದಿರ
ಬೇಗೆಯ ಪಡದಿರು ನನ್ನೊಮ್ಮೆ ಸೇರಿನೋಡು

ನಗುತ ಹಾಕೋಣ ಬಾಳದೋಣಿಗೆ ಹುಟ್ಟು
ಬಿಗುಮಾನ ಬಿಡು ಕಣ್ಣಿಗಂದ ದೂರದಬೆಟ್ಟ
ಅನುಮಾನ ಸಲ್ಲದು ಒಲವು ಇರುವತನಕ
ಅನುರಾಗದ ಸಿಹಿಜೇನು ಇರಲಿ ಕೊನೆತನಕ.

ಬಾನಲಿ ಓಡುತಿವೆ ಮೇಘಗಗಳ ಸರಮಾಲೆ
ನೀನೆಲ್ಲಿ ಹೋದರೂ ಬರುವೆ ನಾನು ಅಲ್ಲೆ
ಮುಡಿಯಲಿ ಮುಡಿಸುವೆನು ಮಂದಾರ
ಹಣೆಯಲಿ ಧರಿಸು ನನ್ನೊಲವ ಸಿಂಧೂರ.


Leave a Reply

Back To Top