ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಓ ಮನಸೇ
ಓ ಮನಸೇ ಓ ಮನಸೇ ಭಾವದಲಿ ಬಂದಿಯಾಗಿ
ಮೈಮರೆತು ನಿಂತೆಯಾ
ಕಣ್ಣಿನಲಿ ಆಸೆಯಾಗಿ ಮಂಕಾಗಿ ಹೋದೆಯಾ//ಪ//
ಓ ಮನಸೇ ಸೊಗಸು ಬಯಸುವೆ ಸಂಗೀತ ಅರಸುವೆ
ರಾಗತಾಳಗಳಲಿ ಒಲವ ಬೆರಸುವೆ ಆಸೆ ಕುಣಿಸುವೆ
ಆಕಾಂಕ್ಷೆ ನಲಿಸುವೆ ನಲಿವಿನೊಂದಿಗೆ ಹಾರಾಡುತ್ತಿರುವೆಯಾ
ಅಂತರಂಗ ಅರಳಿಸುವೆ ಆಸೆ ಕಣ್ತುಂಬಿಸಿ ನಲಿಸುವೆ//
ಓ ಮನಸೇ ಸಲುಗೆ ಸರಸ ಬಯಸಿ ಮೂಕವಾದೆಯಾ
ಪ್ರೀತಿಧಾರೆಯಲಿ ಹರಿದು ಕಣ್ಣೀರ ಝರಿ-ತೊರೆಯಾದೆಯಾ ಮಧುರ ಮಧುರ ಗಳಿಗೆ ನೆನೆದು ಕಳೆದುಹೋದೆಯಾ
ಸವಿ ಸವಿ ಪ್ರೀತಿಯ ನೆನೆದು ಸೊರಗಿ ಹೋದೆಯಾ//
ಓ ಮನಸೇ ಮರುಳ ಮಾಡಿ ಮುತ್ತನಿಟ್ಟ ಭೃಂಗ ನೆನೆವೆಯಾ
ಮತ್ತೆ ಮತ್ತೆ ಮುತ್ತು ಬಯಸಿ ಹುಚ್ಚನಾದೆಯಾ
ಓ ಮನವೇ ತಿಳಿದು ತಿಳಿದು ಪ್ರೇಮದಲ್ಲಿ ಕಳೆದುಹೋದೆಯಾ
ಹೃದಯದಲಿ ಅರಳಿದೂವ ಕಾಪಾಡಲಾರೆಯಾ//
ಓ ಮನಸೇ ಓ ಮನಸೇ ಕರುಳ ತುಂಬಿ ಪ್ರೀತಿ ಹರಸಿ
ನುಡಿಸುತಿರುವೆಯಾ ಹಳೆಯ ನೆನಪಿಗೆ ನೀರೆರೆದು ಪ್ರೀತಿ ಹಸಿರಾಗಿಸಿ ಚಿಗುರಿಸಿಬಿಟ್ಟಿಯಾ ಒಡಲ ತುಂಬಿ ನಿಂತ ಪ್ರೀತಿ
ಕಡಲಾಳದಂತೆ ಒಲವ ತೆರೆಯಾಗಿ ಚಿಮ್ಮಿಸುತಿರುವೆಯಾ //
ಎದೆಯ ಬಿರಿದು ಬಂಧ ಬೆಸೆದು ಸೆಳೆದು ಬಿಟ್ಟೆಯಾ
ಕುರುಡ ಪ್ರೀತಿ ಸತ್ಯವೆಂದು ನಂಬಿಬಿಟ್ಟೆಯಾ
ನಲಿವ ಬಯಸಿ ನೋವ ಉಂಡು ಅಳುತಲಿರುವೆಯಾ
ಪ್ರೀತಿ ಬಯಸಿ ವಿರಹದುರಿಯಲಿ ಬೇಯುತಿರುವೆಯಾ//
ಡಾ ಅನ್ನಪೂರ್ಣ ಹಿರೇಮಠ