ನೀನೆಂದರೆ
ಮೋಹನ್ ಗೌಡ ಹೆಗ್ರೆ
ನೀನೆಂದರೆ ಬರಿ ಬೆಳಕಲ್ಲ
ಕುರುಡು ಕತ್ತಲೆಯ ಒಳಗೆ
ಮುಳ್ಳು ಚುಚ್ಚಿದ ಕಾಲಿನ
ನೋವ ಗುರುತಿಸುವ ಮಹಾಮಾತೆ
ಜಗದ ತದ್ವಿರುದ್ಧಗಳ
ಸಮದೂಗಿಸಿ, ಅಳುವ ಕಣ್ಣೀರಿಗೆ
ಬಾಡಿ ಹೋದ ಮೊಲೆಯ ತೊಟ್ಟಿಂದ
ಅಮೃತವ ಉಣಬಡಿಸುವ ಕರುಣಾಳು….
ನೀನೆಂದರೆ ಬರಿ ಕಷ್ಟಜೀವಿಯಲ್ಲ
ಕಷ್ಟಗಳನೆ ಅಂಜಿಸುವ ಮಹಾತಾಯಿ
ಬರೆಯದೇ ಇರುವ ಖಾಲಿ ಪುಸ್ತಕದೊಳಗೆ
ನಾನೊಬ್ಬನೇ ಓದಬಹುದಾದ ಕೋಟಿ ಕಥೆ
ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ
ದಿಗ್ಬಂಧನದ ಮಹಾ ಮಂಟಪ
ಸಹಸ್ರ ಸಂಕಷ್ಟಗಳ ಹಡೆದ ನಿನ್ನ
ಪಾದದಲ್ಲೆ ನನಗೆಲ್ಲಾ ಪುಣ್ಯಸ್ಥಳ…..
ನೀನೆಂದರೆ ಬರಿಯ ಒಂದು ಜೀವವಲ್ಲ
ದೂರದೂರದೂರಿನಲಿ ನಾನು ನೀನು ದುಡಿಯುತ್ತಿದ್ದರೂ
ಪಂಚಭೂತಗಳಲ್ಲಿ ಸದಾ ನಿನ್ನಿರುವ ತೋರಿಸುವ ಜಗದ್ರೂಪಿ
ಜಗತ್ತಿನ ಹೊಸೆತೆಲ್ಲವ ಹಳೆತು ಮಾಡುವ
ಕಳೆದುಹೋದ ಹಳೆಯದಕ್ಕೆ ಮರು ಜೀವ ತುಂಬಿಸುವ
ಎದೆಯೊಳಗೆ ಹದವಾದ ಸಿಹಿ ಒಲವ ಬಲವ ಉಣಿಸುವ
ದಿವ್ಯ ಕಂಗಳ ಕಷ್ಟ, ಕಣ್ಣೀರುಗಳನೇ ಅಂಜಿಸುವ ಮಗನ
ಜಗದ ” ತಾಯಿ”
*********