ಅಮ್ಮನಿಗೊಂದು ನಮಸ್ಕಾರ
ನಾಗರತ್ನ ಎಂ ಜಿ
ಹುಟ್ಟಿ ಬಾ ಮಗಳಾಗಿ
ಬಚ್ಚಿಟ್ಟ ಬಸಿರಲ್ಲಿ
ಉಸಿರಾದೆ ಒಡಲಲ್ಲಿ
ಜೀವ ನೀಡಲು
ಜೀವವನ್ನೇ ಪಣಕ್ಕಿಟ್ಟೆ
ಕುಡಿಸಿದೆ ನೆತ್ತರನ್ನು
ಹಾಲಾಗಿಸಿ
ಉಣಿಸಿದೆ ಮಮತೆಯನ್ನು
ತುತ್ತಾಗಿಸಿ
ತೂಗಿದೆ ತೊಡೆಯನ್ನು
ತೊಟ್ಟಿಲಾಗಿಸಿ
ಹೊದಿಸಿದೆ ಸೆರಗನ್ನು
ಕವಚವಾಗಿಸಿ
ನಿದ್ದೆಗೆಟ್ಟೆ ಇರುಳಲ್ಲಿ
ಮಾಸದ ನಗು
ದಿನವೆಲ್ಲ ಮುಖದಲ್ಲಿ
ಎಡವಲು ಕೈ ಹಿಡಿದೆ
ಎದೆಎತ್ತರ ಬೆಳೆಸಿದೆ
ಒಂದಲ್ಲ ಎರಡಲ್ಲ
ಪ್ರೀತಿಯ ಮುಖ
ಎಣಿಸಲೆಂತು…?
ಋಣವ ನಾನು
ತೀರಿಸಲೆಂತು…?
ನಿನ್ನೆಲ್ಲಾ ನೋವುಗಳ
ಭರಿಸುವಾಸೆ ನೀನಾಗಿ
ನಲಿವಿಗೆ ನಗುವಾಸೆ
ತಾಯಾಗಿ
ಬರುವೆಯಾ ಹುಟ್ಟಿ ನೀ
ಮಗಳಾಗಿ
ಕಾಯುತಿರುವೆ ನಾ ನಿನಗಾಗಿ
ನಾಗರತ್ನ ಎಂ ಜಿ