ಅಮ್ಮನಿಗೊಂದು ನಮಸ್ಕಾರ

ಅಮ್ಮನಿಗೊಂದು ನಮಸ್ಕಾರ

ಅಮ್ಮ ದೇವರಿಗಿಂತ..?

ಎ.ಎನ್.ರಮೇಶ್. ಗುಬ್ಬಿ

ನವಮಾಸ ಒಡಲೊಳಗೆ ಹೊತ್ತವಳು
ನನ್ನ ಹುಟ್ಟಿಗಾಗಿ ಹಂಬಲಿಸಿ ತಪಿಸಿ
ನನಗಾಗಿ ಜೀವವನೇ ಪಣವಾಗಿಟ್ಟು
ಸಹಸ್ರ ನೋವ ಸಹಿಸಿ ಹೆತ್ತವಳು.
ನನಗಾಗಿ ಸತ್ತು ಸತ್ತು ಹುಟ್ಟಿದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ಹೊತ್ತೊತ್ತಿಗೆ ತುತ್ತಿಟ್ಟು ಸಲಹಿದವಳು
ನನ್ನಯ ತೇಗು ತೃಪ್ತಿಯಲಿ ತನ್ನೆಲ್ಲಾ
ಹಸಿವು ಸಂಕಟ ಮರೆತು ನಕ್ಕವಳು
ಒಮ್ಮೊಮ್ಮೆ ದೇವರನೇ ಉಪವಾಸವಿಟ್ಟು
ನನ್ನುದರ ನರಳದಂತೆ ತಣಿಸಿದವಳು.!
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ನನಗೆ ಬಟ್ಟೆಯುಡಿಸಿ ಸಂಭ್ರಮಿಸಿದವಳು
ಬಣ್ಣ ಬಣ್ಣದ ವಸ್ತ್ರ ತೊಡಿಸಿದವಳು
ಬಗೆ ಬಗೆಯಾಗಿ ನನ್ನ ಸಿಂಗರಿಸಿದವಳು
ಕೃಷ್ಣನಾ ವೇಷ ಭೂಷಣಗಳ ಹಾಕಿ
ನನ್ನನ್ನೇ ದೇವರಾಗಿಸಿ ಬೀಗಿದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ಮಳೆಗೆ ಸೆರಗು ಹೊದೆಸಿ ರಕ್ಷಿಸಿದವಳು
ಚಳಿಗೆ ಮಡಿಲೊಳಗಿಟ್ಟು ಪೊರೆದವಳು
ಗಾಳಿಗೆ ಎದೆಗವುಚಿಕೊಂಡು ನಿಂತವಳು
ಬೆಂಕಿ ಸೋಕದಂತೆ ನೋಡಿಕೊಂಡವಳು
ಕತ್ತಲಲಿ ಬೆಚ್ಚದಂತೆ ಇರುಳೆಲ್ಲ ಕಾದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ಕೇಳುವುದಾದರೂ ಯಾರನ್ನು ಹೇಳಿ.?
ಅವಳನ್ನೇ ಕೇಳಿದರೆ “ಮುದ್ದು ಗೋಪಾಲ”
ಎಂದು ಬೊಚ್ಚು ಬಾಯಗಲಿಸಿ ನಗುತ್ತಾಳೆ
ಯಶೋಧೆ-ಕೃಷ್ಣರ ಚಿತ್ರ ತೋರಿಸುತ್ತಾಳೆ
ನಡುಗುವ ಕರಗಳಿಂದ ಶಿರ ನೇವರಿಸುತ್ತಾಳೆ
ನರನರದಲ್ಲು ಸಹಸ್ರ ವರ ಸ್ಫುರಿಸುತ್ತಾಳೆ.!


ಎ.ಎನ್.ರಮೇಶ್. ಗುಬ್ಬಿ.

Leave a Reply

Back To Top