ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ತರಹಿ ಗಝಲ್
ಕಾದು ಕುಳಿತವಳ ಭರವಸೆ
ಉಳಿಸಲಾದರೂ ಬಾ ಪ್ರಿಯಾ
ರೋಧಿಸುತಿರುವ ನೋವ
ರಮಿಸಲಾದರೂ ಬಾ ಪ್ರಿಯಾ
ನಿನ್ನೆನಪುಗಳಿಗೆ ಮರೆಗುಳಿತನದ
ಚಟವೇ ಇಲ್ಲ ಗೆಳೆಯ
ಕಂಬನಿ ಹಾಸಿ ಕಾದಿರುವೆ
ಕಣ್ಣೊರೆಸಲಾದರೂ ಬಾ ಪ್ರಿಯಾ
ಬಿಗುಮಾನದ ಮಾತೇ ಇಲ್ಲ
ನಮ್ಮಿಬ್ಬರ ಅನುರಾಗಕೆ
ಮೌನ ಬಿಕ್ಕುತಿಹುದು ಭೋರ್ಗರೆದು
ಮಾತಾಡಿಸಲಾದರೂ ಬಾ ಪ್ರಿಯಾ
ನಿದಿರೆಯಿರದ ಇರುಳ ತಳಮಳ
ಏನೆಂದು ಹೇಳಲಿ
ಮುದ್ದಿಸಲು ಮುದುಡಿದ ಮನ
ಕನವರಿಕೆಯಲಾದರೂ ಬಾ ಪ್ರಿಯಾ
ಎದೆಯ ಗೋಡೆಯ ತುಂಬಾ ನಿನ್ಹೆಸರನೇ
ಗೀಚಿರುವಳು ವಾಣಿ,
ರಕ್ತಸಿಕ್ತ ನನ್ನೊಲವನು ಒಮ್ಮೆ
ನೋಡಲಾದರೂ ಬಾ ಪ್ರಿಯಾವಾಣಿ
ವಾಣಿ ಯಡಹಳ್ಳಿಮಠ