ಪುಸ್ತಕ ಸಂಗಾತಿ
ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪುಸ್ತಕ ಪ್ರಶಸ್ತಿ – ೨೦೨೧ ಪಡೆದ ಪುಸ್ತಕಗಳು
ಹುಬ್ಬಳ್ಳಿ: ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ 2021 ಮತ್ತು 2022 ನೇ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
ಅದರಂತೆ 2021 ನೇ ಪುಸ್ತಕ ಪ್ರಶಸ್ತಿಯನ್ನು ಮಡಿಕೇರಿ ಕಾಂತಬೈಲುವಿನ ಕನ್ನಡದ ಹಿರಿಯ ಲೇಖಕಿ ಶ್ರೀಮತಿ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನಕ್ಕೆ ಮತ್ತು 2022 ನೇ ಸಾಲಿನ ಪ್ರಶಸ್ತಿಯನ್ನು ಬೆಳಗಾವಿಯ ಹಿರಿಯ ಲೇಖಕ, ಅಂಕಣಕಾರ ಶ್ರೀ ಶಿರೀಷ ಜೋಶಿ ಅವರ ‘ಗುಜರಿ ತೋಡಿ’ ಕಾದಂಬರಿಗೂ ಘೋಷಿಸಲಾಗಿದೆ.
ಈ ಪ್ರಶಸ್ತಿಗಳು ತಲಾ ಮೂರು ಸಾವಿರ ರೂ ನಗದು, ಪ್ರಶಸ್ತಿ ಪತ್ರಗಳೊಂದಿಗೆ ಗೌರವಾರ್ಪಣೆಯನ್ನು ಒಳಗೊಂಡಿರುತ್ತವೆ. ಮೇ 21 ರಂದು ಮುಂಜಾನೆ 11 ಕ್ಕೆ ಬೆಳಗಾವಿಯ ಸರಕಾರಿ ನೌಕರರ ಭವನದಲ್ಲಿ ನಡೆಯುವ ಭಾವ ಸಂಗಮ ಒಂಭತ್ತನೆಯ ವಾರ್ಷಿಕ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದೇ ಸಮಯದಲ್ಲಿ 2021 ರ ಸಾಲಿಗಾಗಿ ಸಿದ್ಧರಾಮ ಹೊನ್ಕಲ್ ರ ‘ಆತ್ಮಸಖಿಯ ಧ್ಯಾನದಲಿ’ ಗಜಲ್ ಸಂಕಲನಕ್ಕೆ; ಜಯಶ್ರೀ ದೇಶಪಾಂಡೆ ಅವರ ‘ಹಲವು ನಾಡು ಹೆಜ್ಜೆ ಹಾಡು’ ಪ್ರವಾಸ ಕಥನಕ್ಕೆ; ನಾಗ ಎಚ್ ಹುಬ್ಳಿಯವರ ‘ಅಸುರ ಆದಿವಾಸಿ ಸಮುದಾಯ’ ಕುರಿತಾದ ಸಂಶೋಧನಾ ಗ್ರಂಥಕ್ಕೆ; ಅನಸೂಯ ಜಹಗೀರದಾರ ಅವರ ‘ ಆತ್ಮಾನುಸಂಧಾನ’ ಗಜಲ್ ಸಂಕಲನಕ್ಕೆ ಮತ್ತು ಸೋಮಲಿಂಗ ಬೇಡರ ಆಳೂರ ಅವರ ‘ ಪುಟ್ಟ ಹೆಜ್ಜೆ ಕುಣಿಸಿ ಗೆಜ್ಜೆ’ ಮಕ್ಕಳ ಕವನ ಸಂಕಲನಕ್ಕೆ ಪ್ರೋತ್ಸಾಹಕ ಪ್ರಶಸ್ತಿ ( ನಗದು ರಹಿತ) ಪ್ರಕಟಿಸಲಾಗಿದೆ.
ಅದರಂತೆ 2022 ನೇ ಸಾಲಿಗಾಗಿ ಡಾ.ಭದ್ರಾವತಿ ರಾಮಾಚಾರಿ ಅವರ ‘ ಹಳ್ಳಿ ಹೈದ’ ವ್ಯಕ್ತಿ ಚಿತ್ರಕ್ಕಾಗಿ; ಡಾ.ಅನ್ನಪೂರ್ಣ ಹಿರೇಮಠ ಅವರ ‘ ಚಿಂತನ ಚಿಲುಮೆ’ ವಚನ ಗ್ರಂಥಕ್ಕಾಗಿ; ಎ.ಎನ್.ರಮೇಶ ಗುಬ್ಬಿ ಅವರ ‘ಬುದ್ಧ ನಗುತ್ತಿದ್ದಾನೆ’ ಕವನ ಸಂಕಲನಕ್ಕಾಗಿ; ಶ್ರೀಮತಿ ರಾಧಾ ಶಾಮರಾವ್ ಅವರ ‘ ಚಿಲಿಪಿಲಿ’ ಕವನ ಸಂಕಲನಕ್ಕಾಗಿ; ಎ.ಎಸ್.ಮಕಾನದಾರ ಅವರ ‘ ಉಸಿರ ಗಂಧ ಸೋಕಿ’ ಹಾಯ್ಕುಗಳ ಸಂಕಲನಕ್ಕಾಗಿ ಪ್ರೋತ್ಸಾಹಕ ಪ್ರಶಸ್ತಿ ( ನಗದು ರಹಿತ) ಪ್ರಕಟಿಸಲಾಗಿದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಹೊಂದಿರುತ್ತವೆ.
ಉಮಾಶಂಕರ ಪ್ರತಿಷ್ಠಾನದ ಸಲಹೆಗಾರರು ಮತ್ತು ನಿವೃತ್ತ ಅಧ್ಯಾಪಕ ಶ್ರೀ ಪಿ. ಶಂಕರರಾವ್ ಮತ್ತು ಹಿರಿಯ ಲೇಖಕಿ, ಅನುವಾದಕಿ , ಸ್ವಾತಂತ್ರ್ಯ ಯೋಧ, ದಿ.ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿ ಶ್ರೀಮತಿ ರಾಧಾ ಟೇಕಲ್ ಅವರು ತೀರ್ಪು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಹಕರಿಸಿದ್ದಾರೆ ಎಂದು ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ. ಪುಸ್ತಕ ಕಳಿಸಿದ ಲೇಖಕ, ಲೇಖಕಿಯರಿಗೆ, ತೀರ್ಪುಗಾರರಿಗೆ ಪ್ರತಿಷ್ಠಾನದ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಬೆಳಗಾವಿಯ ಸರಕಾರಿ ನೌಕರರ ಭವನದಲ್ಲಿ ಮೇ 21 ರಂದು ಮುಂಜಾನೆ 10.30 ರಿಂದ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಗಳು, ಆಹ್ವಾನಿತರು, ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ದ ನೋಂದಾಯಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರಾಜೇಂದ್ರ ಪಾಟೀಲ ಹೇಳಿದ್ದಾರೆ.
ವರದಿ
ಅನುಸೂಯ ಜಹಗೀರದಾರ