ಇಂದಿರಾ ಮೋಟೆಬೆನ್ನೂರ ಕವಿತೆ-ಅದೇಕೋ ಗೊತ್ತಿಲ್ಲ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಅದೇಕೋ ಗೊತ್ತಿಲ್ಲ

ಏಕೆ ಮೌನದ ಮೊರೆ ಹೊಕ್ಕಿರುವೆ ಒಮ್ಮಿಂದೊಮ್ಮೆಲೇ
ಬಾಗಿಲನ್ನು ಬಾರಿ ಬಾರಿ ತಟ್ಟಿದರೂ
ನಿರುತ್ತರವೇ…..
ಕಿವಿ ಮುಚ್ಚಿ ..ತುಟಿ ಕಚ್ಚಿ.. ಕಣ್ಣು ಮುಚ್ಚಿ
ಧ್ಯಾನಸ್ಥನಾಗಿರುವೆ….
ಎದೆಯ ಕೂಗು ಎದೆಯ
ತಟ್ಟಿದರೂ ….
ಅದೇಕೋ ಗೊತ್ತಿಲ್ಲ …..

ಮನದಲ್ಲೇ ಇರುವವರ ಹೇಗೆ
ಹೊರ ಕಳಿಸಬಲ್ಲೆ..?
ಕಡಲ ಸೇರುವ ಎಲ್ಲ ದಾರಿಗಳು
ಒಂದೊಂದಾಗಿ ಮುಚ್ಚಿದರೂ..
ಸಂದಿ ಗೊಂದಿಗಳಲ್ಲಿ ಸಾಗಿ
ನುಸುಳುತ್ತ..ತೆವಳುತ್ತ.. ಏಳುತ್ತ
ಬೀಳುತ್ತ ಸಾಗಿ ಬರುತಿದೆ ಪುಟ್ಟ ತೊರೆ….
ಸ್ವಲ್ಪ ನಿಧಾನವಾಗಿ ನಿಜ…ಆದರೂ
ಬಂದು ಸೇರುವ ಭಾವ ಭರವಸೆಯೊಂದಿಗೆ…
ಅದೇಕೋ ಗೊತ್ತಿಲ್ಲ …..

ಮುಳ್ಳುಗಳೆದೆಯಲ್ಲಿ ಹೂವನರಸುವ…
ಕಲ್ಲಿನೆದೆಯಲಿ ಹೃದಯವರಸುವ.. ಮರುಳಿಗೆ ಏನೆನ್ನಲಿ..?
ದೂರ ತಳ್ಳಿದರೂ…
ನಿತ್ಯ ನಡೆವ ದಾರಿಯ
ಹೂ ಗಂಧವಾಗಿ ತೇಲಿ ಬರುತಿಹೆ…
ಮಾಮರ ಮರೆಯ ಕೋಗಿಲೆಯ
ಕುಹು ಕುಹು ಬಂಧವಾಗಿ ಕೇಳಿಬರುತಿಹೆ…
ಅದೇಕೋ ಗೊತ್ತಿಲ್ಲ..

ತೋಟದ ಹೂವಾಗಿ ಅರಳಿ..,
ತಾರಸಿಯ ಬೆಳದಿಂಗಳಾಗಿ..
ಸುತ್ತಿ ಸುಳಿವ ತಂಗಾಳಿಯಲೂ ಇರುವೆ…
ಸಂಜೆ ಬಿರಿದ ಮೊಲ್ಲೆ ಮೊಗ್ಗ ಮೊಗದಲೂ
ಗುಳಿ ಕೆನ್ನೆಯ ನಗುವೇ ಇರುವಾಗ …
ಹೇಗೆ ತೊರೆಯುವೆ…..
ಹೇಗೆ ಮರೆಯುವೆ……
ಸುತ್ತ ಮುತ್ತಲೆಲ್ಲ ಇರುವೆ…
ಅದೇಕೋ ಗೊತ್ತಿಲ್ಲ …

ಪ್ರಖರ ಕಾಂತಿಯ ಮುಗಿಲ ಸೂರ್ಯ ರೂಪ…
ನೆಲದ ಮೇಲಿನ ಮಣ್ಣ ಕಿರು ಹಣತೆ ದೀಪ….
ಕಣ್ಣು ಕೋರೈಸುವ ಮಿಂಚು ಬೆಳಕು..
ಕತ್ತಲಲ್ಲಿ ಮಿನುಗುವ ಮಿಂಚುಳ್ಳಿ ಮಿಣುಕು…
ನೆಲ ಮುಗಿಲ ಭಾವ ಧಾರೆಗೆ.. ಜೀವ ರಾಗಕೆ
ಕೊಂಚ ಬಾಗಬೇಕು…ಕಾಯಬೇಕು…
ಮಾಗಬೇಕು….ತೂಗಬೇಕು..

ಭಾವ ಬೆಳೆ ಬೆಳೆಯಲು…
ಸ್ನೇಹ ಚಿಗುರು ಕಳೆ ತಳೆಯಲು…
ನಿಜ…ಆದರೂ ಬಹಳ ತಡ ಮಾಡಬೇಡ
ನಾಳೆಯ ಸೂರ್ಯೋದಯವ
ಕಂಡವರಾರು.?…. …..


ಇಂದಿರಾ ಮೋಟೆಬೆನ್ನೂರ.

ಕವಿ ಪರಿಚಯ:

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.
ಭಾವ ಬೆಳಗು — ಕವನ ಸಂಕಲನ
ಸಮಾಗಮ– ಸಂಪಾದನಾ ಗ್ರಂಥ
ಲೇಖಕಿ,.ಕವಯಿತ್ರಿ..

Leave a Reply

Back To Top