ಈ ದಾರಿಗಳಿಗೆ ಎಷ್ಟೊಂದು ಮುಖ
ಸತ್ಯಮಂಗಲ ಮಹಾದೇವ

ಬದುಕು ಒಂದು ಜೀವನ ನೂರು
ಮೊಗ ಒಂದು ಮುಖವಾಡ ಹಲವು
ಪದ್ಯ ಒಂದೇ ಅನೇಕ ಪದಗಳು
ಜೀವ ಒಂದೇ ಜೀವಿಸುವ ದಾರಿ ನೂರು
ಆಯ್ಕೆಗೊಂದು ಮುಖ
ನಡೆಗೊಂದು ಮುಖ
ನೋಟದ ದಾರಿಗೂ ಒಂದು ಮುಖ
ಮುಖವಾಡದೊಳಗೆ ಉಸಿರುಕಟ್ಟುವಾಗ
ಝಳ ಝಳನೆ ಉದುರುವ ನೀರು ಉಪ್ಪು
ನದಿಯ ನೋಡಿ ಖುಷಿ ಇಟ್ಟೆ ಕಾಲು
ಒಳಸೆಳೆತದ ದಾವಂತ
ಬೊಗಸಯಲ್ಲೆ ಹಿಡಿದು ಕುಡಿದೆ
ಜೀವ ಉಳಿಸಿಕೊಂಡೆ
ಈಗ ಜೀವ ಆ ನೀರಿನ ಹೆಸರಲ್ಲಿದೆ
ನದಿಗೂ ಮುಖವಾಡವಿತ್ತು
ನನ್ನ ಉಸಿರಿಗೂ ಅದರ ಸೋಂಕಿದೆ
ಕರೋನ ಬಂದಿದ್ದರೆ ಪರವಾಗಿಲ್ಲ
ಅದು ನೆಗಡಿ ಮೂಗು ಇರುವವರೆಗೆ ತಪ್ಪದ ನೇಹ
ಹೊರಗಡೆ ಹೆಜ್ಜೆ ತಗೆದರೆ
ನನ್ನ ಹೆಜ್ಜೆ ಈ ನೀರ ಗುರುತು
ನೆಲಕ್ಕೊಂದು ನನ್ನ ಹೆಜ್ಜೆಯ ಮುಖವಾಡ
ಬಿಸಿಲಿಗೆ ಆವಿಯಾದ ಮುಖ
ಕಾಲಲ್ಲೇ ಉಳಿದ ಇನ್ನೊಂದು ಮುಖ
ನಡಿಗೆಯೊಳಗೊಂದು ನುಡಿಯೊಳಗೊಂದು
ಪಾದರಕ್ಷೆಯೊಳಗೊಂದು
ತನ್ನ ತುಂಬಿಕೊಂಡ ಕಾಲುಚೀಲದೊಳಗೆ
ಈ ಎಲ್ಲಾ ವರ್ತಮಾನಗಳ ಕಂಡು
ಬೆವೆತು ಬೆಂಡಾಗಿ ಮತ್ತೆ ಚಿಗುರುವ ಆಸೆ
ಈ ಆಸೆಗೊಂದು ಮುಚ್ಚಿದ ಮುಖ
ಇತ್ತೀಚೆಗೆ ಈ ಹೃದಯವೂ
ಹೇಳಿದ ಮಾತು ಕೇಳುವುದಿಲ್ಲ
ಜೀವಕ್ಕೆ ನದಿಯ ಸೆಳವು
ನದಿಗೆ ಮುಖವಾಡಗಳ ಸೆಳವು
ಮುಖವಾಡಗಳ ಹೊರುವ ಊರದಾರಿಯ ತುಂಬಾ
ಈಗ ಮುಖ ಪುಸ್ತಕಗಳ ಮಾಡಿದ್ದಾರೆ
ಮುಖಪುಸ್ತಕಗಳ ಜಾತ್ರೆ.
ಅವರದೇ ಮುಖ ಅವರೊಳಗೊಂದು ಮೊಗ
ಮಾನಕ್ಕೊಂದು, ಸತ್ಯಕ್ಕೊಂದು ಸುಳ್ಳಿಗೊಂದು
ಮಾನವತೆಗೂ ಒಂದು ರಾಕ್ಷಸತ್ವಕ್ಕೂ ಒಂದು
ರೋಗಕ್ಕೂ ಒಂದು ಆರೋಗ್ಯಕ್ಕೂ ಒಂದು
ನದಿಗೆ ಹಲವು ದಾರಿ
ನದಿಗೆ ಹೊರಟವನಿಗೂ ಹಲವು ದಾರಿ
ಹರಿಯುವ ನದಿಗೆ ಮೈಯೆಲ್ಲಾ ದಾರಿ
ಈ ದಾರಿಯು ಹರಿಯುವಾಗ ಮುಖವೇ ಒಂದು ದಾರಿ
ಮುಖವಾಡಗಳಿಗಂತೂ ಭಿನ್ನ ದಾರಿ.
********