ಕಾವ್ಯ ಸಂಗಾತಿ
ಮರೆಯಾದ ನಗು
ರೇಖಾ ಸುದೇಶ್ ರಾವ್
ಚೆಲುವೆಯ ಮೊಗದಲ್ಲಿ ಮರೆಯಾದ ನಗು
ಆಲಿಸುವವರಾರು ಹೆಣ್ಣಿನ ಮನದ ಕೂಗು
ಹಿರಿಯರ ನುಡಿಗೆ ಒಲ್ಲೆ ಎನದೆ ಶಿರ ಬಾಗು
ಹಸಿತ ವಿಹಸಿತ ಅಪಹಸಿತದೊಳಗಾಗು ಮಗು
ನಗುವಿನಲ್ಲೂ ಇರಲಿ ನಯ ವಿನಯ
ವ್ಯಾಮೋಹದ ನಗುವಿನಲಿ ಪ್ರಣಯ
ಅಪಹಾಸ್ಯದ ನಗುವಿಗೆ ಬರಲು ಪ್ರಳಯ
ಕಟ್ಟೋಣ ಒಳಿತಿಗಾಗಿ ನಗುವಿನಾಲಯ
ಸದಾ ನಗುತಿರಲು ಪ್ರೇರೇಪಿಸಿದ ಮನಸು
ನಗಬೇಕಾದರೆ ಈಡೇರಲಿ ಚಿತ್ತದ ಕನಸು
ಎಲ್ಲೆಡೆ ಹೂವಂತ ನಗುವಿನಲೆಯ ಬೀಸು
ನಗುವಿನ ಅಳಿವಿಗೆ ತಾಂಡವಾಡಿದ ಕಾಸು
ಹೇ ಮನುಜ ನಿಂದನೆಯ ನಗು ಬೇಕೆ
ಕುಹಕದ ನಗು ನಿನ್ನ ಮುಖದಲ್ಲಿ ಏಕೆ
ಅನ್ಯರ ಶುದ್ಧ ನಗು ಕಿತ್ತೆಸೆಯುವೆ ಯಾಕೆ
ಮಾನವೀಯತೆಯಿಲ್ಲದ ನಗುವ ಬಾಳ್ಯಾಕೆ
ಕವಿ ಪರಿಚಯ:
ಕ್ಷಾತ್ರ ತಾರೆ ಶ್ರೀಮತಿ ರೇಖಾ ಸುದೇಶ್ ರಾವ್ ಇವರು ಪ್ರಸ್ತುತ ಮಂಗಳೂರಿನ ಮಂಗಳಾದೇವಿಯಲ್ಲಿ ನೆಲೆಸಿರುವರು. ಇವರು ರಾಮ ಕ್ಷತ್ರಿಯ ಸೇವಾ ಸಂಘ ಮೂಲ್ಕಿ ಸುರತ್ಕಲ್ (ರಿ) ಇದರ ಅಧ್ಯಕ್ಷರು ಹಾಗೂ ಸಿದ್ದೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷರು,ರಾಮ ಕ್ಷತ್ರಿಯ ಸಾಹಿತ್ಯ ವೇದಿಕೆ ಸಂ ಸ್ಥಾಪಕರು ಹಾಗೂ ಸಂಚಾಲಕಿ ಅಂತೆಯೆ ಮಕ್ಕಳ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಮಂಗಳೂರು ತಾಲೂಕು ಮಟ್ಟದ ಕಾರ್ಯದರ್ಶಿ, ಹಾಗೆ ಭಜನಾ ಸಂಘದ ಗೌರವಾಧ್ಟಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿ.ಅಂತೆಯೆ ಇನ್ನಿತರ ಸಾಹಿತ್ಯ ವೇದಿಕೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಚುಟುಕು,ಕವನ,ಕಥೆ, ಗಝಲ್,ನ್ಯಾನೋ, ರುಬಾಯಿ, ಹನಿಗವನ,ಲೇಖನ,……….ಇತ್ಯಾದಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಅನೇಕ ಪುಸ್ತಕ, ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟವಾಗಿದೆ. ಅನೇಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ತಮ್ಮ ಸ್ವರಚಿತ ಕವನ,ಕಥೆ ವಾಚನ ಗೈದಿರುವರು ,ಅಂತೆಯೆ ಪ್ರಶಂಸೆಗೂ ಭಾಜನರಾಗಿದ್ದಾರೆ. ಬಹು ಮುಖ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.