ಕಾವ್ಯ ಸಂಗಾತಿ
ಮಮತಾ ರವೀಶ್ ಪಡ್ಡoಬೈಲ್
ಹಣತೆಗೊಂದು ಶರಣು
ಹಚ್ಚುತ್ತೇನೆ ಹಣತೆ ಬೆಳಗು ನೀನು
ಆಗಸಕೆ ಮುಖ ಮಾಡಿ ತನ್ನೊಳಗೆ ತಾನುರಿದು
ಗಾಳಿಯೊಂದಿಗೆ ಲೀನವಾಗಿ
ಜಗಕ್ಕೆಲ್ಲ ಬೆಳಕಾಗಿರಲೆಂದು
ಬೀಸೋ ಗಾಳಿಗೆ ತಲೆದೂಗಿ
ತಾನುರಿದ ಜಗವನ್ನು ಕತ್ತಲೆ ಮಾಡಿ
ಪರರಿಗೆ ಬೆಳಕೋ ನೀಡೋ ಪರಿ
ನಿನಗೆ ನೀನೇ ಸಾಟಿ..
ಜಗಬೆಳಗೋ ನಿನಗೆ ಹಮ್ಮು ಬಿಮ್ಮು ಗಳಿಲ್ಲ
ನಿನ್ನನ್ನು ಬೆಳಗಿಸಲು ಕಾರಣಳಾದ
ನನಗೆ ಜಗವೇ ನನ್ನೊಳಗಿದ್ದಂತೆ
ನಾನೇ ಬೆಳಗಿದೆನೆಂಬ ರೀತಿಯಲಿ.
ಮನೆಮನೆಯಲ್ಲೂ ಬೆಳಗುವ ನಿನಗೆ
ಜಾತಿ ಮತಗಳ ನೆರಳಿಲ್ಲ ನಿನ್ನೊಳಗೆ
ಹಣತೆ ಹಚ್ಚುವ ನಾನು ಜಾತಿ ಧರ್ಮದ
ಸಂಕೋಲೆಯೊಳಗೆ ಬಂಧಿಯಾಗಿರುವೆ
.
ಆದರೂ ನಾನು
ಅಂತರಂಗದ ಕತ್ತಲೆಯ ಕಳೆಯುತ
ಸದಾ ಮಂದಹಾಸದಿ ಶೂನ್ಯಳಾಗಿ
ನೀ ಬೆಳಗೋ ರೀತಿಯಲಿ ಬೆಳಕಾಗಿರಬೇಕೆಂಬ ಆಸೆಯಲ್ಲಿ..
ಈ ದಿನವೂ ಮಾತ್ರವಲ್ಲ ಪ್ರತಿದಿನವೂ
ಹಚ್ಚುತ್ತೇನೆ ಹಣತೆ
ಶುಭ್ರ ಹೃದಯ ಮಂದಿರದಲ್ಲಿ
ಪ್ರಕೃತಿಗೆ ಶರಣಾಗಿ ಜಗದೊಳಿತಿಗೆ ಶುಭವಾಗಲೆಂದು…
ಮಮತಾ ರವೀಶ್ ಪಡ್ಡoಬೈಲ್
ಉತ್ತಮ ಕವಿತೆ