ಕಾವ್ಯಯಾನ

ಮರಳಿ ಕಟ್ಟಬೇಕಲ್ಲವೇ

multicolored abstract painting

ಸಂಮ್ಮೋದ ವಾಡಪ್ಪಿ

ಹದವಾದ ಮಣ್ಣ ಅಡಿಯಿಂದ
ತೇವವಾದ ಕಣ್ಣು, ನೋವುಂಡ ಒಡಲಿಂದ
ಎದ್ದು‌‌ನಿಲ್ಲುತಿದೆ ಒಂದು ಮೊಳಕೆ
ಚಿಗುರೊಡೆದು ಟಿಸಿಲಾಗಿ ಹರಡಿದೆ
ಬೆಂದ‌ ಧರೆಗೆ ಆಗಸದ ಮುತ್ತು
ಈ ಕೂಸಿಗಾಗಿಯೆ‌ ಮೇಲೇಳಲೆಂದು

ಕೂಸು ನಗುನಗುತ ಉದರದಿ ಸರಿದು
ಕಾಲಿಗೆ ಶಕ್ತಿ ಅಲ್ಪ, ಅಂಬೆಗಾಲಲಿ ಎದ್ದು
ಹಗಲಿರುಳು ಓಟ ಕಲಿಸುತಿದೆ ಜೀವನ ಪಾಠ
ತಾಯ ಸೆರಗಲಿ ಧೈರ್ಯ, ವಸುದೇವನ ಮೌಲ್ಯ
ಎತ್ತರವಾಗುತಿದೆ ಬಾಳು, ಧ್ಯೇಯಗಳ ತುಂಬಿ ಕೌಶಲ್ಯಲ

ಅತ್ತ ಇತ್ತ, ಕಲಿಕೆ ಅನುಭವಗಳು, ನವ್ಯ‌ಗ್ರಹಿಕೆ
ನಡೆಯು ನುಡಿಯು,ಹೊಸ ಆಯಾಮಗಳು
ಓಟದಿ‌ ಗೆಲುವಿನ‌ ರುಚಿ, ಹಸಿವು ಹೆಚ್ಚಾಯಿತು
ಗೆಳೆತನ, ಪ್ರೀತಿ, ಹಗೆ, ಆಸೆ, ದುರಾಸೆ
ಬಾಗದಂತೆ ಆಗಿದ್ದು ಹೆಮ್ಮರ, ನೆಲದಿ ಮಹಾ ಸಮರ

ಮೇಲೆದ್ದು‌ ಕಾಣದೇ ಹೋಯಿತು ಕೆಳಗಿನ‌ ಬದುಕು
ಮೌಲ್ಯ ಬಚ್ಚಿಟ್ಟು, ಕಾಂಚಾಣಕ್ಕೆ ಚೀಲ ಒಡ್ಡಿ ನಿಂತದ್ದು
ಮಗುವೆ ಅರಿ, ತಿಳಿಯಾಗಿಸು‌ ಮನವ ಬಾಗು, ಬೀಗುವುದೇಕೆ?
ಅಂತರಾತ್ಮದಿ‌ ಮಾತೆಯ ಸಂಸ್ಕಾರದ ಕೂಗು..‌ಪ್ರತಿದ್ವನಿ
ಕತ್ತಲಲಿ ಜೋರಾದ ಓಟದಿ ಬಿದ್ದಾಗ, ಸುತ್ತಲೂ ಅಪಹಾಸ್ಯದ‌ ನಗುವಿನ‌ ದ್ವನಿ

ಇರಲಿ, ತಾಳು ಸರಿ ತಪ್ಪುಗಳ ಶೋಧನೆಯಲಿ ಚಲನೆ
ಓಡುವಾಗ ಕಲಿಯಲೇ ಬೇಕು‌‌‌ ಪಾಠಗಳ, ತತ್ವಗಳ
ಬಿದ್ದ ನೋವಿಗೆ ಕುಗ್ಗದೆ,‌‌‌ ಭದ್ರವಾಗಿ ಹಿಡಿದ ಕೈಗಳ ಬಲವಿಹುದು
ಕಟ್ಟಡಗಳು ಕುಸಿದು ಬೀಳಬಹುದು ಬದುಕಿನ ಬಿರುಗಾಳಿಯಲಿ
ಆತ್ಮಬಲದ, ಸಂಕಲ್ಪದಲಿ‌ ಕಟ್ಟಲೇ‌ಬೇಕಲ್ಲವೇ ಎತ್ತರಕೆ ಏರಲು
ಮರಳಿ ಮರಳಿ….

******

Leave a Reply

Back To Top