ಅಂಕಣ ಸಂಗಾತಿ

ಈ ಬಂಧನ

ಮಹಾದೇವಿ ಪಾಟೀಲ..

ಅಮ್ಮ ಎಂಬ ಅದ್ಭುತ

ಅಮ್ಮ ಎಂಬ ಅದ್ಭುತ

  ಸ್ನೇಹಿತರೇ! ನನ್ನ ಈ ಬಂಧನ  ಅಂಕಣದ ಮೊದಲ ಲೇಖನವನ್ನು ಇನ್ನೇನು ಎಲ್ಲರೂ ಎದುರು ನೊಡುತ್ತಿರುವ ತಾಯಂದಿರ  ದಿನಕ್ಕಾಗಿ ಬರೆಯುತ್ತಿದ್ದೇನೆ .ದಯವಿಟ್ಟು ನಿಮ್ಮ ತಾಯಿಯನ್ನು ನೀವು ನಿಜವಾಗಿಯೂ ಪ್ರೀತಿಸುವವರಾದರೆ ಅವರನ್ನು  ಅರ್ಥಮಾಡಿಕೊಳ್ಳಲು ನನ್ನ ಈ ಸಾಲುಗಳನ್ನು  ಪ್ರೀತಿಯಿಂದ ಓದಿ  ಇದನ್ನು ಜಗದ ಎಲ್ಲ ಅದ್ಭುತ ತಾಯಂದಿರಿಗೆ  ಅರ್ಪಿಸುತ್ತಿದ್ದೇನೆ …
         ಎಲ್ಲರ ಮೊದಲ ಗುರು,  ಎಲ್ಲರ ಬಾಳಿನ ಬೆಳಕು ಆಗಿರುವ  ಅಮ್ಮಂದಿರಿಗಾಗಿ ನನ್ನ  ಈ ಅಂಕಣದ  ಮೂಲಕ ಅಕ್ಷರಾಭಿಷೇಕ…
*ಅಮ್ಮಾ ಎಂದರೆ ಏನೋ ಹರುಷವೋ
 ನನ್ನ ಪಾಲಿಗೆ ಅವಳೇ ದೈವವು…*

“ಅಮ್ಮ ದೇವರಾಗಬಹುದು ಆದರೆ ದೇವರು ಅಮ್ಮನಂತೆ ಆಗಲು ಸಾಧ್ಯವೇ ಇಲ್ಲ” ಎಂದು ಅನುಭವಿಗಳು ಹೇಳಿದ್ದಾರೆ ..ಏಕೆಂದರೆ ಅಮ್ಮ ಸಹಿಸುವ ಆ ಕಷ್ಟ, ನೋವು, ಯಾತನೆ ಯಾವ ದೇವರೂ ಕೂಡ ಸಹಿಸಲಾರ…ಅದಕ್ಕೇ ತಾಯಿಯನ್ನೇ ದೇವರೆಂದು ತಿಳಿದು ಅವಳನ್ನು ಯಾವಾಗಲೂ ಸಂತೃಪ್ತಿಯಿಂದ ನೋಡಿಕೊಂಡರೆ ಸಾಕು .ಮುಕ್ಕೋಟಿ ದೇವತೆಗಳ ಆಶೀರ್ವಾದ  ಆಗುವುದು ಎಂದು ಹೇಳುತ್ತಾರೆ..
      ಆ ದೇವರುಗಳಿಗೂ ಗೊತ್ತು
      ತಾಯಿಯ ನಿಜವಾದ ಆ ತಾಕತ್ತು
       ನವಮಾಸ ನಿನ್ನ  ಗರ್ಭದಿ ಹೊತ್ತು
       ಎದುರಿಸುವಳು ನೂರಾರು ಕುತ್ತು

    ಕೊಡುವಳು ಅಮೃತದಂತಹ ಕೈತುತ್ತು
 ನಗಿಸುವುದು ಮೊದಲು ಕೊಟ್ಟ ಆ ಮುತ್ತು
 ಕಾಯುವಳು ನಮ್ಮ ಬರದಂತೆ ಯಾವ ಆಪತ್ತು..

              ತಾಯ ಮಹತ್ವ ಸಾರುವ ಈ ಸಾಲುಗಳು ನಿಜಕ್ಕೂ ಶ್ಲಾಘನೀಯ.. ಮಕ್ಕಳಿಗೆ ತಂದೆ ಇಲ್ಲವೆಂದರೆ ಹೇಗೋ ಬದುಕಬಹುದು ಆದರೆ ತಾಯಿ ಇಲ್ಲವಾದರೆ ಅಷ್ಟೇ ಆ ಮಕ್ಕಳ ಬದುಕು ನರಕಸದೃಶ ..ತಾಯಿ ಇಲ್ಲದ ನೋವು, ಆ ದುಃಖ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು..
  ಸೃಷ್ಟಿ ಮಾಡುವ ಬ್ರಹ್ಮದೇವ
  ಭಕ್ತ ಬಾಂಧವ ಮಹಾವಿಷ್ಣು
  ಶರಣ ಪಾಲಕ ಮಹಾದೇವ
   ತಾಯ ಪ್ರೀತಿಯ ಕಾಣದೆ
    ಶಿಲೆಗಳಾದರೂ ಲೋಕದೆ….

ಎಂದು ಕವಿಗಳು ಆ ದೇವತೆಗಳೂ ಸಹ ತಾಯಿಯಿಲ್ಲದೇ ಕಲ್ಲಾದ ಪರಿಯನ್ನು ಹಾಡಿದ್ದಾರೆ…ಇಷ್ಟೆಲ್ಲಾ ತಾಯಿಯ ಮಹತ್ವ ಗೊತ್ತಿದ್ದರೂ ಕೂಡ ಕೆಲವು ಅವಿವೇಕಿಗಳು ತಾಯಿಗೆ ಬೆಲೆ ಕೊಡದೇ ಅವರಿಗೆ  ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟು ಅವರನ್ನು
ವೃದ್ಧಾಶ್ರಮಕ್ಕೆ ಅಟ್ಟಿ .. ಹೃದಯವೇ ಇಲ್ಲದ ಕಟುಕಂತೆ ಬದುಕುತ್ತಿದ್ದಾರೆ..
           ಇನ್ನೂ ಕೆಲವರು ತಾಯಿಯ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸುತ್ತಾ ,ನಮ್ಮ ತಾಯಿ ಬಹಳ ಕೆಟ್ಟವಳು ..ಅವಳಿಗೆ ನಾ ಎಂದರೆ ಪ್ರೀತಿಯೇ ಇಲ್ಲ.. ಬರೀ ಬಯ್ಯುತ್ತಾಳೆ,ಸಿಟ್ಟು ಮಾಡುತ್ತಾಳೆ  ಹೀಗೆ ಏನೇನೋ ಹೇಳುತ್ತಾರೆ.ತಾಯಿಯನ್ನು ದೊಡ್ಡ ಶತ್ರುವಿನಂತೆ ನೋಡುತ್ತಾರೆ.ತನ್ನ ಮಡದಿ ಬಂದ ಮೇಲೆ ಅವಳ ಮಾತು ಕೇಳುತ್ತಾ ತಾಯಿಗೆ ಮನ ನೋಯುವಂತೆ ಚುಚ್ಚಿ ಮಾತನಾಡುತ್ತಾರೆ … ಆದರೆ  ಒಂದು ಮಾತು ಅರ್ಥ ಮಾಡಿಕೊಳ್ಳಿ..ತಾಯಿ ಬೈದರೂ, ಹೊಡೆದರೂ, ಸಿಟ್ಟಾದರೂ, ಶಾಪ ಹಾಕಿದರೂ ಎಲ್ಲವೂ ನಿಮ್ಮ ಒಳ್ಳೆಯದಕ್ಕೇ‌‌ ಆಗಿರುತ್ತದೆ.ನಿಮಗಾಗಿ ಕಂಡ ಕಂಡ ದೇವರಿಗೆ ಹರಕೆ ಹೊತ್ತವಳು..ವಾರದಲ್ಲಿ ಮೂರು ದಿನ ನಿಮ್ಮ ಆರೋಗ್ಯಕ್ಕಾಗಿ ತನ್ನ ಆರೋಗ್ಯವನ್ನೂ ಲೆಕ್ಕಿಸದೇ ಉಪವಾಸ ಮಾಡಿದವಳು ಆಕೆ ನಿಮಗೆ ಎಂದಾದರೂ ಕೆಟ್ಟದ್ದು ಮಾಡುವುದು ಸಾಧ್ಯವೇ?ನೀವು ಎಂದಿಗೂ ಕಷ್ಟ ಪಡಬಾರದು ಎಂದು..ನೀವು ದಾರಿ ತಪ್ಪಬಾರದು ಎಂದು ಕೋಪದಿಂದ ಹೀಗೆಲ್ಲಾ ಮಾಡುತ್ತಾಳೆಯೇ ಹೊರತು ನಿಮ್ಮ ಮೇಲಿನ ದ್ವೇಷದಿಂದಲ್ಲ. ನಿಮ್ಮ ಮೇಲಿನ ಅಪಾರವಾದ ಮಮತೆ, ಪ್ರೀತಿ ನಿಮ್ಮ ಮಡದಿ ಬಂದ ಮೇಲೆ ಅವಳನ್ನು ನೀವು ಎಲ್ಲಿ ಅಲಕ್ಷ್ಯ ಮಾಡುವಿರೇನೋ ಎಂಬ ಭಯ ಒಂದು ಕಡೆಯಾದರೆ..ನಿಮಗೆ ಏನೂ ಹೇಳಲಾರದಂತಹ ಅಸಹಾಯಕತೆ.. ಅವಳಿಂದ ಆ ರೀತಿ ಮಾಡಿಸುತ್ತದೆ.ಅದನ್ನು ಅರ್ಥ ಮಾಡಿಕೊಳ್ಳದೇ ನೀವು ಅವಳನ್ನು  ಮನ ನೋಯಿಸಿ ಅವಳನ್ನು ಶತ್ರು ಅನ್ನುವಂತೆ ನೋಡುತ್ತೀರಿ… ನೀವು ಜೀವನದಲ್ಲಿ ದಾರಿ ತಪ್ಪಬಾರದು, ನಿಮ್ಮ ಭವಿಷ್ಯ ಸುಖವಾಗಿರಬೇಕು, ನಿಮಗೆ ಮುಂದೆ ಯಾವುದೇ ತೊಂದರೆಗಳು ಬರಬಾರದೆಂದು, ಯಾರಿಂದಲೂ ನೀವು ಮೋಸ ಹೋಗಬಾರದೆಂದು  ನಿಮ್ಮ ಪತ್ನಿ ನಿಮ್ಮನ್ನು ತಾಯಿ ಇಲ್ಲದಿದ್ದರೂ ತಾಯಿಯಂತೆಯೇ ನೋಡಿಕೊಳ್ಳಬೇಕು ಎಂಬ ದೂರಾಲೋಚನೆಯಿಂದ ಸೊಸೆಗೆ ಹೇಗಿದ್ದರೆ ಒಳ್ಳೆಯದು ಎಂಬ ತಿಳಿಸುವಾಗ ಸ್ವಲ್ಪ ಅತೀ ಎನಿಸಬಹುದು ಅಷ್ಟೇ.. ಆದರೆ ಅದನ್ನೇ ದೊಡ್ಡ ಅಪರಾಧ ಎಂಬಂತೆ ನೀವು ಅವಳಿಗೆ ನೋವಾಗುವಂತೆ ಮಾತನಾಡಿದರೆ ? ಮನದಲ್ಲಿಯೇ ನೊಂದು ಹೆತ್ತ ಕರುಳು ಹೇಳಿಕೊಳ್ಳಲಾರದೇ..ಒಳಗೊಳಗೆ ತಾನೂ ಸಂಕಟವನ್ನು ಅನುಭವಿಸುತ್ತಾಳೆ.. ಹೇಗೋ ನೀವು  ಅವಳನ್ನು ಮರೆಯದಿದ್ದರೆ  ಸಾಕು! ಎನ್ನುತ್ತಾ ಆ ರೀತಿಯಾಗಿ ಹುಚ್ಚಿಯಂತೆ ವರ್ತಿಸುತ್ತಾಳೆ. ಹೊರತು ನಿನ್ನ ಮೇಲೆ ಅವಳಿಗೆ ಯಾವುದೇ ದ್ವೇಷವಾಗಲಿ ಸಿಟ್ಟಾಗಲಿ ಇರುವುದಿಲ್ಲ.. ಅದನ್ನು ಅರಿತು  ಅವಳಿಗೆ ಗೌರವ ಕೊಟ್ಟರೆ  ನಿಮ್ಮ ಬದುಕು ಬಂಗಾರವಾಗುವುದು ಇಲ್ಲವಾದರೆ ಆ ತಾಯಿಯ ಕರುಳು ಕೊನೆಯವರೆಗೂ ಎಂಥಾ ಮಗನಿಗೆ ಜನ್ಮ ಕೊಟ್ಟೆ ಎಂದು ಮರುಗುವಂತೆ ಆಗುವುದು.
    ವಿದ್ಯೆ ಕಲಿಸಿದಳು ನಿನಗೆ ಹಗಲಿರುಳೆನ್ನದೆ ದುಡಿದು
    ಎಲ್ಲ ಕಷ್ಟಗಳನ್ನು ಎದುರಿಸಿ ಬೆಳೆಸಿದಳು ಅಂದು
    ನಿನಗಾಗಿ ಜೀವನ ಸವೆಸಿದಳು ಭವಿಷ್ಯಕ್ಕೆಂದು

  ಆ ತಾಯಿ ಕರುಳ ನೋಯಿಸದಿರು ನೀ ಎಂದೆಂದೂ…


  ಇನ್ನೂ ಕೆಲವರು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ರೆಕ್ಕೆ ಪುಕ್ಕ ಬಲಿತ ಹಕ್ಕಿಯಂತೆ ತಾಯಿಯ ಗೂಡು ತೊರೆಯಲು ಹವಣಿಸುತ್ತಿರುತ್ತಾರೆ.. ಮನೆಯಲ್ಲಿ ತಾವೇ ಜಾಣರು ,ಉಳಿದವರೆಲ್ಲ ದಡ್ಡರು .ಎಂಬಂತೆ ಅಹಂಕಾರದಿಂದ ವರ್ತಿಸುತ್ತಿರುತ್ತಾರೆ. ತಾಯಿ-ತಂದೆಯರಿಗೆ ಯಾವಾಗಲೂ ಚುಚ್ಚಿ ಮಾತನಾಡುತ್ತಾ ತಾನು ಯಾರಿಂದ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬುದನ್ನೇ ಮರೆತಿರುತ್ತಾರೆ. ತಾಯಿ ತಂದೆಗೆ ಬುದ್ಧಿ ಹೇಳಲು ಬರುತ್ತಾರೆ.. ಆಗಲು ಅಷ್ಟೇ ತಾಯಿ ನನ್ನ ಮಗ ಎಷ್ಟು ಜಾಣನಾಗಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ ವಿನಃ ನೋವು ಮಾಡಿಕೊಳ್ಳುವುದಿಲ್ಲ ..ಯಾವ ತಾಯಿಯೂ ಮಕ್ಕಳು ಎಷ್ಟೇ ನೋವು ಮಾಡಲಿ ಅವರಿಗೆ ಕೆಟ್ಟದಾಗಲಿ ಎಂದು ಯಾವತ್ತೂ ಬಯಸುವುದಿಲ್ಲ. ತನಗೆಷ್ಟೇ ನೋವಾದರೂ ಎಷ್ಟೇ ಕಷ್ಟವಾದರೂ ಸರಿ ಮಕ್ಕಳ ಬದುಕು ಬಂಗಾರವಾಗಲಿ ಎಂದು ಹೃದಯ ತುಂಬಿ ಹರಿಸುತ್ತಾಳೆ. ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಎಲ್ಲವನ್ನು ಮುಚ್ಚಿಕೊಳ್ಳುವ ಸಹನಾಮಯಿ ಎಂದರೆ ಅದು ಅಮ್ಮ ಮಾತ್ರ… ಅಂತಹ ಅಮ್ಮನಿಗೆ ಏನಾದರೂ ನೀವು  ಕಣ್ಣೀರು ತರಿಸಿದರೆ ಅದಕ್ಕಿಂತ ಮಹಾ ಪಾಪ ಯಾವುದೂ ಇಲ್ಲ. ನೀವೆಷ್ಟೇ ದೊಡ್ಡ ವ್ಯಕ್ತಿಯಾಗಿರಬಹುದು, ಕೋಟಿ ಕೋಟಿ ಹಣ ಗಳಿಸುತ್ತಿರಬಹುದು ,ಜಗತ್ತಿನ ದೊಡ್ಡ ಮಹಾವ್ಯಕ್ತಿ ಆಗಿರಬಹುದು, ನೀವು ತಾಯಿಯ ಮುಂದೆ ಮಗನೇ..ಅವಳಿಗೆ ತಲೆಬಾಗಲೇಬೇಕು. ಅವಳು ನಿಮಗೆ ಜನ್ಮ ನೀಡಿದ್ದರಿಂದ ಮಾತ್ರವೇ ನೀವು ಇಂದು ಏನಾಗಿರುವಿರಿ ಅದು ಎಲ್ಲವೂ ಸಾಧ್ಯವಾಗಿರುವುದು. ಅವಳು ಜನ್ಮ ಕೊಡುವ ಜೊತೆಗೆ ನಿಮಗೊಂದು ಅಗಾಧವಾದ ಶಕ್ತಿಯನ್ನು ಕರುಣಿಸಿದ್ದಾಳೆ .ಆ ಶಕ್ತಿಯಿಂದಲೇ ನಿಮ್ಮ ಅಸ್ತಿತ್ವ ಎಂಬುದನ್ನು ಅರ್ಥೈಸಿಕೊಂಡು ಸದಾ ತಾಯಿಗೆ ಕೃತಜ್ಞರಾಗಿ ಬದುಕಿರಿ. ಆ ತಾಯಿಯನ್ನು ಯಾವಾಗಲೂ ಸಂತೃಪ್ತಿಯಿಂದ ಇರುವಂತೆ ನೋಡಿಕೊಳ್ಳಿ.
  ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ
ಈ ಜಗದಲ್ಲಿ ಕಾಣೋ
ಹಡೆದ ತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನು ?
ತಮ್ಮ ಮರಳಿ ಬರುವಳೇನು ?

ಒಮ್ಮೆ ಕಳೆದುಕೊಂಡರೆ ತಾಯಿಯನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ.. ಎಂಬುದನ್ನು ಜನಪದ ಶೈಲಿಯಲ್ಲಿ ಎಷ್ಟು ಸುಂದರವಾಗಿ ಹೇಳಿದ್ದಾರೆ ..ಈ ಜಗತ್ತಿನಲ್ಲಿ ಎಲ್ಲವನ್ನು ಹೇಗಾದರೂ ಮಾಡಿ ಪಡೆಯಬಹುದು. ಆದರೆ ತಾಯಿಯನ್ನು ಕಳೆದುಕೊಂಡರೆ ಏನು ಕೊಟ್ಟರು ತಿರುಗಿ ಪಡೆಯಲು ಸಾಧ್ಯವಿಲ್ಲ .ಅವಳ ಆ ಪ್ರೀತಿಗೆ, ಆ ಮಮತೆಗೆ ,ವಾತ್ಸಲ್ಯಕ್ಕೆ ,ಅವಳ ತಾಳ್ಮೆಗೆ ಅವಳಿಗೆ ಅವಳೊಬ್ಬಳೇ ಸರಿಸಾಟಿ. ಯಾರದೋ ಮನೆಯಿಂದ ಜೊತೆಯಾದ ಗಂಡ /ಹೆಂಡತಿಯ ಗುಬ್ಬಚ್ಚಿಯಂತಹ ಪ್ರೀತಿ ಮೆಚ್ಚಿ.. ವಿಶಾಲವಾದ ವೃಕ್ಷದಂತಿರುವ ಅಮ್ಮನ ಹೃದಯವನ್ನೆಂದೂ ನೋಯಿಸಬೇಡಿ. ಹಾಗೆ ಮಾಡಿದ್ದಾದರೆ ನಿಮ್ಮಿಂದ ನಿಮ್ಮ ತಾಯಿಯನ್ನು ದೂರ ಮಾಡಿದ ತಪ್ಪಿಗೆ ಮುಂದೆ ಒಂದು ದಿನ ದೇವರು ನಿಮಗೆ ನಿಮ್ಮ ಮಕ್ಕಳಿಂದ ಘೋರ ಶಿಕ್ಷೆ ಕೊಡಿಸುವುದು ನಿಶ್ಚಿತ ….ಆದ್ದರಿಂದ ತಾಯಿಯನ್ನು ಯಾವತ್ತೂ ಮರುಗಿಸಬೇಡಿ. ಹೊಸದಾಗಿ ಶುರುವಾದ ನಿಮ್ಮ ಯಾವುದೇ ಸಂಬಂಧಗಳೊಂದಿಗೆ ನೀವು ನಿಕಟವಾದಷ್ಟು ಇಷ್ಟು ದಿನ ಇದ್ದ ಉಳಿದ ಸಂಬಂಧಗಳಿಂದ ನೀವು ಪ್ರತ್ಯೇಕವಾಗುತ್ತಾ ಹೋಗುವಿರಿ. ಇದು ಪ್ರಕೃತಿ ನಿಯಮ .ಯಾರಿಗೆ ಏನಾದರೂ ಸರಿ ನೋಡಲಾರದಷ್ಟು ನಿಮ್ಮ ಸಂಬಂಧಗಳಿಗೆ ನೀವು ಅಂಟಿಕೊಂಡಿರುತ್ತೀರಿ.. ಆದರೆ ನಿಮ್ಮ ಪ್ರಪಂಚದಲ್ಲಿ ಯಾರಿಗಾದರೂ ಏನಾದರೂ ಸ್ವಲ್ಪ ತೊಂದರೆ ಆದರೆ ಆಗ ನಿಮಗೆ ಮೊದಲು ನೆನಪಾಗುವುದೇ ನಿಮ್ಮ ತಾಯಿ .. ಅವರು ನೀವೇನೇ ಮಾಡಿದರೂ  ನಿಮ್ಮನ್ನು ದೂರುತ್ತಾ ಕೂರುವುದಿಲ್ಲ…ಏಕೆಂದರೆ ಅವರಿಗೆ ನೀವೇ ಪ್ರಪಂಚವಾಗಿರುತ್ತೀರಿ. ನಿಮ್ಮ ಸ್ವಾರ್ಥದ ಪ್ರಪಂಚದ ಅರಿವೂ ಕೂಡ ಅವರಿಗಿರುವುದಿಲ್ಲ. ಮುಗ್ಧ ಮನಸ್ಸಿನಿಂದ ಸದಾ ನೀವು ಎಲ್ಲೇ ಇರಿ ,ಹೇಗೆ ಇರಿ ಸುಖವಾಗಿರಲಿ ಎಂದು ಬಯಸುವ ಮಹಾಚೇತನ ಎಂದರೆ ಅದು ತಾಯಿ ಮಾತ್ರ. ಅಷ್ಟೇ ಅಲ್ಲ ಅಕಸ್ಮಾತ್ ನೀವು ನಿಮ್ಮವರೇ ಎಂದುಕೊಂಡಿದ್ದ ,ನಿಮ್ಮ ಉಸಿರೇ  ಎಂದುಕೊಂಡಿದ್ದ ಸಂಬಂಧಗಳಿಂದ ನಿಮಗೆ ಸ್ವಲ್ಪ ನೋವಾದರೂ,ಮೋಸವಾದರೂ ಮೊದಲು ನೆನಪಾಗುವುದು ಅಮ್ಮನ ಮಡಿಲು..ಆಗ ಸಾಕಾಗುವಷ್ಟು ಅತ್ತು ಹಗುರವಾಗಲು ಅಮ್ಮನ ಮಡಿಲು  ಬೇಕು ಎನಿಸುತ್ತದೆ ..ಓಡೋಡಿ ಬಂದು ಅಮ್ಮನನ್ನು ತಬ್ಬಿಕೊಂಡು ನಿಮ್ಮ ದುಃಖ ಹೇಳಿಕೊಳ್ಳುವಿರಿ. ಆಗ ಅಮ್ಮ ನಿಮಗೆ ಧೈರ್ಯ ತುಂಬಿ, ಸಮಾಧಾನ ಮಾಡಿ ,ಪ್ರೀತಿಯ ಕೈತುತ್ತು ತಿನ್ನಿಸಿ ..ಒಳಗೊಳಗೆ ನಿಮ್ಮ ಸ್ಥಿತಿ ಕಂಡು ಕೊರಗುವಳು.. ನಿಮಗೆ ಬದುಕುವ ಧೈರ್ಯ ಕೊಡುವಳು…ಒಮ್ಮೆ ಯೋಚಿಸಿ ಅಮ್ಮ ಇಲ್ಲದಿದ್ದರೆ ?ನೀವೇ ಸೃಷ್ಟಿಸಿ ಬಂಧಿಯಾದ ಪ್ರಪಂಚದಲ್ಲಿ ನೀವೇ ಒದ್ದಾಡಿ ಒದ್ದಾಡಿ ಸಾಯಬೇಕಾಗಿತ್ತು.
     ತಾಯಿಯಾ ತಂದೆಯಾ
      ಮಮತೆ ವಾತ್ಸಲ್ಯ
     ಯಾವ ದೇವರು ನೀಡಬಲ್ಲ
     ಜಗದಿ ನಮಗೆಲ್ಲ …….

ಎಂಬ ಕವಿವಾಣಿ ಅಕ್ಷರಶಃ ಸತ್ಯ..ಇಷ್ಟೆಲ್ಲ ತಾಯಿಬಗ್ಗೆ ಹೇಳುತ್ತಿರುವುದಕ್ಕೆ ಕಾರಣವಿಷ್ಟೇ…ಸ್ನೇಹಿತರೆ !  ತಾಯಂದಿರ ದಿನ ಹತ್ತಿರ ಬರ್ತಿದೆ   ಮೇ ತಿಂಗಳ ಎರಡನೇ ಭಾನುವಾರ ದಿನ‌ ವಿಶ್ವದೆಡೆಯೆಲ್ಲಾ ತಾಯ ದಿನ ಆಚರಿಸಲಾಗುತ್ತಿದೆ ..ಯಾರು ಹೆತ್ತ ಮಗ ಮಾಡಿದನೋ ಈ ದಿನ .?.ಅಲ್ಲಾರೀ..ನಮ್ಮ ಅಸ್ತಿತ್ವಕ್ಕೆ ಕಾರಣಳಾದ ಇಷ್ಟೆಲ್ಲ ನಮಗೋಸ್ಕರ ಮಾಡಿರುವ ತಾಯಿಗೆ ಕೇವಲ ಈ ಒಂದು ದಿನ ಸಾಕಾ? ಅವಳು ನಿತ್ಯ ಸ್ಮರಣೆ.ಸದಾ ಪೂಜಿತೆ. ಹಲವು ಜನ್ಮ ಎತ್ತಿದರೂ  ಹಲವು ಪರಿಯಲಿ ದುಡಿದರೂ ಕೂಡ ನಾವು ಅಮ್ಮನ ಋಣವನ್ನು ತೀರಿಸಲು ಸಾಧ್ಯವಿಲ್ಲ ..ಇಷ್ಟು ದಿನ My wife is my life ಅಂತ ದಿನಾಲೂ status ಹಾಕುತ್ತಿದ್ದವರು  ಒಂದು ದಿನಮಾತ್ರ ಅಮ್ಮನಿಗೇ ಓದಲೂ ಬರದಂತೆ ಇಂಗ್ಲೀಷ್ನಲ್ಲಿ
Happy Mothers Day ..love you mummy ..My mother is my life .mother is my god ಎಂದೆಲ್ಲಾ ದೊಡ್ಡದಾಗಿ ಬರೆದು Facebook ,watsapp,Instagram ಲ್ಲಿ status ಹಾಕ್ತಾರೆ .


    ಇಷ್ಟು ದಿನ ಅಮ್ಮ ಬದುಕಿದ್ದಾಳೋ ಇಲ್ಲವೋ ಅಂತನೂ ತಲೆ ಕೆಡಿಸಿಕೊಳ್ಳದೇ ತನ್ನದೇ ಆದ ಲೋಕದಲ್ಲಿ ಲೋಕಕ್ಕೆ ಪರಿಚಯಿಸಿದ ಆ ಮಾತೆಯನ್ನೇ ಮರೆತು ಅವಳೊಂದಿಗೆ ಐದು ನಿಮಿಷ ಮಾತನಾಡಲು ಸಮಯವಿಲ್ಲದಂತೆ ಬ್ಯುಜಿ ಇದ್ದೇನೆ ಎಂದು ನಾಟಕ ಮಾಡುವ ಮಕ್ಕಳಿಗೆಂದೇ ಈ ತಾಯಂದಿರ ದಿನ ಮಾಡಿರಬೇಕು..ಅಂದು ಮಾತ್ರ ಅಮ್ಮನ ಮೇಲೆ ಎಂದೂ ಇಲ್ಲದ ಪ್ರೀತಿ ಉಕ್ಕಿ ಬರುವುದು..ಅದೂ ಬೆರೆಯವರಿಗೆ ತೋರಿಸ್ಕೊಳ್ಳಲಿಕ್ಕೋಸ್ಕರ..ತಾಯಂದಿರ ದಿನ ಅಂತ ಕೇಕ್ ತಂದು ತಾವೇ ಕಟ್ ಮಾಡಿ ಸೆಲ್ಫಿ ತೊಗೊಂಡು, ಅಮ್ಮನಿಗೊಂದು ಸಣ್ಣ ಗಿಫ್ಟ ಕೊಟ್ಟು ಫೋಜು ಕೊಟ್ಟು ಫೊಟೋವನ್ನು ಎಲ್ಲ ಗ್ರುಫ್ ಗಳಿಗೂ ಕಳಿಸಿದರೆ ಆಯ್ತು ..ಇವರ ತಾಯಿಯ ಬಗ್ಗೆ ಕರ್ತವ್ಯ ಮುಗೀತು.ಇವರೇ ಆದರ್ಶ ಮಗ/ಮಗಳು ಆಗಿ ಬಿಡ್ತಾರೆ…ಯಾಕಿಷ್ಟು ನಾಟಕದ ಪ್ರೀತಿ ?ಇಂಥ ಢಂಬಾಚಾರದ ಪ್ರೀತಿ ತಾಯಿಗೆ ಬೇಕಾ?
     ಗರ್ಭದಿಂದ ಘೋರಿಯವರೆಗೂ ನಾವು ಬದುಕಿರುವ ಅಗೋಚರ ಶಕ್ತಿಗೆ ಕಾರಣ ನಮ್ಮ ಅಮ್ಮ ನಮಗೆ ಕೊಟ್ಟ ಜನ್ಮ…ನಮ್ಮ ಮೊಟ್ಟ ಮೊದಲ ಬಾಂಧವ್ಯ ಎಂದರೆ ಅದು ಅಮ್ಮ ..  ಇಡೀ ಪ್ರಪಂಚದಲ್ಲಿ ಅಮ್ಮನಿಗಿಂತ ಮಿಗಿಲಾದ ಬಂಧು ಯಾರು ಇಲ್ಲ.ಅಷ್ಟೇ ಏಕೆ.. ಅಮ್ಮನನ್ನು ಮೀರಿದ ದೈವವೇ ಇಲ್ಲ‌ ಎನ್ನಬಹುದು.. ನಮಗೆ ಏನೇ ಕಷ್ಟ ಬಂದರೂ ಸುಖ ಬಂದರೂ ಮೊದಲು ನೆನಪಾಗುವುದು, ಸದಾ ನಮಗಾಗಿಯೇ ಮಿಡಿಯುವ ಒಂದೇ ಒಂದು ಮಧುರ ಮನಸ್ಸು ಎಂದರೆ ಅದು ನನ್ನಮ್ಮ..ಅಂತಹ ಅಮ್ಮನಿಗೆ ನಾವು ಪ್ರತಿ ದಿನ ತಾಯದಿನ ಅಂತ ಆಚರಿಸಬೇಕು…ಪ್ರತಿ ದಿನ ಅವರೊಂದಿಗಿಷ್ಟು ನಗುನಗುತ್ತ ಮಾತಾಡಿ ಸಾಕು ಆ ಜೀವಕ್ಕೇ ಇನ್ನೇನೂ ಬೇಡ..ನೀವೇನಾದರೂ ಮಾಡಿ ನೀವು ನಿಮ್ಮ ಕುಟುಂಬ ಸದಾ ಸುಖವಾಗಿರಬೇಕೆಂದು ಬಯಸುವ ಬಡ ಜೀವ ಅದು ಅವಳಿಗೆ ಬೇಕಾಗಿರುವುದು ನಿಮ್ಮ ಕಾರು,ಬಂಗಲೆ,ಬ್ರಾಂಡೆಡ್ ಬಟ್ಟೆ, ಒಡವೆ ಏನೂ ಅಲ್ಲ ..ಮೊಮ್ಮಕ್ಕಳೊಂದಿಗೆ ಬೆರೆತು ಆಡುವ ಒಂದಿಷ್ಟು ನಗುವ ಆಸೆ ..ಕೈತುತ್ತು ತಿನ್ನಿಸಿ ಬೆಳೆಸಿದವಳಿಗೆ ಊಟ ಮಾಡಿದ್ದಿಯಾ ಅಮ್ಮಾ?ಅಂತ ಕೇಳುವ ನಿಮ್ಮ ನಾಲ್ಕು ಮಾತು ಅಷ್ಟೇ ಆ ಜೀವ ಖುಷಿಯಾಗಿರುವುದು.
ಯಾವುದೋ ಸುಂದರ ಮುಖಕ್ಕೆ ಮನಸೋತು ನಿನಗಾಗಿ ದಣಿವರಿಯದೇ ದುಡಿದು ಮಾಸಿದ ಬಣ್ಣದ, ಮುದುಡಿದ ಚರ್ಮದ ಅಮ್ಮನ ಸುಂದರ ತಾಯಿಹೃದಯಕ್ಕೆ ನೋವು ಮಾಡದಿರಿ.ನಿಮ್ಮ ಹೆಂಡತಿಗೆ ಚಿನ್ನ ಹಾಕಿ ಆದರೆ ಅಮ್ಮನಿಗೆ ಪ್ರೀತಿಯಿಂದ ಒಂದು ತುತ್ತು ಅನ್ನ ಹಾಕಿ ಸಾಕು.ಅದೇ ಅಮ್ಮನಿಗೇ ಸ್ವರ್ಗ..ಆ ಸ್ವಾಭಿಮಾನಿ  ಜೀವವನ್ನು ಎಂದೂ ನಿಮ್ಮ ಮಡದಿಯ ಮುಂದೆ ದೂರುತ್ತಾ ದೂರಮಾಡದಿರಿ.. ಆ ಜೀವ ನೊಂದೀತು!!! ತಾಯಂದಿರ ದಿನಕ್ಕೆ ನಿಜವಾದ ಅರ್ಥ ಬರಬೇಕೆಂದರೆ ತಸಯಿಯನ್ನೂ ಯಾವತ್ತಿಗೂ ನೋಯಿಸಬೇಡಿ ..ಗೌರವಿಸಿ. .ನಿನ್ನ ತಾಯಿ ಆಗ ನಿಜವಾಗಲೂ ಸಂತೋಷ ಪಡುವಳು….
      ಮಾತೃ ದೇವೋ ಭವ..


    ಮಹಾದೇವಿ ಪಾಟೀಲ..

    ಮಹಾದೇವಿ ಪಾಟೀಲ (ಮಧು ಪಾಟೀಲ)ಯವರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋರಣಹಳ್ಳಿ ಚಿಕ್ಕೋಡಿ ತಾಲೂಕು..ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ
    ಶಿಕ್ಷಕರಾಗಿದ್ದಾರೆ ಪ್ರವೃತ್ತಿ:- ಸಾಹಿತಿಗಳು ,ಗಾಯಕರು,ನಿರೂಪಕರು.ಸಮಾಜಸೇವಕರು,ಪರಿಸರ ಪ್ರೇಮಿಗಳು.ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು..ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಚಿಕ್ಕೋಡಿ ತಾಲೂಕು ಅಧ್ಯಕ್ಷರು..ಗ್ರಾಮೀಣ ಸಾಂಸ್ಕೃತಿಕ ಮತ್ತು ಕಲೆಗಳ ಪ್ರೋತ್ಸಾಹಕರು.ಸಾಹಿತ್ಯ ಕ್ಷೇತ್ರದಲ್ಲಿಅಪಾರ  ಆಸಕ್ತಿ ಇರುವ ಇವರು.   ಕವನ,ಲೇಖನ,ಚುಟುಕು, ಹನಿಗವನಗಳನ್ನು ಬರೆಯುತ್ತಾರೆ..ಇದುವರೆಗೂ ಸುಮಾರು ೨೦೦ಕ್ಕೂ ಹೆಚ್ಚು ಕವನಗಳನ್ನು ಹಾಗೂ ೨೫ ಲೇಖನಗಳನ್ನು ಬರೆದಿದ್ದು ಪುಸ್ತಕ ಪ್ರಕಟನೆಗೆ ಸಿದ್ಧತೆ ನಡೆದಿದೆ.ಲೇಖನಗಳು ಹಾಗೂ ಕವನಗಳು ವಿಜಯವಾಣಿ,ಜನಮಿಡಿತ,ಕುಂದಾನಗರಿ,ಸಾಹಿತ್ಯ ಸಂಗಾತಿ‌ ಪತ್ರಿಕೆಗಳಲ್ಲಿ ಪ್ರಕಟವಾಗಿವೆ..ಪ್ರಶಸ್ತಿಗಳು:ಜನಮೆಚ್ಚಿದ ಶಿಕ್ಷಕಿ,ತಾಲೂಕು ಉತ್ತಮ ಶಿಕ್ಷಕಿ,ಸೇವಾರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡತಿ ಪ್ರಶಸ್ತಿ, ಗುರುಕುಲತಿಲಕ ಪ್ರಶಸ್ತಿ,ಶಿಕ್ಷಣ ರತ್ನ, ಗುರುಭೂಷಣ,ಸ್ತ್ರೀ ಕುಲ ರತ್ನ..

    Leave a Reply

    Back To Top