ಕಾವ್ಯ ಸಂಗಾತಿ
ಯು.ಸಿರಾಜ್ ಅಹಮದ್ ಸೊರಬ
ಗಜಲ್
ಖಾಲಿ ಹಾಳೆಯಾಗಿದ್ದ ಬಾಳಿಗೆ ಜೀವ ಕಳೆಯ ಕವಿತೆಯಾಗಿ ನೀ ಬಂದೆ
ಒಂಟಿತನದ ಕಾರಿರುಳಿನಲ್ಲಿ ಹೊಸ ಚೇತನದ ಹಣತೆಯಾಗಿ ನೀ ಬಂದೆ
ಒಲವಿಗೊಲವು ಸೇರಿದಾಗ ಸುಖ ಸಂತೋಷಕ್ಕಾಗಿ ಸಾವಿರ ದಾರಿಗಳು
ಕಬ್ಬಿಗನ ಲೇಖನಿಗೆ ರೂಪಕಗಳ ಸಿರಿಯಾಗಿ ಘನತೆಯಾಗಿ ನೀ ಬಂದೆ
ವದನಕ್ಕೆ ಕೊಟ್ಟೇನು ಉದಾಹರಣೆ ಹೃದಯ ಸೌಂದಯ೯ಕ್ಕಿಲ್ಲ ಸಾಟಿ
ಸಂಸಾರದ ನೆರಳಾಗಿ ಕಳೆಯಾಗಿ ಮನದನ್ನೆ ಮಮತೆಯಾಗಿ ನೀ ಬಂದೆ
ಒಂಟಿಯಾಗಿದ್ದ ಪಯಣದಲ್ಲಿ ಜೊತೆಯಾಗಿ ಕೈಹಿಡಿದು ನಡೆಸಿದವಳೇ
ಭಾವ ಜೀವಿಯ ಶಕ್ತಿಯ ಮುತ್ತಾಗಿ ಬರಹಕ್ಕೆ ಕ್ಷಮತೆಯಾಗಿ ನೀ ಬಂದೆ
ಸಖಿ ನೀನಿರದ ಪ್ರತಿ ಕ್ಷಣವೂ ಮಾಸದಂತೆ ಕಳೆಯುತ್ತಾನೆ ಈಉಸಿರಾ
ಪ್ರಫುಲ್ಲತೆಯ ಹೂಬನವಾಗಿ ಜೀವನಪ್ರೀತಿಯ ಒರತೆಯಾಗಿ ನೀ ಬಂದೆ
ಯು.ಸಿರಾಜ್ ಅಹಮದ್ ಸೊರಬ