ಕಾವ್ಯ ಸಂಗಾತಿ
ಶಾರು
ಗಜಲ್ (ಏಕ ಅಲಾಮತ್ ಗಜಲ್)
ಕಂಡುಂಡ ಬೆಳಗ ಸತ್ಯಕೆ ಸೂರ್ಯ ಬೆಳಗಿದಂತೆ ಬಾರೋ ದೊರೆ
ನಿತ್ಯ ಸುಳಿಗಾಳಿ ನಿಶಬ್ದದಲಿ ನಾದ ತೇಲಿದಂತೆ ಬಾರೋ ದೊರೆ,
ಕವಿದ ಮಂಜು ಸರಿಸರಿಯುವಂತೆ ಬಿಸಿಲ ಕೊಲ್ಮಿಂಚೊಂದು ಮೂಡಿದೆ,
ಚಿಗುರೊಡೆದ ಸಸಿಯ ಬೇರಿಗೆ ನೀರ ಗಂಗೆ ಹರಿದಂತೆ ಬಾರೋ ದೊರೆ
ಎದೆಯ ಭಾವ ಹದದಿ ಮುದಗೊಳುತ ಜಾವದಿ ನಲಿದಿದೆ,
ತುಟಿಯ ತುದಿಯಲೇನು ಸುಳಿದು ಕಣ್ಣು ಅರಳಿದಂತೆ ಬಾರೋ ದೊರೆ
ಮಸಣದ ಗೋರಿ ಮೇಲೆ ಹೊಸ ಸಸಿ ಬೇರು ಬಿಟ್ಟು ಮುಗಿಲ ನೋಡುತಿದೆ,
ತೊರೆಯೊಂದು ಹೊಸ ದಿಕ್ಕನರಸಿ ಸಾಗರ ಸೇರಿದಂತೆ ಬಾರೋ ದೊರೆ
ಬರಡು ನೆಲದ ಕೆರೆಕಟ್ಟೆಗೆ ಮಳೆ ಹಬ್ಬವಾಗಿ ಹಸಿರಾಗಸ ತಬ್ಬುತಿದೆ,
ಶಾರು ಭಾವಭವದ ಕರಿಮೋಡಕೆ ನವಿಲು ಕುಣಿದಂತೆ ಬಾರೋ ದೊರೆ
ಶಾರು
ಕವಿ-ಪರಿಚಯ
ಹುಬ್ಬಳ್ಳಿ ಶಾಲಿನಿ ರುದ್ರಮುನಿ, ಗೃಹಿಣಿ,ರಾಜ್ಯಾಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು.ಸಾಹಿತಿಗಳು, ಕವಿಗಳು ಮತ್ತು ಸಂಘಟಕರು,ಕಥೆ, ಕವನ ಗಜಲ್ ಛಂದೋಬದ್ದ ಕಾವ್ಯಗಳ ರಚನೆ, ಕರ್ನಾಟಕ ಸಂಗೀತ ಗಾಯನ, ವೀಣೆ ನುಡಿಸುವುದು, ಕ್ಯಾನ್ವಾಸ್ ಪೇಯಿಂಟಿಂಗ್,ಇವರ ಹವ್ಯಾಸ, ಕರೋನಾರ್ಜಿತ ಜ್ಞಾನ ಕವನ ಸಂಕಲನ ಲೋಕಾರ್ಪಣೆ.