ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…!

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಮನೋಲ್ಲಾಸಿನಿ…!

ಮೃದ್ವಂಗಿಯಂತೆ
ದೇಹ ಬಳುಕಿಸುತ
ಕಣ್ಣೋಟದಲಿ ಸೆಳೆವ
ಮಾಯಾಂಗಿನಿ….!
ಹೃದಯದಲ್ಲವಿತು
ಮನಬೆರೆತ ಮನೋಲ್ಲಾಸಿನಿ…!!

ಮೋಹಕ ಮೈಮಾಟ
ನಿದಿರೆಯಲ್ಲೂ
ಅದೆ ತಂಗಾಳಿಯ ಗುಂಗು
ನಿನ್ನೊಲವಿನ ರಂಗು
ಕಾರ್ಮೋಡದ ಚಂದ್ರನಾದೆ…!
ಕಂಗೆಟ್ಟ ಕುರುಡನಿಗೆ
ಊರುಗೋಲಾದೆ
ಮನದಲ್ಲವಿತು ಕಾಣದಾದೆ…!!

ದುಸ್ವಪ್ನ ಸುಸ್ವಪ್ನಗಳ
ಸರಮಾಲೆಯಲ್ಲಿ
ತೇಲುವ ಗಗನಸಖಿಯಾದೆ
ಹಾರುವ ಗಾಳಿಪಟದಂತೆ
ಮನ ಹಿಡಿತಕ್ಕೆ ಸಿಗುತಿಲ್ಲ…!

ಅರೆಕ್ಷಣ ಮೌನ
ಅರೆಕ್ಷಣ ಧ್ಯಾನ
ಒಲವ ಬಲೆಯಲ್ಲಿ
ಸಿಲುಕಿದಂತೆ ಭಾಸ…!
ವದನದಲ್ಲಿ ಒಮ್ಮೊಮ್ಮೆ
ಕಿರು ಮಂದಹಾಸ…!

ಸೆಳೆಯುತ್ತಿರುವೆ
ಅವಳನೊಮ್ಮೆ
ಬಳಿಬಾರೆ ಮೃದ್ವಂಗಿ….
ಬಾರೆ ನನ್ನ ಕನಕಾಂಗಿ….!
ಇಂದಾದೆ ನಾ ಏಕಾಂಗಿ
ನೀನಾಗಿ ಬಿಡು
ನನ್ನ ಅರ್ಧಾಂಗಿ….!


ಶಂಕರಾನಂದ ಹೆಬ್ಬಾಳ

Leave a Reply

Back To Top