ಮಾರ್ಕೆಟ್ಟು, ಮಾತು ಮತ್ತು ಶಬರಿ
ಅಂಜನಾ ಹೆಗಡೆ
ಬ್ರ್ಯಾಂಡೆಡ್ ಶರ್ಟು ತೊಟ್ಟು
ಸರ್ವಾಲಂಕೃತನಾದ ರಾಮ
ಮಾರ್ಕೆಟ್ಟಿನಲ್ಲಿ…
ಇದೇ ಮೊದಲಭೇಟಿ!!
ಕಣ್ಣಗಲಿಸಿ
“ಹೌ ಆರ್ ಯೂ” ಎಂದು
ಕೈ ಕುಲುಕಿದೆ
ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ
ಒಂದು ಪ್ರೀತಿಯ ಆಲಿಂಗನ…
ಬಿಲ್ಲು ಬಾಣಗಳೆಲ್ಲಿ
ಎಂದೆ…
ಉತ್ತರವಿಲ್ಲ
ಕಣ್ಣು ಮಿಟಕಿಸಿದ
ಥೇಟು
ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ…
ಕಣ್ತಪ್ಪಿಸಿಕೊಂಡಿದ್ದ
ಟೀನೇಜಿನ ಕನಸೊಂದು
ವನವಾಸದಿಂದ ಮಾರ್ಕೆಟ್ಟಿಗೆ…
ಮಿಟಕಿಸಿದ್ದು
ಎಡಗಣ್ಣೋ ಬಲಗಡೆಯದೋ
ಗೊಂದಲ…
ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ….
ಎಲ್ಲರ ಪ್ರೀತಿಯ ರಾಮ
ಅದ್ಯಾರ ಹಂಬಲಗಳ ಉತ್ಸವಮೂರ್ತಿ
ಯಾರ ಕಳವಳಗಳ ಉತ್ತರ
ಯಾವ ಯುಗಕ್ಕೆ ಯಾರು ಕೊಟ್ಟ ಜನ್ಮ…
ದಪ್ಪಮೀಸೆಯ ದೇವಮಾನವ!!
ನಾನಿವತ್ತು
ಉದ್ದನೆಯ ಮೀಸೆಯ ಜಿರಲೆಯೊಂದನ್ನು
ಬಾತ್ರೂಮಿನಲ್ಲಿ ಸಾಯಿಸಿಬಿಟ್ಟೆ
“ನಡಿ ಕಾಫಿ ಕುಡಿಯೋಣ”
ಎಂದವನ ಮಾತನ್ನೇ
ಹಿಂಬಾಲಿಸಿದೆ
ಮಾರ್ಕೆಟ್ಟಿನ ತುಂಬೆಲ್ಲ ಮಾತುಗಳು…
ಕೊನೆಯಿಲ್ಲದ
ಗುರಿಯೂ ಇಲ್ಲದ
ಬರಿದೇ ಮಾತುಗಳ
ವಿಧವಿಧ ಅವತಾರದ
ಒಂದೊಂದು ಮುಖಕ್ಕೂ
ಒಂದೊಂದು ರೂಪ…
ಸುತ್ತ ಕಣ್ಣಾಡಿಸಿದೆ…
ಮೌನಕ್ಕೆ ಶರಣಾಗಿ
ನಿಂತಲ್ಲೇ ಶಬರಿಯಾದೆ!!
**********