ಮಹಾದೇವಿ ಪಾಟೀಲ..ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ

ಕಾವ್ಯ ಸಂಗಾತಿ

ಮಹಾದೇವಿ ಪಾಟೀಲ..

ಬುದ್ಧನಲ್ಲ ಪ್ರಬುದ್ಧ ನೀ ಗುರುವೇ

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಮಾನವತ್ವ ಸಾರಿದ ಸಮಷ್ಟಿಯ ಚೇತನ ನೀ ಮನೋವಿಕಾರ ಕಳೆದ ಶಾಂತಿಯ ದ್ಯೋತಕ ನೀ
ಪ್ರೀತಿಯ ಪರಿಭಾಷೆ ತಿಳಿಸಿದ ಪ್ರೇಮಮಯಿ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಪಶು ಪ್ರೇತಗಳಿಗೂ ದೈವತ್ವ ಕರುಣಿಸಿದವ ನೀ ಸರ್ವ ಚಿತ್ತ ವೃತ್ತಿಗಳ ಅಸ್ತಿತ್ವವೇ ದೇವರೆಂದವ ನೀ
ಭ್ರಾಮಿಕ ದೈವದ ಕಲ್ಪನೆಯ ಅಲ್ಲಗಳೆದವ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ವಿದೇಹದ ಮುಕ್ತಿಯೇ ಮನದ ಮುಕ್ತಿ ಎಂದವ ನೀ
ಜೀವಿ ಸಂಕುಲದ ಪ್ರತೀಕಣದಲ್ಲೂ ಜ್ಞಾನ ಕಂಡವ ನೀ
ಅಂತರ್ಗತ ಜ್ಞಾನವೇ ಮುಕ್ತಿ ಮಾರ್ಗ ಎಂದವ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಧರ್ಮಕ್ಕೆ ಶರಣಾದವರನ್ನು ಕಾಪಾಡಿದವ ನೀ ಜ್ಞಾನಕ್ಕೆ ಶರಣಾದವರಿಗೆ ಬೆಳಕಾದ ರವಿತೇಜ ನೀ ಅಹಿಂಸೋ ಪರಮೋಧರ್ಮ ಎಂದರುಹಿದ ತಥಾಗತ ನೀ||

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಸಾಯಲು ಹೇಗೆ ಸಿದ್ಧವಾಗಿರಬೇಕೆಂದು ಕಲಿಸಿದ ನಿರ್ವಿಕಲ್ಪ ನೀ
ಸಂತೋತ್ಸಾಹದಿ ಬಾಳುವ ಮಾರ್ಗ ತೋರಿದ ಮಹಾತ್ಮ ನೀ
ಸಂಭಾವಿತರಂತೆ ಸೋಗು ಹಾಕುವವರ ಹುಟ್ಟಡಗಿಸಿದ ಸತ್ಯಮುನಿ ನೀ ||

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಭುವನದಲ್ಲಿ ಎಲ್ಲ ಇದ್ದೂ ಇಲ್ಲದಂತೆ ಬದುಕಿದವ ನೀ
ಸರ್ವಸಂಗಪರಿತ್ಯಾಗಿಯಾಗಿ ಸತ್ಯದರ್ಶನ ಮಾಡಿಸಿದ ಸಿದ್ಧಪುರುಷ ನೀ
ಸರ್ವ ದುಃಖ ನಾಶಕೆ ಅಷ್ಟಾಂಗ ಮಾರ್ಗ ಬೋಧಿಸಿ ಮಹಾಪರಿನಿರ್ವಾಣವಾದವ ನೀ||


ಮಹಾದೇವಿ ಪಾಟೀಲ..

Leave a Reply

Back To Top