ಹಾಣಾದಿ
ಕಪಿಲ ಪಿ.ಹುಮನಾಬಾದ
ಕೆಚ್ಚೆದೆಯ ಹೋರಾಟ “ಹಣಾದಿ”. ಹೌದು ಕೆಲವು ದಿನಗಳ ಹಿಂದೆ ಅಬ್ದುಲ್ ಹೈ (ಹೈ.ತೋ) ರವರ ಕಾವ್ಯಮನೆ ಪ್ರಕಾಶನದಲ್ಲಿ ಮುದ್ರಿತವಾಗಿ ಲೇಖಕರು ಮಿತ್ರರಾದ “ಕಪಿಲ್ ಹುಮನಾಬಾದಿ” ರವರ “ಹಣಾದಿ” ಕಿರು ಕಾದಂಬರಿ ಲೋಕಾರ್ಪಣೆ ಗೊಂಡು ಓದುಗರನ್ನು ತನ್ನತ್ತ ಸೆಳೆದಿದೆ ಅದರಲ್ಲಿ ನಾನು ಒಬ್ಬ. ಅತಿ ಚಿಕ್ಕ ವಯಸ್ಸಿನಲ್ಲಿ ಅನುಭವಿ ಲೇಖಕನಂತೆ ಅದ್ಭುತವಾಗಿ ಹೆಣೆದಿದ್ದಾರೆ.
ಬಾದಾಮು ಗಿಡದ ಸುತ್ತ ಕತೆ ಹೆಣೆದ ರೀತಿ ವಿಶೇಷ ಎನ್ನವಂತಿದೆ. ಅಪ್ಪನನ್ನು ನೋಡಲು ಹಳ್ಳಿಗೆ ಮರಳಿದ ಮಗನಿಗೆ ಕಂಡಿದ್ದು ವಿಚಿತ್ರವಾದ ಊರ ಚಿತ್ರಣ. ಒಂಟಿಯಾದ ಅವನ ಮನೆಯಲ್ಲಿ ಭೂತಕಾಲದ ಚಿತ್ರಣ ಬರೆಯಲು ಉಳಿದಿದ್ದು ಗುಬ್ಬಿ ಆಯಿ ಸಂದರ್ಭಕ್ಕನುಸಾರವಾಗಿ ಅವನ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ಸುತ್ತಲು ಮೋಡವಾದಾಗ ಮಳೆಸುರಿಸುವಂತಿದೆ. ತಲ್ಲಣಗೊಂಡ ಅವನ ಮನಸ್ಸು ಭಯದಲ್ಲೂ ಅಪ್ಪನನ್ನು ಕಾಣುವ ಹಂಬಲ ಎಳ್ಳಷ್ಟು ಕ್ಷೀಣಿಸದೆ ಗುಬ್ಬಿ ಆಯಿಯನ್ನು ಬೆಂಬಿಡದೆ ನೆಡೆದಿದ್ದು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಉತ್ತರ ಸಿಗದ ಅವನ ಪ್ರಶ್ನೆಗಳು ಹತಾಶನಾಗದೆ ಕುತುಹಲ ಕೆರಳಿಸುವಂತಿವೆ. ಬಾದಾಮು ಗಿಡವನ್ನು ಉಳಿಸಿಕೊಳ್ಳಲು ಅಂದರೆ ಪರೋಕ್ಷವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ರೀತಿ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿಗಾಗಿ ಇಡೀ ಊರನ್ನೆ ಎದುರು ಹಾಕಿಕೊಂಡು ನೆಡೆಸಿದ ಹೋರಾಟ ಓದುಗನ ಮನಸ್ಸಿನಲ್ಲಿ ಅಚ್ಚುವತ್ತಿದೆ. ಊರಲ್ಲಿ ಯಾವುದಾದರು ಹೆಣ ಹೂಳಿದರೆ ಮಾತ್ರ ಹೊಟ್ಟೆ ತುಂಬಾ ಊಟ ಇಲ್ಲವಾದರೆ ಅರೆಹೊಟ್ಟೆ ಊಟ ಮಾಡುವ ಕಂಠಿಯ ಜಾತಿಯನ್ನು ತಿರಸ್ಕರಿಸಿ ಬದುಕು ಮತ್ತು ವೃತ್ತಿಯನ್ನು ಗೌರವಿಸುವ ರೀತಿ, ಅದಕ್ಕೆ ಅವನ ಅಪ್ಪನ ಕಾಳಜಿ, ಹಾಗೂ ಬದುಕಿನ ಹೋರಾಟಕ್ಕೆ ಕಂಠಿ ನೀಡಿದ ಸಾಥ್ ಚೆನ್ನಾಗಿ ಹೆಣೆಯಲಾಗಿದೆ.
ಅಪ್ಪನ ಈ ಹೋರಾಟದಲ್ಲಿ ಜಾತಿ, ಧರ್ಮ, ದೇವರು ಮತ್ತು ಸಿರಿತನ ವಿರುದ್ಧ ಗಟ್ಟಿಯಾಗಿ ನಿಂತಿರುವುದು ಬದುಕು. ಸೊಗಸಾಗಿ ಹೆಣೆದ ಕಥೆಯಲ್ಲಿ ವಿಶೇಷವಾದ ಆಕರ್ಷಣೆಯಾಗಿದೆ ಸ್ಥಳೀಯ ಭಾಷೆ.
ಒಟ್ಟರೆಯಾಗಿ ಕಿರು ಕಾದಂಬರಿಯಲ್ಲಿ ಲೇಖಕರು ಸಮಾಜದಲ್ಲಿ ಬದುಕನ್ನು ಗಟ್ಟಿಗೊಳಿಸುವ ರೀತಿ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಹೆಣೆದಿರುವ ಹೋರಾಟದ ದಾರಿ ಓದುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೂ ವಿಶಾಲವಾದ ಸಮಾಜದಲ್ಲಿ ಹಣಾದಿಯಲ್ಲೂ (ಬಂಡಿ ಜಾಡಿನಂತ ಚಿಕ್ಕ ಹಾದಿಯಲ್ಲಿ) ಪ್ರಾಮಾಣಿಕವಾದ ಉತ್ತಮ ಬದುಕು ಕಟ್ಟಿ ಕೊಳ್ಳಬಹುದು ಮತ್ತು ಬದುಕು ನಿರಂತರ ಎನ್ನುವ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.
ಜೀವನದ ಮಹತ್ವ ತಿಳಿಸುವ ಹಾಗೂ ಸಮಾಜಕ್ಕೆ ಸಂದೇಶ ಸಾರುವ ಹೊಸ ಲೇಖಕರ ಹೊಸ ಹೊಸ ವಿಚಾರಗಳು ಹೊರ ಹೊಮ್ಮಲಿ ಎನ್ನುವುದು ಮತ್ತು ಬರಹದ ಮೂಲಕ ಸಮಾಜವನ್ನು ತಿದ್ದುವ ಕೆಲಸಗಳು ಸದಾ ಜಾರಿಯಲ್ಲಿರ ಬೇಕು ಎನ್ನುವುದು ಆಶಯ…
************************
ನಾಗರಾಜ ಮಸೂತಿ...