ಮಹಾದೇವಿ ಪಾಟಿಲರ ಲೇಖನ-ಅಪ್ಪ ನೀ ಹೇಗಿರಬೇಕು?

ಕಾವ್ಯ ಸಂಗಾತಿ

ಮಹಾದೇವಿ ಪಾಟಿಲ

ಅಪ್ಪ ನೀ ಹೇಗಿರಬೇಕು?

ಸ್ನೇಹಿತರೇ !! ಎಲ್ಲರೂ ಸಾಮಾನ್ಯವಾಗಿ ಅಮ್ಮನ ಕುರಿತು ಹೆಚ್ಚಾಗಿ  ಬರೆಯುತ್ತಾರೆ,ಮಾತನಾಡುತ್ತಾರೆ, ಹೇಳುತ್ತಾರೆ.ಆದರೆ ಇಂದು ನನಗೇಕೋ ಅಪ್ಪನ ಬಗ್ಗೆ ತುಸು ಚಿಂತನ ಮಂಥನ ಮಾಡಬೇಕು  ಎಂದು ಅನಿಸಿತು.ಅದಕ್ಕೆ ಈ ನನ್ನ ಈ ವಿಚಾರ ಲಹರಿ..
                    ಅಪ್ಪ ಎಂದರೆ ಅದ್ಭುತ, ಅಪ್ಪ ಎಂದರೆ ಆಸರೆ ,ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ಭರವಸೆ,ಅಪ್ಪ ಎಂದರೆ ಮನೆಯ ಮೊದಲ ಪ್ರಾಶಸ್ತ್ಯ.. ‌ಹೀಗಿರುವಾಗ ಅಪ್ಪಂದಿರು ಹೇಗೆ ಇರಬೇಕು? ಅಂತ ಕೊಂಚ ತಿಳಿಯಲೇಬೇಕು ..ಅಪ್ಪ ಒಬ್ಬ ಸರಿಯಾಗಿದ್ದರೆ ಸಾಕು ಆ ಸಂಸಾರ ಎಂತಹ ಅದ್ಭುತ ಸಾಧನೆಯನ್ನು ಮಾಡಿದ ಉದಾಹರಣೆಗಳು ಇವೆ.ಹಾಗೇ ಅಪ್ಪ ಒಬ್ಬನ ಬೇಜವಾಬ್ದಾರಿಯಿಂದ ಸಂಸಾರಗಳು ನರಕವಾಗಿರುವ ಸಾಕ್ಷಿಗಳು ಸಾಕಷ್ಟಿವೆ..
ಏಕೆಂದರೆ  ಒಳ್ಳೆಯ ಅಪ್ಪನಿಲ್ಲದ ಮಕ್ಕಳ ಬದುಕು ಉಪ್ಪಿಲ್ಲದ ಸಪ್ಪೆಯೂಟ ಸವಿದಂತೆ ..ಒಳ್ಳೆಯ ಅಪ್ಪ ಸಿಗೋದಕ್ಕೂ  ಮಕ್ಕಳು ಪುಣ್ಯ ಮಾಡಿ ಬರಬೇಕು..
     ಅಪ್ಪಂದಿರಲ್ಲಿ ನಾಲ್ಕುವಿಧದ ಅಪ್ಪಂದಿರು ಇದ್ದಾರೆ‌‌.   ಅವರಲ್ಲಿ ಮೊದಲನೇಯವರು ಜವಾಬ್ದಾರಿಯುತ  ಸಹೃದಯಿ ಅಪ್ಪಂದಿರು:ಇಂತಹ ತಾಯಿ ಹೃದಯದ ಅಪ್ಪಂದಿರಿಗೆ ಮಕ್ಕಳೇ  ಸರ್ವಸ್ವ.ಮಕ್ಕಳೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ.. ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ..ಅವರು ಕೆಳಿದ್ದೆಲ್ಲ ಕೊಡಿಸುತ್ತಾರೆ.ಅವರ ಸಂತೋಷಕ್ಕಾಗಿ ಎಂತಹ ಕಷ್ಟವನ್ನೂ ಎದುರಿಸುತ್ತಾರೆ. ಸದಾಕಾಲ ಮಕ್ಕಳ ಬಗ್ಗೆ ಕಾಳಜಿ ಮಾಡುತ್ತಾ ಇರುತ್ತಾರೆ..ಕೆಲವು ಅಪ್ಪಂದಿರು ತನ್ನ ಪತ್ನಿಯನ್ನು ಕಳೆದುಕೊಂಡರೂ ಮಕ್ಕಳಿಗಾಗಿ ಮರುಮದುವೆಯನ್ನೂ ಮಾಡಿಕೊಳ್ಳದೇ ತನ್ನ ಜೀವನವನ್ನೆಲ್ಲ ಮಕ್ಕಳಿಗಾಗಿಯೇ ತ್ಯಾಗ ಮಾಡುತ್ತಾರೆ..ಅದರಲ್ಲೂ ಹೆಚ್ಚಾಗಿ  ಅಪ್ಪಂದಿರು ಹೆಣ್ಣು ಮಕ್ಕಳನ್ನು ತುಂಬಾ ಪ್ರೀತಿ ಮಾಡ್ತಾರೆ… ಎನ್ನುವುದು ಸಮೀಕ್ಷೆಯಿಂದ ತಿಳಿದಿದೆ .ಅಂತಹ ಅಪ್ಪಂದಿರನ್ನು ಪಡೆದ ಆ ಮಕ್ಕಳು ಭಾಗ್ಯವಂತರೇ ನಿಜ…ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ..ಅಪ್ಪನ ಪ್ರೀತಿ ಜಗತ್ತನ್ನೇ ಗೆಲ್ಲುವಷ್ಟು ಶಕ್ತಿ ಕೊಡುತ್ತದೆ..ಅಪ್ಪನ ಭರವಸೆಯ ಆಸರೆಯೇ ಮಕ್ಕಳ ಬಾಳಿಗೆ ಬೆಳಕು… ಅಸಾದ್ಯವನ್ನೂ ಸಾಧ್ಯವಾಗಿಸುತ್ತದೆ..ಇಂತಹ ಅಪ್ಪಂದಿರಿಗೆ ನನ್ನದೊಂದು ಸಲಾಂ…
         ಎರಡನೇಯವರು ಬರೀ ಕನಸಿನ ಅಪ್ಪ :*  ಕೆಲವು ಮಕ್ಕಳು ಹುಟ್ಟುತ್ತಲೇ ಅಪ್ಪನನ್ನು ಕಳೆದುಕೊಂಡು ಅನಾಥರಾಗುತ್ತಾರೆ..ಅಪ್ಪ ಅಂದರೆ ಅವರಿಗೆ ಕೇವಲ ಕನಸು ಅಷ್ಟೇ.. ಅಮ್ಮನೇ ಅವರಿಗೆ ಅಪ್ಪ ಅಮ್ಮ ಎಲ್ಲ ಆಗಿ ಬೆಳೆಸಿರುತ್ತಾರೆ..ಅಂತಹ ಮಕ್ಕಳದು ಒಂಥರ ವೇದನೆ. ತನ್ನ ಸ್ನೇಹಿತರ ಅಪ್ಪಂದಿರನ್ನು ಕಂಡಾಗೆಲ್ಲಾ ನನಗೂ ಅಪ್ಪ ಇರಬೇಕಿತ್ತು ಎಂಬ ಅಪ್ಪನ ಅಗಲಿಕೆಯ ನೋವು  ಕಾಡದೇ ಇರದು. ಆದರೂ ಏನನ್ನೂ ತೊರಿಸಿಕೊಳ್ಳದೇ ತನ್ನ ಅಮ್ಮ ತಮ್ಮನ್ನು ಯಾವ ಕೊರತೆಯೂ ಬರದಂತೆ ಅಪ್ಪನ ಸ್ಥಾನದಲ್ಲಿ‌ ನಿಂತು ಜವಾಬ್ದಾರಿಯಿಂದ ಅಪ್ಪನ‌  ನೆನಪೂ ಬರದಂತೆ ಬೆಳೆಸುತ್ತಿರುವುದನ್ನು ಸ್ಮರಿಸಿಕೊಂಡು  ಅಪ್ಪನ‌ ಬಗ್ಗೆ ಇರುವ ತಮ್ಮ ಭಾವಗಳನ್ನು ಅಂತರಾಳದೊಳಗೇ ಅದುಮಿಕೊಂಡು ಬಿಡುತ್ತಾರೆ..ಕೇಳಿದರೆ ಎಲ್ಲಿ ಅಮ್ಮನಿಗೆ ಬೇಸರವಾಗಬಹುದು ಎಂದು ಯೋಚಿಸಿ ಏನೂ ಕೇಳದೆ ಸುಮ್ಮನಾಗಿ ಬಿಡುತ್ತಾರೆ..ಇವರೂ ತಮ್ಮ ಜೀವನದುದ್ದಕ್ಕೂ ಅಪ್ಪನನ್ನು ಮಿಸ್ ಮಾಡ್ಕೊತಾ ಇರ್ತಾರೆ .ಇದು ಒಂಥರ ವ್ಯಥೆಯೇ ಸರಿ..
               ಮೂರನೇಯವರು ಸದಾ ಹಣದ ಹಿಂದೆ ಹೋಗುವ ಸದಾ ದುಡಿಯುವ ಅಪ್ಪ: ಈ ರೀತಿಯ ಅಪ್ಪಂದಿರು ಬೆಳಿಗ್ಗೆ ಮಕ್ಕಳು ಹಾಸಿಗೆಯಲ್ಲಿ ಮಲಗಿರುವಾಗಲೇ ಮನೆ ಬಿಟ್ಟರೆ ರಾತ್ರಿ ಅವರು ಮಲಗಿದ ಮೇಲೆಯೇ ತಿರುಗಿ ಮನೆ ಸೇರುತ್ತಾರೆ ..ಮಕ್ಕಳು ಅಪ್ಪನ ಮುಖ ನೋಡವುದು ಒಂದು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ  ಮಾತ್ರ..ಅದೂ ಕಷ್ಟಸಾಧ್ಯ.ಇಂತಹ ಅಪ್ಪಂದಿರಿಗೆ ತಮ್ಮ ಕೆಲಸ, ಆಪೀಸು,ಸ್ನೇಹಿತರು,ಹಣ ಇಷ್ಟೇ ಪ್ರಪಂಚ ..ಆದರೂ ಇವರು ಮಕ್ಕಳಿಗೆ ಯಾವುದೇ ರೀತಿಯ ಕೊರತೆಗಳು ಬರದಂತೆ ನೋಡಿಕೊಳ್ಳುತ್ತಾರೆ…ಅದು ತಮ್ಮಲ್ಲಿರುವ ಹಣದಿಂದ …ಆದರೆ ಮಕ್ಕಳಿಗೆ ಹಣಕ್ಕಿಂತ ಅಪ್ಪನೊಡನೆ ಕಳೆಯುವ ಸಮಯವೇ ಇಷ್ಟ..ಆ ನೋವನ್ನು ಅವರು ತಾವು ಹೇಳಿಕೊಳ್ಳಲೂ ಆಗದೇ ಸುಮ್ಮನಿರಲೂ ಆಗದೇ ಒಳಗೊಳಗೆ ಅಪ್ಪನನ್ನು ಮಿಸ್ ಮಾಡ್ಕೋತಿರ್ತಾರೆ…ಅಪ್ಪ ಯಾವತ್ತಾದರೂ ಸಿಕ್ಕರೆ ದೊಡ್ಡ ಆಸ್ತಿ ಸಿಕ್ಕಂತೆ ಸಂತೊಷ ಪಡುತ್ತಾರೆ..ದುಡಿಯುವ ಅಪ್ಪಂದಿರೇ ದಯವಿಟ್ಟು ನಿಮ್ಮ ಮಕ್ಕಳಿಗೆ ದಿನಾಲೂ ಸ್ವಲ್ಪ ಸಮಯ ಮೀಸಲಾಗಿ ಇಡಿ..ನೀವು ದುಡಿಯುವುದೇನೇ ಇದ್ದರೂ ನಿಮ್ಮ ಮಕ್ಕಳಿಗಾಗಿಯೇ ಅಲ್ಲವೇ?ಚೆನ್ನಾಗಿ ದುಡಿದು ಅವರಿಗಾಗಿ ಒಳ್ಳೆಯ ಭವಿಷ್ಯ ಕೊಡಬೇಕು ನಿಜ ಆದರೆ ಅವರ ಸುಂದರ ಭಾವನೆಗಳಿಗೂ ಅಷ್ಟೇ ಬೆಲೆ ಕೊಡಬೇಕು…ಆದಷ್ಟು ಅವರೊಂದಿಗೆ ದಿನದಲ್ಲಿ ಸ್ವಲ್ಪ ಸಮಯವಾದರೂ ಪ್ರೀತಿಯಿಂದ ಮಾತನಾಡಿ..ಅವರ ಪಾಲಿಗೆ ಸೂಪರ್ ಹೀರೋ ಆಗ್ತಿರಾ..


ನಾಲ್ಕನೇಯವರು  ಬೇಜವಾಬ್ದಾರಿಯ  ಅಪ್ಪ:  ಈ ರೀತಿಯ ಅಪ್ಪಂದಿರು ಭೂಮಿಗೇ ಭಾರವಾಗಿ ಬದುಕುತ್ತಿದ್ದಾರೆ ..ತಮಗೆ ಮಕ್ಕಳು ಇದ್ದಾರೆ ಎನ್ನುವುದೇ ಅವರ ಸ್ಮರಣೆಯಲ್ಲಿ ಇರುವುದಿಲ್ಲ…ದಿನಬೆಳಗಾದರೆ ಸಾರಾಯಿ ಕುಡಿದುಬಂದು  ಮಕ್ಕಳಿಗೆ ಹೆಂಡತಿಗೆ ಬಾಯಿಗೆ ಬಂದಂತೆ ಬಯ್ಯುವುದು,ಹೊಡೆಯುವುದು, ಮಕ್ಕಳ ಮುಂದೆಯೇ ಅಸಹ್ಯವಾಗಿ ವರ್ತಿಸುವುದು, ಮಕ್ಕಳಿಂದ  ಯಾವಾಗಲೂ ಕೆಲಸ ಮಾಡಿಸಿ ತಾನು ರಾಜನಂತೆ ಆರಾಮವಾಗಿ ಇರುವುದು..ಪತ್ನಿಯ ಹಾಗೂ ಮಕ್ಕಳ ಯಾವುದೇ ರೀತಿಯ ಜವಾಬ್ದಾರಿ ತೆಗೆದುಕೊಳ್ಳದೇ ಸದಾಕಾಲ ಕೇವಲ  ತನ್ನ ಬಗ್ಗೆಮಾತ್ರ ಸ್ವಾರ್ಥಿಯಾಗಿ  ಯೋಚಿಸುವುದು,ಹೀಗೆ ದಿನ ಕಳೆಯುತ್ತಾರೆ.ಇಂತಹ ಗಂಡನನ್ನು ಪಡೆದ ತಾಯಿಯ ಬದುಕು ಕೂಡ ನರಕವೇ.ಒಂದು  ಕಡೆ ಗಂಡನ ಕಿರುಕುಳ, ಮತ್ತೊಂದು ಕಡೆ ಮಕ್ಕಳ ಭವಿಷ್ಯ .. ಸಮಾಜದ ಕೆಟ್ಟ ದೃಷ್ಟಿಯಿಂದ ತನ್ನನ್ನು ತಾನು ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗಾಗಿ ಸದಾ ಹೋರಾಟದ ಅಸಹಾಯಕತೆಯ ಬದುಕು ಅವಳದು‌‌‌‌.ನಿಜಕ್ಕೂ ಅಂತಹ ಪರಿಸ್ಥಿತಿ ಯಾರಿಗೂ ಬೇಡ.ಮಕ್ಕಳು ಒಳ್ಳೆಯ ವರಾದರೆ ಸರಿ ಇಲ್ಲವಾದರೆ ? ಕೆಲವು ಸಲ ಅಪ್ಪಂದಿರ ಪ್ರಭಾವ ಮಕ್ಕಳ ಮೇಲೆ ಬಿದ್ದು ಮಕ್ಕಳೂ ದಾರಿ ತಪ್ಪುವ ಸಾಧ್ಯತೆ ಇರುತ್ತದೆ.. ಅಪ್ಪಂದಿರು ತಾವು ಮದ್ಯಪಾನ ಮಾಡಲು ಬೇಕಾಗುವ ಹಣಕ್ಕಾಗಿ ಏನು ಕೆಟ್ಟ ಕೆಲಸ ಮಾಡಲೂ ಹೇಸುವುದಿಲ್ಲ ಕುಟುಂಬದ ಪ್ರಭಾವ ಮಕ್ಕಳ ಮುಗ್ಧ ಮನಸಿನ ಮೇಲೆ ಅಪಾರವಾದ ಪರಿಣಾಮ ಬೀರುವುದು..ಹೀಗೆ ಕೆಲವೊಮ್ಮೆ ಇಂತಹ ಅಪ್ಪನಿಗೆ ಮಕ್ಕಳಾಗಿ ಯಾಕಾದರೂ ಹುಟ್ಟಿದೆವೋ? ಎಂದು ಪಾಪ ಆ ಮುಗ್ಧ ಕಂದಮ್ಮಗಳು ಕೊರಗುತ್ತಾರೆ.‌ಅಮ್ಮ ಪಡುವ ಕಷ್ಟ ನೋಡಿ ಅಪ್ಪನ ಬಗೆಗಿನ ಅವರ ಕನಸುಗಳಿಗೆ ತಾವೇ ಬಾರ್ಡರ್ ಹಾಕಿಕೊಂಡು ಬಿಡುತ್ತಾರೆ..ಈ ಮುಗ್ಧ ಜೀವಗಳು ದೇವರಿಗೆ ತಮಗೇಕೆ ಇಂತಹ ಅಪ್ಪನನ್ನು ಕೊಟ್ಟೆ‌.ಎಂದು  ಒಳಗೊಳಗೆ ಕೊರಗುವುದರಂತ ಹೃದಯ ವಿದ್ರಾವಕ  ನೋವು ಮತ್ತೆ ಯಾರಿಗೂ ಬೇಡ ಎನಿಸುವುದು…ಎಷ್ಟೊ ಮಕ್ಕಳು ಅಪ್ಪನನ್ನು ಮನೆಗೆ  ಕರೆತರಲು ಬಾರ್ ಗಳಿಗೆ ಹೋಗಿ ಕುಡಿದು ಪ್ರಜ್ಞೆಯಿಲ್ಲದೇ ಬಿದ್ದ ಅಪ್ಪನನ್ನು ಹುಡುಕುತ್ತ ಬೀದಿ ಬೀದಿ ಅಲೆಯುತ್ತಾರೆ.ಎಷ್ಟು ನೋವಿನ ವಿಷಯ ಅಲ್ಲವೇ?ಏನು ಮಾಡುವುದು  ಎಲ್ಲ ಅವರವರ ಕರ್ಮ ಎನ್ನಬೇಕಷ್ಟೆ..!!
       ಸ್ನೇಹಿತರೇ ಎಲ್ಲರಿಗೂ ತಮ್ಮ ಅಪ್ಪ ಹೀಗೇ ಇರಬೇಕು, ನಮ್ಮನ್ನು ಹೀಗೇ ಕಾಳಜಿ ಮಾಡಬೇಕು, ನಮ್ಮ ಕುಟುಂಬವನ್ನು ಯಾವಾಗಲೂ ರಕ್ಷಣೆ ಮಾಡಬೇಕು ,ಅಪ್ಪ ಅಮ್ಮನ ಜೊತೆ ನಾವು ಸದಾ ಸಂತೋಷದಿಂದ  ಬದುಕಬೇಕು, ನಮಗೆಲ್ಲ ಹೊರಗಡೆ ತಿರುಗಾಡಲು ಕರೆದೊಯ್ಯಬೇಕು,ಬೇಕಾದ ಎಲ್ಲವನ್ನೂ ಅಪ್ಪನೇ ಕೊಡಿಸಬೇಕು,ತನ್ನೊಂದಿಗೆ ಆಟ ಆಡಬೇಕು,ಅಪ್ಪನೊಡನೆ ಕುಳಿತು ಪಾಪ್ ಕಾರ್ನ ತಿನ್ನುತ್ತಾ ಸಿನಿಮಾ ನೋಡಬೇಕು,ಅಪ್ಪ ಕೆಟ್ಟ ಜನರಿಂದ ನಮ್ಮನ್ನು ಕಾಪಾಡುವ ಸಾಹಸಿಯಾಗಿರಬೇಕು, ತನ್ನ ಸ್ನೇಹಿತರಿಗೆಲ್ಲ ತನ್ನ ಅಪ್ಪ ತನ್ನ ಸೂಪರ್ ಹೀರೋ ಅಂತ ಪರಿಚಯ ಮಾಡಿಸಬೇಕು..ಹೀಗೇ
ಏನೇನೋ ಆಸೆಗಳು ಕನಸುಗಳು  ಇರುತ್ತವೆ ..ಇವೆಲ್ಲ ಗುಣಗಳು ಇರುವ ಒಳ್ಳೆಯ ಅಪ್ಪ ಇದ್ದರೆ ಮಾತ್ರ  ಮಕ್ಕಳು ಸದಾ ಸುಖಿಗಳು, ಭಾಗ್ಯವಂತರು .ಅಪ್ಪ ಒಂದುವೇಳೆ ಕೆಟ್ಟವನಾಗಿದ್ದರೆ ಅಥವಾ ಬೇಜವಾಬ್ದಾರಿಯ ವ್ಯಕ್ತಿ ಆಗಿದ್ದರೆ, ಆ ಮಕ್ಕಳು ನಿಜಕ್ಕೂ ನತದೃಷ್ಟವಂತರು..ಅಪ್ಪನ ಆಸರೆಯಿಲ್ಲದ ಮಕ್ಕಳು ಅನುಭವಿಸುವ ನೋವು ಯಾರಿಗೂ ಬೇಡ..ಅಪ್ಪಂದಿರೇ ದಯವಿಟ್ಟು ಬದಲಾಗಿ ನಿಮ್ಮ ಕಂದಮ್ಮಗಳಿಗಾಗಿ ಅವರಿಷ್ಟಪಡುವ ಅಪ್ಪನಂತೆ ಬದುಕಿರಿ….ಅವರು ಹುಟ್ಟಿದ ಮೇಲೆಯೇ ನಿಮಗೆ ಅಪ್ಪನೆಂಬ ಶ್ರೇಷ್ಠ ಪದವಿ ದೊರಕಿದ್ದು..ಅದಕ್ಕೆ ಜವಾಬ್ದಾರಿಯುತರಾಗಿ ಬದುಕಿ ಆ ಪದವಿಗೆ ನ್ಯಾಯ ಒದಗಿಸಿಕೊಡಿ…ದಯವಿಟ್ಟು ಪ್ರೇಮಮಯಿ ಅಪ್ಪನಾಗಿ ಮಕ್ಕಳು ಮೆಚ್ಚುವ ಅಪ್ಪನಂತಾಗಿ ಆ ಮುಗ್ಧ ಮನಸುಗಳಿಗಾಗಿ ಬಾಳಿರಿ.ಇನ್ನಾದರೂ ಬದಲಾಗಿ.ಕಾಲಾಯ ತಸ್ಮೈ ನಮಃ..


      ಮಹಾದೇವಿ ಪಾಟಿಲ..

One thought on “ಮಹಾದೇವಿ ಪಾಟಿಲರ ಲೇಖನ-ಅಪ್ಪ ನೀ ಹೇಗಿರಬೇಕು?

Leave a Reply

Back To Top