ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಗಜಲ್
ಕೆಣಕಿ ಕಾಡುವ ಕಡು ಮೌನಕೆ ಮುತ್ತಂತ ಮಾತಾಗುವೆಯಾ ಗೆಳೆಯಾ
ಚಡಪಡಿಸುವ ನೋವುಗಳಿಗೆ ನೆಮ್ಮದಿಯ ನೆರಳಾಗುವೆಯಾ ಗೆಳೆಯಾ
ತಿರುತಿರುಗಿ ಬರುತಿವೆ ನಿನ್ನದೇ ನೆನಪುಗಳು ಮನದ ಪುಟಪುಟಗಳಲ್ಲಿ
ಸೆಟೆದು ನಿಲ್ಲುವ ಸ್ವರ್ಣ ಸ್ವಪ್ನಗಳಿಗೆ ಸಗ್ಗದ ಸಿರಿಯಾಗುವೆಯಾ ಗೆಳೆಯಾ
ನೀನಲ್ಲವೇ ಭವ್ಯತೆಯಲಿ ಮೆರೆವ ಬಾಳ ತತ್ವಗಳಿಗೆ ಗೆಲುವಿನ ದನಿಯು
ತುಮುಲಗಳ ತೆಕ್ಕೆಯಲಿ ಬಿದ್ದಂತ ತನುವಿಗೆ ತಂಪಾಗುವೆಯಾ ಗೆಳೆಯಾ
ಹವಣಿಸುತ್ತಿವೆ ನಿತ್ಯವೂ ಸಾರ್ಥಕ್ಯ ಕಾಣಲು ಸವೆದು ಹೋದ ಪಥಗಳು
ಛೇಡಿಸುತಲಿ ಸುರಿವ ಬಾಷ್ಪಕೆ ಆಸರೆಯ ಅಶ್ರುವಾಗುವೆಯಾ ಗೆಳೆಯಾ
ತೆರೆದ ಹೃದಯದಲಿ ಕತ್ತೆತ್ತಿ ಕಾಯುತಿದೆ ‘ಅರ್ಚನಾ’ಳ ಸ್ನೇಹದೊಲವು
ಬಡಬಡಿಸುವ ಭಾವನೆಗಳಿಗೆ ಭರವಸೆಯ ಬೆಳಕಾಗುವೆಯಾ ಗೆಳೆಯಾ