ಪ್ರಭಾ ಬೋರಗಾಂವಕರ ಕವಿತೆ-ಅರಳುವ ಹೂವುಗಳು..

ಕಾವ್ಯ ಸಂಗಾತಿ

ಪ್ರಭಾ ಬೋರಗಾಂವಕ

ಅರಳುವ ಹೂವುಗಳು.

ಹೆಣ್ಣು ದೇವತೆ
ಹೆಣ್ಣು ಗೃಹಿಣಿ
ಹೆಣ್ಣು ಅಬಲೆ
ಈ ಸಮಾಜದ ಕಣ್ಣಿಗೆ

ಅಂದು….
ಸೀತೆಯ ಮುಟ್ಟಿ
ತಲೆ ಕಳೆದುಕೊಂಡ ದಶಾನನ
ದ್ರೌಪದಿಯ ಕೆಣಕಿ
ಹತನಾದ ದುಶ್ಯಾಸನ

ಹೆಣ್ಣು ಮಣ್ಣು ಹೊನ್ನಿನ
ಸಂಗ ಬೇಡವೆಂದರು ಶರಣರು
ಹೆಣ್ಣು ತಾಯಿಯೆಂದು
ಪೂಜಿಸಿದರು ಪರಮಹಂಸರು

ಹೆಣ್ಣು ಒಲಿದರೆ ನಾರಿ
ಸುಖ ಸಂಸಾರಕ್ಕೆ ದಾರಿ
ಮುನಿದರೆ ಮಾರಿ
ಚಂಡಿ ಚಾಮುಂಡಿ
ಮಸನಕೆ ಹೆದ್ದಾರಿ

ಇಂದು..
ಭೋಗದ ಕಾಮದ ಗೊಂಬೆ
ಅರಳುವ ಮುನ್ನ ಕಾಮುಕರ ಕಣ್ಣಿಗೆ
ಸುಟ್ಟ ಕರಕಲು ಪುಷ್ಪ

ಇರಲಿ ಹದಿಹರೆಯ
ಮುದುಕಿಯೇ ಆಗಿರಲಿ
ಚಪಲ ಚಿತ್ತರು ವಿಕೃತ ಕಾಮಿಗಳು
‘ ದಾಮಿನಿಯ ‘ ಜೊತೆ ಆಡಿದವರು
ಬಲಾತ್ಕಾರ ಅತ್ಯಾಚಾರಗಳು
ಅವರಾಡುವ ಗೋಲಿ – ಚಿನ್ನಿದಾಂಡು
ಪ್ರೀತಿ – ಪ್ರೇಮ-ಕಾಮದ ಅರಿವಿರದ
ಹಲವು ಬಾಲೆಯರ ಬದುಕು
ಮಸಣದ ಹೂವು

ಅರಳಬೇಕು ಅರಳಿ ನಳನಳಿಸಿ
ತೊಳಗಿ ಬೆಳಗಬೇಕು ನಾವು
ಸವಾಲು ಹಾಕಿ ಸಮಾಜಕ್ಕೆ
ಅವರ ರುಂಡ ಚಂಡಾಡಿ
ದಾಮಿನಿಗೆ ದನಿಯಾಗಿ
ಅವಳಾತ್ಮದ ಶಾಂತಿಗಾಗಿ
ಬದುಕಬೇಕು ನಾವು
ಬದುಕಬೇಕು ನಾವು
ಈ ಜಗತ್ತೇ ನಮ್ಮದೆಂದು…


ಪ್ರಭಾ ಬೋರಗಾಂವಕರ.

One thought on “ಪ್ರಭಾ ಬೋರಗಾಂವಕರ ಕವಿತೆ-ಅರಳುವ ಹೂವುಗಳು..

  1. ಕವನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಧನ್ಯವಾದಗಳು

Leave a Reply

Back To Top