ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ.
ಎಲ್ಲರೂ ಈ ಪುಟ್ಟ ಹೃದಯಕೆ
ಒಂದಿಲ್ಲೊಂದು ಬರೆ ಎಳೆದವರೆ…..
ಮಾತಿನಿಂದ…ಕೃತಿಯಿಂದ…
ನೋಟದಿಂದ…ನಡೆಯಿಂದ…
ಮಾಯದ ಗಾಯಗಳ ನೀಡಿ
ಮಾಯವಾದವರೇ ಎಲ್ಲ…
ನೀನೂ ಒಂದು ಗಾಯ ನೀಡಿದೆ
ಉಡುಗೊರೆಯಾಗಿ…ಕಾಣಿಕೆಯಾಗಿ..
ಗಾಯಗಳ ನೋವು
ಹೊಸದೇನಲ್ಲ ಬಿಡು ನನಗೆ…
ಆದರೂ ಈ ಸಲ ನಿನ್ನ ಉಡುಗೊರೆಯ
ಭಾರ ಅತಿಯಾಗಿದೆ..ಆಳವಾಗಿದೆ…
ನೋವೂ ಕೂಡ ಬಹಳವೇ….
ನೋವ ನುಂಗಿ ನಲಿವ ಕಲೆ
ಕರಗತವಾಗಿದೆ ನನಗೀಗ…
ಕಣ್ಣ ಕಂಬನಿಯ ಸುರಿವ ಮಳೆಯಲಿ
ಮರೆಮಾಚುವದರಲ್ಲಿ ನಾನೀಗ ಪರಿಣಿತಳು…
ನೋವಿನೊಡನೆ ನೆಂಟಸ್ಥನ ಬೆಳೆಸಿರುವೆ..
ನೋವುಗಳನ್ನು ನೇವರಿಸಿ ಸಂತೈಸಿ ಎದೆಗಪ್ಪಿಕೊಳ್ಳುತ….
ನಗುವುದರಲಿ ನಿಸ್ಸೀಮಳು ನಾನೀಗ…..
ನೀನು ನೀಡಿದ ಗಾಯಕೆ ಬಹುಶಃ
ನೀನೇ ಮದ್ದೇನೋ….
ನೀ ನೀಡಿದ ಈ ಗಾಯವನು
ಮಾಯಲು ಬಿಡುವುದಿಲ್ಲ….
ಹಕ್ಕಳೆಯನ್ನು ಕೀಳುತ್ತಾ…
ಮುಲಾಮನ್ನು ಸವರದೇ….
ಮತ್ತೆ ಮತ್ತೆ ಗೀರುತ ಹಸಿಯಾಗಿರಿಸುವೆ..
ನಿನ್ನ ನೆನಪಾಗಿ ಜೋಪಾನವಾಗಿ
ಕಾಪಿಟ್ಟುಕೊಳ್ಳುವೆ…
ನನ್ನ ಜೊತೆಯಾಗಿ…ಎದೆಗೂಡಿನಲ್ಲಿ
ಉಸಿರಿರುವವರೆಗೆ ಹಸಿರಾಗಿ…
ನಿನ್ನ ನೆನಪಾಗಿ…..
ನೀ ಬರುವವರೆಗೆ..ಈ ಜೀವ ಇರುವವರೆಗೆ…
ಇಂದಿರಾ ಮೋಟೆಬೆನ್ನೂರ