ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಒಲವಲಿ ಮಿಂದೆದ್ದ ಮಾತಿನ ಮುತ್ತುಗಳ ಸುರಿದುಬಿಡು ಮೌನಿಯಾಗುವೆ ಗೆಳೆಯಾ
ಗೆಲುವಲಿ ನಿಂತಿದ್ದ ಸ್ವತ್ತಿನ ಪ್ರೀತಿ ತುತ್ತುಗಳ ಉಣಿಸಿಬಿಡು ಮೂಕಳಾಗುವೆ ಗೆಳೆಯಾ
ಜೀವನದಲಿ ಅರಿತಿದ್ದ ಜಗದ ಬಂಧಗಳ ಬೆಸೆದುಬಿಡು ಬೆರಗಾಗುವೆ ಗೆಳೆಯಾ
ತನುವಲಿ ಮಿಳಿತಿದ್ದ ಇಹದ ಆಸೆಗಳ ತಣಿಸಿಬಿಡು ಮೈಮರೆಯುವೆ ಗೆಳೆಯಾ
ಆತ್ಮದಲ್ಲಿ ಅವಿತಿದ್ದ ಅರುವಿನ ಸುಮಗಳ ಅರಳಿಸಿಬಿಡು ಪರಿಮಳಿಸುವೆ ಗೆಳೆಯಾ
ಉಸಿರಲಿ ಬರೆದಿದ್ದ ಜೀವನದ ಗಾಥೆಗಳ ಹೇಳಿಬಿಡು ದನ್ಯಳಾಗುವೆ ಗೆಳೆಯಾ
ಕೆಸರಲಿ ಹೂತಿದ್ದ ಬಿಳುಪಿನ ದಳಗಳ ಸ್ಪರ್ಶಿಸಿಬಿಡು ಪುಳಕಗೊಳ್ಳುವೆ ಗೆಳೆಯಾ
ಸ್ವಾರ್ಥದಲಿ ಜಿನುಗಿದ್ದ ಸೊಗಸಿನ ಬಯಕೆಗಳ ತೀರಿಸಿಬಿಡು ಮುಕ್ತಳಾಗುವೆ ಗೆಳೆಯಾ
ಹಸಿರಲಿ ಹುದುಗಿದ್ದ ಬೆಡಗಿನ ರಾಗಗಳ ನುಡಿಸಿಬಿಡು ತನ್ಮಯಳಾಗುವೆ ಗೆಳೆಯಾ
ಪ್ರೀತಿಯಲಿ ಮಿನುಗಿದ್ದ ಹೊಳಪಿನ ತಾರೆಗಳ ಮುತ್ತಿಸಿಬಿಡು ರೋಮಾಂಚನಳಾಗುವೆ ಗೆಳೆಯಾ
ಹೆಜ್ಜೆಯಲಿ ಘಲ್ಲೆಂದ ಅನುನ ಹೃದಯದ ರಿಂಗಣಗಳ ರಂಗೇರಿಸಿಬಿಡು ಪರವಶಳಾಗುವೆ ಗೆಳೆಯಾ
ಆಂತರ್ಯದಲಿ ಅದುಮಿದ್ದ ಕಾವಿನ ತುಡಿತಗಳ ಸಂತೈಸಿಬಿಡು ತೃಪ್ತಳಾಗುವೆ ಗೆಳೆಯಾ
ಡಾ ಅನ್ನಪೂರ್ಣ ಹಿರೇಮಠ
Superb
ಮನ ಬಿಚ್ಚಿ ಪದಪುಂಜ ಮೇಳೈಸಿ, ಭಾವನೆಗಳೆಂಬ ಹೊನಲ ಹರಿಸಿ ರಚಿಸಿದ ಕಾವ್ಯ ಮನ ಮುಟ್ಟಿತು.
ವಿದ್ಯಾ ನಾಡಿಗೇರ