ಮೇ-ದಿನದ ವಿಶೇಷ
ಆಶಾ ಯಮಕನಮರಡಿ
ಕಾರ್ಮಿಕ
ಹುಟ್ಟಿಬಂದ ಮೇಲೆ ಈ ಜಗದೊಳಗೆ
ದುಡಿಯ ಬೇಕಣ್ಣಾ ಹೊಟ್ಟೆ ಹೊರೆಯಲು
ಬೆವರ ಸುರಿಸಿ ಮಣ್ಣಲಿ ಅನ್ನ ಬೆಳೆಯಲು
ತನ್ನ ತುತ್ತನ್ನು ತಾ ದುಡಿದು ಉಣ್ಣಲು
ಯಾರದೋ ತೊತ್ತು ತಾನೆಂದು ಬಗೆಯದಿರಿ
ಎಲ್ಲರಿಗೂ ಒಬ್ಬನೆ ಮಾಲಿಕ ಆ ದೇವ ಧನಿಕ
ಅವ ಹಂಚಿದಾ ಕೆಲಸ ಮಾಡುವನು ಕಾರ್ಮಿಕ
ದೇವರಾಜ್ಞೆಯನು ಪರಿಪಾಲಿಸುವ ನಿಜ ಭಕ್ತ
ಎಲ್ಲ ತನ್ನದೆಂದು ಜಂಭದಲಿ ಮೆರೆಯದಿರು
ನಿನಗೆ ಕೊಟ್ಟಾತನಾತ ಕಾಣದಾ ಕಾರಣಿಕ
ಬೆಲೆ ಕಟ್ಟಲಾಗದಾ ಗಾಳಿ ಮಳೆ ಮಣ್ಣಿಗೆ
ಒಡೆಯ ನೀನೆಂದರೆ ನಗುವನಾ ದೇವನು
ಜಡಮತಿಯ ಮನುಜ ಅರಿತು ನೋಡು
ಕೊಟ್ಟ ದೈವವ ನೆನೆದು ಗೆಲುವಾಗಿರು
ಪಡೆದುದೆಲ್ಲವನು ಬಿಡಬೇಕು ಇಲ್ಲಿಯೆ
ಕಡೆತನಕ ನೀನೊಬ್ಬ ದುಡಿವ ಕಾರ್ಮಿಕ
ಆಶಾ ಯಮಕನಮರಡಿ