ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಈ ದಿನಾಂತ ಸಮಯದಲೀ…

ಮತ್ತದೇ ಬೇಸರ
ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ..
ಸಂಧ್ಯೆಯ ಪ್ರಾರ್ಥನಾ ಗೀತೆಯೇ ಇದು ಎನ್ನುವಷ್ಟರಮಟ್ಟಿಗೆ ದಿನಾ ಗುನುಗಿಕೊಳ್ಳುತ್ತೇನಲ್ಲ ನೀನಿಲ್ಲದಾಗೆಲ್ಲಾ. ಒಂಥರಾ ಮಂಕುಕವಿದಂಥ ವಿಭ್ರಾಂತ ಸ್ಥಿತಿ ಆ ಮುಸ್ಸಂಜೆಗಳಲ್ಲಿ. ತುಂಬಾ ಬೇಕೆನಿಸುವುದು ನಿನ್ನೊಡನೆ ಮಾತುಗಳು. ಏಕಾಂತವೆಂದರೆ ನನಗೇನೋ ಇಷ್ಟವೇ, ಆದರೆ ಸಂಜೆಗಳಲ್ಲಲ್ಲ. ಕಲ್ಲು, ಮಣ್ಣು, ಮುಳ್ಳು ಏನೇ ಇರಲಿ ಎಲ್ಲವೂ ಚಿನ್ನದಂತೆ ಹೊಳೆಯುವ ಈ ಸಮಯದಲ್ಲೂ, ಸುಂದರ ಕೆಂಪು, ಕೇಸರಿ, ಹಳದಿ ರಂಗಿನಲ್ಲೂ ಏನೋ ಕೊರತೆ. ಹಸಿರು ತೋಟವೂ ನೀರಸ, ನೀರವತೆ.
ಕಣ್ಣನೇ ದಣಿಸುವ ಈ
ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ
ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆ
ಯಿಡುತಿರುವೀ ಖಗಗಾನ
ಚಿನ್ನ ನೀನಿಲ್ಲದೇ

ಬಿಮ್ಮೆನ್ನುತಿದೆ ರಮ್ಯೋದ್ಯಾನ..

ಜಬ್ ದೀಪ್ ಜಲೇ ಆನಾ
ಜಬ್ ಶಾಮ್ ಢಲೆ ಆನಾ
ಸಂಕೇತ್ ಮಿಲನ್ ಕಾ ಭೂಲ್ ನ ಜಾನಾ.
.
ಅಂದು ನಾವಿಬ್ಬರೂ ಮೊದಲು ಭೇಟಿಯಾದ ಸಮಯವಲ್ಲವೇ ಅದು, ದೀಪ ಹಚ್ಚುವ ಸಮಯ, ಗೋಧೂಳಿ ಮುಹೂರ್ತ, ಸಂಜೆ ಕೆಂಪಾಗುವ ಕಾಲ. ಆಮೇಲೆ ಪ್ರತಿದಿನ ನದಿತೀರದಲ್ಲಿ ನೋಡುತ್ತಿದ್ದೆವು. ತಾರೆಗಳು ಕಣ್ಣು ಮಿಟುಕಿಸಿ ನಕ್ಕಾಗ ವಿದಾಯ ಹೇಳುತ್ತಿದ್ದೆವು ಮತ್ತೆ ಸಿಗುವ ನಿರೀಕ್ಷೆಯಲ್ಲಿ.
ನಿತ್ ಸಾಂಜ್ ಸವೇರೇ ಮಿಲ್ತೇಹೆ
ಉನ್ಹೆ ದೇಖ್ ಕೆ ತಾರೆ ಖಿಲ್ತೇಹೆ
ಲೇತೇಹೆ ವಿದಾ ಏಕ್ ದುಜೇಸೆ
ಕೆಹೆತೇಹೆ ಚಲೇ ಆನಾ..

ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿದೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ..

ಬೆಳಗಿನಿಂದ ಸಂಜೆಯವರೆಗೆ ಹೇಗೋ ಸಮಯ ಹೋಗುತ್ತದೆ. ಈ ಮುಸ್ಸಂಜೆಯದೇ ಕಷ್ಟ. ಸಂಗಾತಿಯ ಸಲ್ಲಾಪವಿಲ್ಲದೆ, ಪ್ರೇಮದ ಆಲಾಪವಿಲ್ಲದೆ ಮೌನ ಆವರಿಸಿ ಕೊಲ್ಲುವ ಸಮಯ. ಒಂದೊಂದು ಕ್ಷಣವೂ ಯುಗವಾದಂತೆ. ನೆನಪುಗಳೆಲ್ಲ ಹೂವಾದಂತೆ. ಮೈಯೆಲ್ಲ ಮುಳ್ಳಾದಂತೆ. ನಕ್ಷತ್ರಗಳು ಬೆಂಕಿಯಾದಂತೆ. ಜೀವ ಕಸಿಯಾದಂತೆ. ಗಾಯ ಹಸಿಯಾದಂತೆ. ಭಾವ ಅಸುನೀಗಿದಂತೆ..

t.


ಈ ಸಂಜೆ ಯಾಕಾಗಿದೆ ನೀನಿಲ್ಲದೇ
ಈ ಸಂತೆ ಸಾಕಾಗಿದೆ ನೀನಿಲ್ಲದೇ
ಏಕಾಂತವೆ ಆಲಾಪವು
ಏಕಾಂಗಿಯಾ ಸಲ್ಲಾಪವು
ಈ ಮೌನ ಬಿಸಿಯಾಗಿದೆ…

ಪಾಥಿ ಕಿ ಜಾಲಿ ಸೆ
ಝಾಕ್ ರಹಿ ಥಿ ಕಲಿಯಾ
ಗಂಧ್ ಭರಿ ಗುನ್ ಗುನ್ ಮೆ
ಮಗನ್ ಹುಯಿ ಥಿ ಕಲಿಯಾ
ಇತನೆ ಮೆ ತಿಮಿರ್ ಧಸ
ಸಪ್ನೀಲೆ ನೈನೋಂಮೆ
ಕಲಿಯೋಂಕೆ ಆಸೂಂಕಾ

ಕೋಯಿ ನಹಿ ಸಾಥಿ..
ಎಲೆಮರೆಯಿಂದ ಇಣುಕುತ್ತ, ಸುಗಂಧಭರಿತ ಗುನುಗುವಿಕೆಯಲ್ಲೇ ಮೈಮರೆತಿತ್ತು ಆ ಮುದ್ದು ಮೊಗ್ಗು. ಅದೇಕೆ ಹಾಗಾಯಿತೋ, ಆ ಕನಸು ತುಂಬಿದ ಕಣ್ಣಿಗೆ ಕಗ್ಗತ್ತಲೇ ಮುತ್ತಿಬಿಟ್ಟಿತು. ಮತ್ತಿನ್ನು ಆ ಮೊಗ್ಗಿನ ಕಂಗಳಿಗೆ ಬರಿಯ ಕಣ್ಣೀರೇ ಉಳಿಯಿತು, ಕಂಬನಿಯೂ ಏಕಾಂಗಿಯಾಗಿ ಹೋಯಿತು. ಆಕಾಶದಲ್ಲಿ ಸಂಜೆ ಇಳಿದುಹೋಯಿತು. ನಾನಿಲ್ಲಿ ಏಕಾಂಗಿಯಾಗಿ ಉಳಿದುಬಿಟ್ಟೆ..
ಸಾಂಜ್ ಢಲೆ ಗಗನ್ ತಲೆ
ಹಮ್ ಕಿತನೆ ಏಕಾಕಿ..

ಕಂಪಿನೆಸಳು ತೆರೆಯದಿರಲು
ಬರದೆ ಬನಕೆ ಬೇಸರ
ಕೂಡಿ ಶಾಮ ನಗದೆ ಇರಲು
ಬರದೆ ಮನಕೆ ಕಾತರ..

ಗಂಧಭರಿತ ಮೊಗ್ಗಿನ ಎಸಳು ತೆರೆದು ಹೂವಾಗಿ ಅರಳದಿದ್ದರೆ ಆ ಕಾಡಿಗೇ ಬೇಸರವಾಗದಿರಲು ಸಾಧ್ಯವಾ? ಹಾಗೇ ಶಾಮ ನನ್ನೊಂದಿಗೆ ಆಡಿ, ಹಾಡಿ, ನಕ್ಕು, ನಲಿಯದೇ ಇದ್ದರೆ ನನ್ನ ಮನಸ್ಸಿಗೆ ಉತ್ಸಾಹ, ಉಲ್ಲಾಸ ಮೂಡಲು ಸಾಧ್ಯವಾ? ಎಲ್ಲಿರುವನೋ ಅವ! ಈ ಸುಂದರ ಸಂಜೆಯಲ್ಲಿ ಅವನಿಲ್ಲ. ಆ ನೀಲಿ ಆಗಸದಲ್ಲಿ ಬರೀ ಮಂಜುಮಂಜು, ಬಣ್ಣಗಳಿಲ್ಲ. ಅವನೊಲಿದರೆ ಮಾತ್ರವೇ ತಾನೇ ಹೂರಾಶಿಯೂ, ತಾರೆಗಳಿಂದ ಹೊಳೆವ

ಮಂದಿರವೂ ಮನವೆಲ್ಲಾ.
ನಲ್ಲನಿರದ ಸಂಜೆಯಿಂದು
ಮಂಜುಕವಿದ ಅಂಬರ
ಶಾಮನೊಲಿದ ಕುಸುಮಕುಂಜ
ತಾರೆ ನಲಿವ ಮಂದಿರ..

ಜಿಸ್ ರಾಹ್ ಸೆ ತುಮ್ ಆನೆಕೋ ಥೆ
ಉಸ್ಕೆ ನಿಶಾ ಭಿ ಮಿಟನೆ ಲಗೆ
ಆಯೆ ನ ತುಮ್ ಸೌ ಸೌ ದಫಾ
ಆಯೆ ಗಯೆ ಮೌಸಮ್..

ನೀ ಯಾವ ದಾರಿಯಲ್ಲಿ ಬರಬೇಕಿತ್ತೋ ಅಲ್ಲಿ ನಾನು ಅದ್ಯಾವಾಗಲಿಂದಲೋ ಕಾಯುತ್ತಲಿದ್ದೆ. ಈಗ ನೋಡಿದರೆ ಆ ದಾರಿ ಅಲ್ಲಿತ್ತೆಂಬ ಕುರುಹೂ ಕಾಣದಾಗುತ್ತಿದೆ. ನೂರಾರು ಬಾರಿ ಋತುಗಳು ಬದಲಾಗುತ್ತಲೇ ಹೋಗುತ್ತಿವೆ. ಆದರೆ ನೀನು ಮಾತ್ರ ನೂರು ಸಲವೂ ಇತ್ತ ಬಾರದೇ ಹೋದೆ. ತಂಗಾಳಿ ಬೀಸಿದಾಗ, ಚಿಗುರೆಲೆಯು ಮಧುರ ನಾದ ಹೊಮ್ಮಿಸಿದಾಗ, ಆ ಸದ್ದಿಗೆ, ಆ ತಂಪಿಗೆ ನಾನು ಅಚ್ಚರಿಗೊಳ್ಳುವೆ. ಈ ಸಂಜೆಯ ಕಡುವಿರಹದಲ್ಲಿ ನಿನ್ನ ಅಗಲಿಕೆಯ ನೋವಿನಲ್ಲಿ ಬೆಚ್ಚಿಬೀಳುವೆ..


ಪತ್ತೆ ಕಹಿ ಖಡಕೆ ಹವಾ
ಆಯಿ ತೋ ಚೌಕೇ ಹಮ್
ಯೆ ಶಾಮ್ ಕಿ ತನಹಾಯಿಯಾ

ಏಸೇ ಮೇ ತೇರಾ ಗಮ್..

ನೀನು ದೂರವೇ ಉಳಿಯುತ್ತೀಯ. ಅಲ್ಲಿಂದಲೇ ಮುಗುಳ್ನಗುತ್ತೀಯ. ವಿಷವನ್ನು ಕುಡಿದು ನಗುನಗುತ್ತಿರುವಂತೆ ಭಾಸವಾಗುತ್ತೀಯ. ಈ ನಶೆಯ ಸಂಜೆಯೇ ಒಂಥರಾ ಹೀಗಿದೆ. ನನ್ನ ಪ್ರಜ್ಞೆಯಿಂದ ನನ್ನನ್ನೇ ದೂರವಾಗಿಸುತ್ತಿರುವಂತಿದೆ. ದೂರವೇ ಉಳಿಯಬೇಕೆಂದರೂ ನನ್ನನ್ನು ಮತ್ತೆ ಮತ್ತೆ ನಿನ್ನತ್ತಲೇ ಎಳೆಯುತ್ತಿದೆ, ಸೆಳೆಯುತ್ತಿದೆ..


ಯೆ ಶಾಮ್ ಮಸ್ತಾನಿ
ಮದ್ಹೋಶ್ ಕಿಯೆ ಜಾಯೆ
ಮುಝೆ ಡೋರ್‌ ಕೋಯಿ ಖೀಚೆ
ತೇರಿ ಓರ್ ಲಿಯೆ ಜಾಯೆ…


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

One thought on “

  1. ಸುಂದರ ಭಾವ ಏಕಾಂತದ ನೋವಿನ ಛಾಯೆಯ ಪ್ರತಿಬಿಂಬ

Leave a Reply

Back To Top