ಮೇ-ದಿನದ ವಿಶೇಷ

ಶ್ರೀವಲ್ಲಿ ಮಂಜುನಾಥ

ಬಲಿಪಶುಗಳು

ಕಾಯಕವೇ ಕೈಲಾಸವೆಂಬ
ಶರಣರ ನುಡಿಯನು
ಅಕ್ಷರಶಃ ಕಾರ್ಯರೂಪಕೆ
ತಂದಂತಹ ವರ್ಗವಿದುವೇ
ಶ್ರಮಿಕ ಕಾರ್ಮಿಕರದು !

ಸಂಘಟನೆಯ ಕೊರತೆ,
ರಾಜಕೀಯ ಕೈವಾಡ,
ನಾಯಕರ ಸ್ವಹಿತಾಸಕ್ತಿ
ಇವುಗಳೆಲ್ಲ ಕಾರ್ಮಿಕರ
ಕತ್ತು ಹಿಸುಕುತ್ತಿವೆ!

ಅತಿ ಕಡಿಮೆ ವೇತನಕೆ
ಅನಿಯಮಿತವಾಗಿ,
ಅಪಾಯಕಾರಿ ಸ್ಥಳದಿ,
ಅಪಘಾತಗಳಿಗಿವರು
ಬಲಿಯಾಗುತಲಿದ್ದಾರೆ!

ಸಾಮಾಜಿಕ ಭದ್ರತೆ,
ಕಲ್ಯಾಣಾಭಿವೃದ್ಧಿಗಳೆಲ್ಲಾ
ಕಾಗದದ ಮೇಲಿದ್ದು
ಕಾರ್ಮಿಕನ ಪಾಲಿಗದು
ಗಗನಕುಸುಮಗಳಾಗಿವೆ!

ಉದ್ಯಮಗಳಲಿಂದು
ಮಹಿಳೆಯರನುಭವಿಸುತಿಹ
ಲೈಂಗಿಕ ಕಿರುಕುಳಗಳಿಗೆ
ಕೊನೆಯಿಲ್ಲದೆ, ನಿತ್ಯವೂ
ನೋಯುತಿದ್ದಾರವರು!

ಅತಂತ್ರ ಸ್ಥಿತಿಯಲಿ,
ಶೋಷಣೆಯ ನಡುವಲಿ,
ಅಸುರಕ್ಷಿತ ವಾತಾವರಣದಿ
ಕಾರ್ಮಿಕ ವರ್ಗದವರು
ಹೋರಾಡುತ್ತಿದ್ದಾರೆ !

ಒದಗಿಸೋಣ ಕಾರ್ಮಿಕರ
ಕೆಲಸಕ್ಕೆ ತಕ್ಕ ವೇತನ,
ಸುರಕ್ಷಿತ ಕಾರ್ಯಕ್ಷೇತ್ರ,
ದುಡಿಯಲಾತ್ಮಗೌರವದಿ,
ಪೂರಕ ವಾತಾವರಣ!

—————–[

ಶ್ರೀವಲ್ಲಿ ಮಂಜುನಾಥ

Leave a Reply

Back To Top