ಮೇ-ದಿನದ ವಿಶೇಷ

ಇಂದಿರಾ ಮೋಟೆಬೆನ್ನೂರ.

ಶ್ರಮಿಕ ಕಾರ್ಮಿಕ

ಹೊತ್ತು ಗೊತ್ತಿಲ್ಲದ
ಎತ್ತಿನಂತಹ ದುಡಿತ…
ತುತ್ತು ಅನ್ನಕ್ಕಾಗಿ
ಬಾಳೋ ಜೀವ ತುಡಿತ…

ಹರಿಸುವೆವು ಪ್ರತಿನಿತ್ಯ
ಹಂಡೆಗಟ್ಟಲೇ ಬೆವರು…
ಬರೀ ಬೆವರಲ್ಲವಿದು ಅಣ್ಣ
ನಮ್ಮೊಡಲ ಬೆಂಕಿಯ ಪನ್ನೀರು…

ನಮ್ಮದಿದು ನಿತ್ಯ ಗೋಳು
ಸಾಗುತಿದೆ ಹೇಗೋ ಬಾಳು
ದುಡಿಮೆಯೇ ನಿತ್ಯ ಮಂತ್ರ..
ಮಿಡಿವತನಕ ಹೃದಯ ಯಂತ್ರ….

ಇಂದಿಲ್ಲಿ ಮತ್ತೆಲ್ಲೋ ನಾಳೆಗೆ
ಮುಗಿಯದು ನಮ್ಮಈ ಪಯಣ….
ಭೂಮಿಯ ಜೊತೆ ಜೊತೆಗೆ
ನಮ್ಮದೂ ನಿತ್ಯ ಪರಿಭ್ರಮಣ….

ನೂಲುತಿಹೆವು ನಿತ್ಯ ಸತ್ಯ
ದುಡಿಮೆಯ ನೂಲು…
ಹೊಟ್ಟೆ ಹಸಿವಿಗೆ ತೊಡಿಸೆ
ಅನ್ನದಂಗಿ ನಗುತ ನಾವು….

ನಮಗಿಲ್ಲ ನಮ್ಮದೆನ್ನುವ ಒಂದೂರು
ಕಟ್ಟಿದ ಮನೆಗಳೋ ನೂರಾರು…
ತಲೆ ಮೇಲೊಂದಿಲ್ಲ ನಮ್ಮ ಸೂರು..
ತುತ್ತಿಗೆ ಕಾಯುತಿಹ ಜೀವ ಆರು…

ಬೆನ್ನು ಬಾಗಿ ರಕ್ತ ಬಸಿದರೂ
ಭುವಿಯೇ ಎತ್ತಿ ಎಸೆದರೂ
ಹಾರೆ ಪಿಕಾಸೆಗಳನೆತ್ತಿ ನಾವು
ಹೊರಟೆವು ಮತ್ತೆ..
ಛಲ ಬಿಡದ ತ್ರಿವಿಕ್ರಮನಂತೆ..


ಇಂದಿರಾ ಮೋಟೆಬೆನ್ನೂರ

Leave a Reply

Back To Top