ಅರ್ಚನಾ ಯಳಬೇರು ಹೊಸ ಗಜಲ್

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಅಂಬರದ ತುಂಬೆಲ್ಲಾ ಚಿತ್ತಾರ ಬರೆವ ಚುಕ್ಕಿಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು
ಅಂಬುಧಿಯ ನಡುವೆ ಚೆಲ್ಲಾಟ ಆಡುವ ಅಲೆಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು

ಚಣ ಚಣಕೂ ಬಯಸುತಿದೆ ಹಿತ ಸಾಂಗತ್ಯವನು ತುಡಿವ ಭಾವವು ಮಿಡಿವ ಹೃದಯದೊಳು ಸದಾ
ಮಧುರ ನಾದವನು ಹೊಮ್ಮಿಸುವ ಸಪ್ತ ಸ್ವರಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು

ಮೌನದಲಿ ನೀಡುತಿದೆ ದಿವ್ಯಾನುಭೂತಿಯನು ಸತ್ಪ್ರೇಮದ ಸಂಪನ್ನತೆಯಲಿ ಬೆಸೆದ ಒಲವಿನ ನಂಟು
ಹಸನು ಲಾಲಿತ್ಯದಲಿ ಹದಗೊಂಡ ಅಭೀಪ್ಸೆಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು

ಪಾವನಗೊಂಡಿವೆ ಬಿರಿದ ಪದಪುಷ್ಪಗಳು ಅನುದಿನವು ಕಾವ್ಯ ರಸಧಾರೆಯಲಿ ನಿನ್ನನೇ ಅರ್ಚಿಸುತ
ಜೋತ್ಸ್ನದ ಲಾವಣ್ಯವನು ಹೆಚ್ಚಿಸುವ ಕಿರಣಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು

ಒಳಗಣ್ಣು ತೆರೆದು ನೋಡು ಅರ್ಚನಾ ಮರುಗುತಲಿ ಮಲಗಿದೆ ಮನಸು ಒಲವ ಚಾದರವ ಹೊದ್ದು
ಅನುರಾಗದ ಆಲಾಪವನು ಆಲಿಸುವ ಕರ್ಣಗಳೇ ಒಮ್ಮೆ ಹರಸಿ ಪ್ರೀತಿಯೇ ನೀ ಚಿರಾಯುವಾಗೆಂದು


Leave a Reply

Back To Top