ಸಂಜೆ ಹೊತ್ತಿಗೆ ಉಂಟಾಗುವ ಏಕಾಂತ

ಲಹರಿ

ಮಾಲಇ ಶಶಿಧರ್

ಸಂಜೆ ಹೊತ್ತಿಗೆ ಉಂಟಾಗುವ ಏಕಾಂತ

ನನಗಾಗ ಆರೆಳು ವರ್ಷ. ಮಧ್ಯಾಹ್ನ ಆಟವಾಡಿ ಮನೆಗೆ ಬಂದ ನನ್ನ ಮೈಗಂಟಿದ್ದ ಮಣ್ಣು ತೊಳೆಯಲು ಅಮ್ಮ ಸ್ನಾನ ಮಾಡಿಸಿ ಕಿಟಕಿಯ ಪಕ್ಕದಲ್ಲಿದ್ದ ಮೇಜಿನ ಮೇಲೆ ನಿಲ್ಲಿಸಿ ಮೈಯೊರಿಸುತ್ತಿದ್ದಳು. ಮನೆಯ ಮುಂದಿನ ಬಾವಿಯನ್ನೇ ದಿಟ್ಟಿಸುತ್ತಾ ನಿಲ್ಲುವ ಅಭ್ಯಾಸವಿದ್ದ ನಾನು ಅಂದು ಅದನ್ನೇ ಮಾಡುತ್ತಿದ್ದೆ. ಬಾವಿಯ ರಾಟೆಗೆ ಸುತ್ತಿಕೊಂಡು ಹೊರಳಾಡುತ್ತಿದ್ದ ಹಾವಿನ ಹೊಳಪು ಅಂದು ನನ್ನೆದೆಯಲ್ಲಿ ಮರೆಯಲಾಗದ ದಿಗಿಲು ಹುಟ್ಟಿಸಿತ್ತು. ಯಾರೂ ಇಲ್ಲವೆಂದು ನಾವು ಮಾಡುವ ತಪ್ಪನ್ನು ದೇವರು ನೋಡುತ್ತಿರುತ್ತಾನೆ ಅವನು ಎಚ್ಚರಿಕೆ ನೀಡಲು ತನ್ನ ಕತ್ತಲ್ಲಿರುವ ಹಾವನ್ನು ಕಳಿಸುತ್ತಾನೆ ಕನಸಲ್ಲೊ ದಾರಿಯಲ್ಲೋ ಹಾವು ಕಾಣಿಸಿಕೊಂಡರೆ ನಾವೇನೋ ತಪ್ಪು ಮಾಡಿದ್ದೇವೆ ಎಂದರ್ಥ ಎಂದು ಹೇಳುತ್ತಿದ್ದ ಅಮ್ಮನ ಮಾತು ಅಂದು ಆಟಕ್ಕೆ ಹೋಗುವಾಗ ಅಮ್ಮನ ಅಕ್ಕಿ ಡಬ್ಬದಿಂದ ಐವತ್ತು ಪೈಸೆ ಕದ್ದಿದ್ದ ನನ್ನ ಹೊಟ್ಟೆಯೊಳಗೆ ಯಾರೊ ಕೈ ಹಾಕಿ ಕಿವುಚಿದಂತಾಗಿ ಕಿಟಾರನೆ ಕಿರುಚುತ್ತಾ ಅಮ್ಮನನ್ನು ಬಿಗಿದಪ್ಪಿದೆ. ಹೇಳಿಕೊಳ್ಳಲಾಗದೆ ಒಳಗೆ ಕೊರಗುತ್ತಿದ್ದ ನನಗೆ ಸೂರ್ಯ ಸರಿದು ಬಾನಲ್ಲಿ ವೇಗವಾಗಿ ಹಾರುತ್ತಿದ್ದ ಬೆಳ್ಳಕ್ಕಿ ಹಿಂಡು ನನ್ನ ನೋಡಿ ಚೇಡಿಸಿ ನಕ್ಕಂತೆ, ಊರನ್ನೆಲ್ಲಾ ಮಸಿಯಲ್ಲಿ ಅದ್ದಿಟ್ಟಂತೆ ಕಾಣುತ್ತಿದ್ದ ಕತ್ತಲು ಭೂತ ಭಯಂಕರವೆನಿಸಿ, ಬಾವಿಯೊಳಗೆ ಕರಗುತ್ತಿದ್ದ ಮೋಡಗಳು ನನ್ನನ್ನೇ ನುಂಗಲು ಸಂಚು ಹಾಕುತ್ತೀರುವಂತೆ ಅನಿಸಿ ಅಳುತ್ತಾ ಓಡಿ ಹೋಗಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ತಪ್ಪೊಪ್ಪಿಕೊಂಡು ಹಗುರಾಗಿದ್ದೆ.


ಮೂರು ದಶಕಗಳ ನಂತರ ಅಂತದ್ದೇ ಒಂದು ದಿಗಿಲು ಭಯ ಭ್ರಮೆ ಅಳುಕು ಒಟ್ಟಿಗೆ ಸೇರಿ ನೆತ್ತಿ ಮೇಲೆ ಕೂತು ಕುತ್ತಿಗೆ ಹಿಸುಕಿದ ಹಾಗಾಗಿದೆ. ಆಯಾಸವೆಂದು ಇಳಿಸಂಜೆ ಹೊತ್ತಿಗೆ ದಿಂಬಿಗೆ ತಲೆ ಇಟ್ಟರೇ ಕನಸಲ್ಲಿ ಒಂದು ಹಾವು ಸೆಡೆಬಿಚ್ಚಿ ಮೊಗ್ಗುಲಲ್ಲಿ ಬುಸುಗುಡುತ್ತಾ ತಲೆಯಾಡಿಸುತ್ತದೆ ಸರಕ್ಕನೆ ಎದ್ದು ಕೂತರೆ ಯಮದೂತನ ಕಪ್ಪು ಕಣ್ಣು ಗುಡ್ಡೆಯಂತಾ ಕತ್ತಲು. ಆ ಹೊತ್ತಿಗೆಲ್ಲಾ ಎದೆಯಲ್ಲಿ ಉರಿಯುತ್ತಿದ್ದ ಹಣತೆಯೂ ನಂದಿ ಹೋದಂತಾಗಾಗಿ ನನ್ನನ್ನು ಬಿಟ್ಟಿದ್ದ ಬಾವಿ, ಆ ಮೋಡ ಇಂದು ನುಂಗಲು ಬಂದೇ ಬಿಟ್ಟಂತೆ ಅನಿಸಿ ದೇವರ ಕೋಣೆಯ ದೀಪ ಹಚ್ಚಿ ಕಣ್ಮುಚ್ಚಿ ಅಮ್ಮನ ಬೆಳ್ಳನೆಯ ಮುಖ ವಿಸ್ತಾರ ಹಣೆಯ ಮೇಲಿನ ಕಾಸಗಲ ಕುಂಕುಮವನ್ನು ಕಣ್ಮುಂದೆ ಎಳೆದುಕೊಂಡು ಅತ್ತರೂ ಹಗುರಾಗಲಾರೆ.


Leave a Reply

Back To Top