ಜ್ಯೋತಿ ಕುಮಾರ್.ಎಂ(ಜೆ.ಕೆ.)-ಜಗವನಾಳೋ ದೊರೆ

ಕಾವ್ಯ ಸಂಗಾತಿ

ಜ್ಯೋತಿ ಕುಮಾರ್.ಎಂ(ಜೆ.ಕೆ.)

ಜಗವನಾಳೋ ದೊರೆ

ಜಗವನಾಳೋ ದೊರೆ
ಕೇಳಿಸದೇ ನಮ್ಮ ಮೊರೆ.
ಪಾಲಿಸು ದಯಪಾಲಿಸು
ಅಂಧರ ಈ ಬಾಳಲ್ಲಿ
ಬೆಳಕನು ನೀ ದಯಪಾಲಿಸು||1||

ಪರಮ ಪಾಪದ ಕೊಡ
ತುಂಬಿ ತುಳಕುತಲಿದೆ.
ನಿನ್ನ ಪಾದದ ಧೂಳಿನ
ಸ್ಪರ್ಶ ಮಾತ್ರದಿಂ ನಮ್ಮ
ಅಳಿಸು ಪಾಪವಳಿಸು||2||

ಕಾಲಡಿ ಮೆಟ್ಟಿಲು ಆಗಿರುವೆ
ನೀ ಗರ್ಭಗುಡಿಯ ಮೂರ್ತಿಯು.
ದಿನವೂ ತುಳಿದು ಪಾಪ ಕಳೆ
ಉಳಿ ಪೆಟ್ಟಿಗಂಜಿದ ಮೆಟ್ಟಿಲು ನಾ
ಶಿಲ್ಪಿಯ ಸುಂದರ ಕಲಾಕೃತಿಯು ನೀ||3||

ನಿನ್ನೀ ಪಾದಕೆ ದಿನವೂ ಅರ್ಪಿತ
ಮಲ್ಲಿಗೆ ಜಾಜಿ ಕನಕಾಂಬರ ಸೇವಂತಿಗೆ
ಪಾರಿಜಾತ ಕೇದಿಗೆ ಸಂಪಿಗೆ ಹಾರಗಳ
ಕಟ್ಟಿದ ದಾರವು ನಾನು ಎಂಬುವವ
ಹೂವಿನೊಂದಿಗೆ ನನ್ನೂ ಅರ್ಪಿಸಿಕೋ ತಂದೆ||4||

ಪ್ರಸಾದಾಲಂಕಾರಕ್ಕೆ ದಿನವೂ ಬರುವ
ಹಣ್ಣು ತುಪ್ಪ ಹಾಲು ಮೊಸರು
ಮೋದಕ ಕಲ್ಲುಸಕ್ಕರೆ ಜೇನು ತುಂಬಿದ
ಪಂಚಪಾತ್ರೆಯ ಪಾತ್ರ ನನ್ನದು
ಪ್ರಸಾದದೊಂದಿಗೆ ನನ್ನನ್ನೂ ಸ್ವೀಕರಿಸು ದೊರೆ||5||

ಕಲ್ಲ ಒಡೆಯಲು ಮಂಕುತಿಮ್ಮನಲ್ಲ
ತಪದಿಂ ಒಲಿಸಲು ಭಸ್ಮಾಸುರನಲ್ಲ
ಪೂಜೆಯದು ಕೈಗೊಳ್ಳಲು ರಾವಣನಲ್ಲ
ಕಣ್ಣ ಕಿತ್ತು ಕೊಡಲು ಬೇಡರವನಲ್ಲ
ತೃಣ ಸಮಾನನು ಕಾಪಾಡು ಪ್ರಭುವೆ||6||

ಅಲಂಕಾರವಾಗಲು ಪುಷ್ಪವಲ್ಲ
ಸುಗಂಧ ಬೀರಲು ಗಂಧವಲ್ಲ
ಶೋಭೆಯ ನೀಡಲು ವಸ್ತ್ರವಲ್ಲ
ನಾದವ ಮಾಡಲು ಘಂಟೆಯೂ ಅಲ್ಲ
ಒಂಭತ್ತು ತೂತಿನ ಮಡಿಕೆಗೆ ನೀನೆ ಒಡೆಯ||7||


Leave a Reply

Back To Top