ಕನಸಿನೂರಿನ ಅಪ್ಪ
ಐಶ್ವರ್ಯ ಎಲ್..
ಬೆಳಕ ಹೊತ್ತು ಬಂದ ಸೂರ್ಯನೂ ಹೋಗುವ ಹೊತ್ತಾಯಿತು
ಹೊರಗೆ ಹೋದ ಅಪ್ಪನು ಬಂದಾನೂ, ಕೈ ತುಂಬ ಬೊಂಬೆ ತಿಂಡಿಗಳ ತಂದಾನೂ
ಅವರಿವರ ಮನೆಯ ಅಪ್ಪಂದಿರಂತೆಯೇ ನನ್ನಪ್ಪನೆಂದು
ಕಣ್ಣಳತೆಗೆ ಎಟುಕುವವರೆಗೂ ಮನೆಯ ಮುಂದಿನ ಕಂಬವನೇರಿ ಕಾದು ಕುಳಿತೆ, ಬೆಳೆದು ಬುದ್ದಿಬರುವವರೆಗೆ……
ಏರಿದ ಕಂಬಕ್ಕಾದರೂ ಅರಿವಾಗಿರಬಹುದು ಅಪ್ಪನೆಂಬ ಕನಸು ಬೇರೂರಿದ್ದು ನನ್ನೊಳಗೆ,
ಅರಿವಾಗಲೇ ಇಲ್ಲ ದೇವರಿಗೆ, ಅಪ್ಪನ ಕರೆದೊಯ್ದೆಬಿಟ್ಟಿದ್ದನು
ನಂಗೆ ಬುದ್ದಿಬರುವುದರೊಳಗೆ……….
ಜಡಕು ಕೂದಲಿಗೆ ಜುಟ್ಟುಕಟ್ಟಿ, ಕಪ್ಪು ಕಾಡಿಗೆಯಲಿ ಕಾಸಗಲದ ಬೊಟ್ಟಿಟ್ಟು
ನನ್ನಿಷ್ಟದ ಫ್ರಾಕನ್ನೆ ತೊಟ್ಟು, ಕುಣಿವಾಗ ಕೆನ್ನೆಯ
ತುಂಬೆಲ್ಲಾ ಮುತ್ತಿಟ್ಟು
ಅಮ್ಮನಿಗೂ ಕದ್ದು ಮುಚ್ಚಿ ಚಾಕಲೇಟ್ ಕೊಟ್ಟು,
ಭುಜದ ಮೇಲೆ ನನ್ನ ಹೊತ್ತು
ಎಲ್ಲರಂತೆ ನನ್ನನ್ನೂ ಶಾಲೆಗೆ ಹೊತ್ತೊಯ್ಯುವುದು ಬಾಕಿ ಇತ್ತು
ಅಪ್ಪನಿಗೆ ಅದ್ಯಾವ ಕೆಲಸ ಬಾಕಿ ಇತ್ತೊ ನಾಕಾಣೆ
ಅಪ್ಪನ ಕಾಯುವಿಕೆಯಲಿ ಏರಿದ ಕಂಬ, ಇಳಿದ ನನ್ನ ಕಣ್ಣೀರಿನಲಿ ಹಸಿರಾಯ್ತು
ಇಂದಲ್ಲ ನಾಳೆ ಅಪ್ಪ ಬಂದೇ ಬರುವನೆಂಬ
ನಂಬಿಕೆ ಮಾತ್ರ ಹುಸಿಯಾಯ್ತು……
ಪುಟ್ಟ ಹೆಜ್ಜೆ ಇಟ್ಟಾಗ ಅಂಗಾಲಿಗೆ ಮುತ್ತಿಕ್ಕಿ,
ಬೊಗಸೆಯಲಿ ಪಾದ ಹಿಡಿದು,
ಅಮ್ಮ ಗದರಿದಾಗ ಅಮ್ಮನಿಗೇನೆ ಗದರಿಸಿ
ನಿನ್ನ ಎದೆಗಪ್ಪಿ ನಾ ಮಲಗಿದಾಗ ಸುರಿದ ಜೊಲ್ಲು ಒರೆಸಿ
ಉಪ್ಪು ಮೂಟೆಯ ಮಾಡಿ, ಊರೆಲ್ಲ ತಿರುಗಿಸಿ, ಮುದ್ದಿಸಿ
ಕೈಬೆರಳ ಹಿಡಿದು ನಡೆಸುವುದರಿಂದ ಹಿಡಿದು ಕಾಲಿಗೆ ಕಾಲುಂಗುರ ಹಾಕಿಸಿಕೊಳ್ಳುವವರೆಗೂ
ನೀ ಜೊತೆಗಿರಬೇಕಿತ್ತೆಂಬ ಆಸೆ ಇಂದಿಗೂ ಬದುಕಿದೆ
ಆದರೇನೂ ಮಾಡುವುದು ಬಯಕೆ ಇಡೆರಿಸಲು
ನೀನೆ ಬದುಕಿಲ್ಲ ………
ನೀ ಪ್ರಪಂಚಕ್ಕೆ ತಂದ ಪುಟ್ಟ ಜೀವವೇ ನಿನಗೆ ಪ್ರಪಂಚವೆಂದು
ಪ್ರತಿ ಹೆಜ್ಜೆಯಲು ಮಗಳ ಮುಂದಿನ ಭವಿಷ್ಯಕ್ಕೆಂದು
ರಾಣಿಯಂತೆ ಬೆಳೆದ ಮಗಳಿಗೆ, ರಾಜಕುಮಾರನ ತಂದು
ಮದುವೆ ಮಾಡುವ ಕನಸ ಕಂಡು, ಮಗಳು,
ಅಳಿಯ ಮೊಮ್ಮಕ್ಕಳೆಂದು
ಅಜ್ಜನಾಗುವವರೆಗೂ ನೀನಿರಬೇಕಿತ್ತು ಅಪ್ಪ……
ನಾನೂ ದೊಡ್ಡವಳಾಗಿದ್ದೇನೆ, ನಿನ್ನಷ್ಟೇ ಎತ್ತರಕ್ಕೆ ಬೆಳೆದು
ನೀನಿರಬೇಕಿತ್ತೆಂಬ ಬಯಕೆಯು ನನ್ನಷ್ಟೆತ್ತರಕೆ
ಬೆಳೆದಿದೆ ನನ್ನೊಟ್ಟಿಗೆ ಕಾದು
ಆದರೂ….. ಅಪ್ಪ ನೀನಿರಬೇಕಿತ್ತು ನನ್ನೊಟ್ಟಿಗೆ……
ಅಜ್ಜನಾಗಿ ನನ್ನಂಥವಳನ್ನೆ ಹೆಗಲ ಮೇಲೆ ಹೊರುವವರೆಗೆ…..
**********